57ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಸಲ್ಮಾನ್ ಖಾನ್ ಸಹೋದರ, ಅರ್ಬಾಜ್ ಖಾನ್‌ಗೆ ಒಟ್ಟು ಮಕ್ಕಳೆಷ್ಟು ?
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ತಮ್ಮ 57ನೇ ವಯಸ್ಸಿನಲ್ಲಿ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದಾರೆ.
ಹೌದು, 2023 ಡಿಸೆಂಬರ್ 24ರಂದು ಅರ್ಬಾಜ್ ಖಾನ್ ತಮ್ಮ ಮಾಜಿ ಪತ್ನಿ ಮಲೈಕಾ ಅರೋರಾ ಅವರನ್ನು ಮರೆತು ತನಗಿಂತ 22 ವರ್ಷ ಚಿಕ್ಕವಳಾದ ಶುರಾ ಖಾನ್ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದರು. ಮುಂಬೈನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ಮದುವೆಯಾಗಿ ಎರಡು ವರ್ಷಗಳ ನಂತರ ಶುರಾ ಖಾನ್ ಗರ್ಭಿಣಿಯಾಗಿದ್ದಾರೆ. 57ರ ಹರೆಯದಲ್ಲಿ ಅರ್ಬಾಜ್ ಖಾನ್ ಮತ್ತೊಮ್ಮೆ ತಂದೆಯಾಗುತ್ತಿದ್ದಾರೆ. ಖುದ್ದು ಅರ್ಬಾಜ್ ಖಾನ್ ಈ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ನಾನು ಮತ್ತೊಮ್ಮೆ ತಂದೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅರ್ಬಾಜ್ ಖಾನ್, ನಾನು ಮತ್ತೆ ತಂದೆಯಾಗುತ್ತಿದ್ದೇನೆ, ಶುರಾ ಗರ್ಭಿಣಿ ಎನ್ನುವ ಸುದ್ದಿ ಇದೆ. ನಾನು ಅದನ್ನು ತಳ್ಳಿ ಹಾಕುತ್ತಿಲ್ಲ ಎಂದಿದ್ದಾರೆ. ನನ್ನ ಕುಟುಂಬಕ್ಕೆ ವಿಚಾರ ಗೊತ್ತು ಮತ್ತು ಜನರಿಗೆಲ್ಲ ಈ ವಿಚಾರ ಗೊತ್ತು ಅಂದರೆ ನನಗೇನು ಸಮಸ್ಯೆ ಇಲ್ಲ ಎಂದು ಹೇಳಿರುವ ಅರ್ಬಾಜ್ ಸದ್ಯ ನಮ್ಮ ಬದುಕಿನ ರೋಮಾಂಚಕ ಘಟ್ಟದಲ್ಲಿದ್ದೇವೆ, ತುಂಬಾನೇ ಉತ್ಸುಕರಾಗಿದ್ದೇವೆ, ತುಂಬಾ ಸಂತೋಷದಿಂದ ಇದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದು ಸಹಜವಾಗಿ ಎಲ್ಲರಂತೆ ಈ ಸಮಯದಲ್ಲಿ ನನ್ನಲ್ಲಿ ಕೂಡ ಚೂರು ಭಯ ಇದೆ ಆತಂಕ ಇದೆ ಎಂದಿರುವ ಅರ್ಬಾಜ್ ಖಾನ್, ಕೆಲ ದಿನಗಳ ನಂತರ ನಾನು ತಂದೆಯಾಗುತ್ತೇನೆ ಇದು ನನಗೆ ಮತ್ತೆ ಹೊಸ ಅನುಭವ ಎಂದು ಹೇಳಿದ್ದಾರೆ. ಆ ದಿನಕ್ಕೆ ನಾನು ಎದುರು ನೋಡುತ್ತಿದ್ದೇನೆ, ನನ್ನ ಜವಾಬ್ದಾರಿ ಈಗ ಇನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಶುರಾ ಖಾನ್ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದವರು. ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅವರ ಪುತ್ರಿ ರಾಶಾ ಟಂಡನ್ ಗೆ ಇವರೇ ಖಾಯಂ ಆಗಿ ಮೇಕಪ್ ಮಾಡುತ್ತಿದ್ದರು.
ಹೀಗಾಗಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಪಾಟ್ನಾ ಶುಕ್ಲಾ'ದ ಚಿತ್ರೀಕರಣದ ಸಮಯದಲ್ಲಿ ಅರ್ಬಾಜ್‌ಗೆ ಶುರಾ ಪರಿಚಯವಾಗಿದ್ದರು. 'ಪಾಟ್ನಾ ಶುಕ್ಲಾ'ಗೆ ಅರ್ಬಾಜ್ ನಿರ್ಮಾಪಕರಾದ ಹಿನ್ನೆಲೆ ಮೇಲಿಂದ ಮೇಲೆ ಭೇಟಿಯಾಗಲು ಶುರು ಮಾಡಿದ್ದರು.
ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹಕ್ಕೆ ತಿರುಗಿತು. ಆ ನಂತರ ಕೆಲವೇ ದಿನಗಳಲ್ಲಿ ಪ್ರೇಮಾಂಕುರವಾಯಿತು. ಅಷ್ಟೊತ್ತಿಗಾಗಲೇ ಅರ್ಬಾಜ್ ಖಾನ್ ಅವರಿಂದ ಮಲೈಕಾ ಅರೋರಾ ದೂರವಾಗಿದ್ದರು.
ಮಲೈಕಾ ಮತ್ತು ಅರ್ಬಾಜ್ ಖಾನ್ ಅವರ 19 ವರ್ಷಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಅರ್ಹಾನ್ ಎಂಬ ಮಗ ಇದ್ದಾನೆ. ಅರ್ಹಾನ್‌ಗೆ ಈಗ 22 ವರ್ಷ. ವಿಶೇಷ ಅಂದರೆ ಅರ್ಬಾನ್ ಖಾನ್ ಮತ್ತು ಶುರಾ ಖಾನ್ ನಡುವೆ ಕೂಡ 22 ವರ್ಷಗಳ ಅಂತರ ಇದೆ. ಅರ್ಬಾಜ್ ಖಾನ್‌ಗೆ ಈಗ 57 ವರ್ಷವಾದರೆ ಶುರಾ 35ರ ಪ್ರಾಯದ ಚೆಲುವೆ.
ಇನ್ನುಳಿದಂತೆ ಅರ್ಬಾಜ್ ಖಾನ್ ಮತ್ತು ಶುರಾ ಮದುವೆಯಲ್ಲಿ ಅರ್ಬಾಜ್ ಖಾನ್ ಮೊದಲ ಪತ್ನಿ ಮಲೈಕಾ ಅರೋರಾ ಕೂಡ ಭಾಗವಹಿಸಿದ್ದರು.ರವೀನಾ ಟಂಡನ್ ಮತ್ತು ಮಗಳು ರಾಶಾ ಥಡಾನಿ, ರಿದ್ಧಿಮಾ ಪಂಡಿತ್, ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ ದೇಶಮುಖ್ ಕೂಡ ನಿಖಾದಲ್ಲಿ ಭಾಗಯಾಗಿದ್ದರು. ಸಲ್ಮಾನ್ ಖಾನ್ ಸೇರಿ ಕುಟುಂಬ ವರ್ಗದವರೆಲ್ಲ ಹಾಜರಿದ್ದರು. ತಂದೆಯ ಎರಡನೇ ಮದುವೆಯಲ್ಲಿ ಮಗ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದ.


Click it and Unblock the Notifications











