ಸುಶಾಂತ್ ಸಿಂಗ್ ಸಾವಿಗೆ ಮುನ್ನ, ಬಳಿಕ ರಿಯಾಗೆ 'ಎಯು' ಎಂಬಾತನಿಂದ 44 ಕರೆ! ಯಾರದು 'ಎಯು'?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಆದರೆ ಅವರ ಸಾವಿನ ಕಾರಣ ಇನ್ನೂ ನಿಗೂಢ.
2020 ರ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಮೃತದೇಹ ದೊರೆತಿತ್ತು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಆದರೆ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರಲಿಲ್ಲ.
ಸುಶಾಂತ್ ನಿಧನ ಹೊಂದುವ ಕೆಲವು ದಿನಗಳ ಹಿಂದಷ್ಟೆ ಅವರ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಅವರಿಂದ ದೂರವಾಗಿದ್ದರು. ಆಕೆಯೇ ಸುಶಾಂತ್ ಕೊಲೆ ಮಾಡಿದ್ದಾಳೆ ಎನ್ನಲಾಯ್ತು. ರಿಯಾ ವಿರುದ್ಧ ಹಲವು ಆರೋಪಗಳನ್ನು ಮಾಡಲಾಯ್ತು. ಸುಶಾಂತ್ ಕುಟುಂಬದವರು ಸಹ ರಿಯಾ ಚಕ್ರವರ್ತಿ ವಿರುದ್ಧ ಬಿಹಾರ ಪೊಲೀಸರಿಗೆ ದೂರು ನೀಡಿದರು.

44 ಬಾರಿ ಕರೆ ಮಾಡಿದ್ದ ಎಯು
ಸುಶಾಂತ್ ಕೊಲೆ ತನಿಖೆಯನ್ನು ಮುಂಬೈ ಪೊಲೀಸರು, ಬಿಹಾರ ಪೊಲೀಸರು ಬಳಿಕ ಸಿಬಿಐನವರು ಕೈಗೆತ್ತಿಕೊಂಡರು. ಸಿಬಿಐ ತನಿಖೆ ಇನ್ನೂ ಜಾರಿಯಲ್ಲಿದೆ. ತನಿಖೆ ವೇಳೆ ರಿಯಾ ಚಕ್ರವರ್ತಿಗೆ 'ಎಯು' ಎಂಬುವರಿಂದ 44 ಬಾರಿ ಕರೆ ಬಂದಿರುವುದು ಬೆಳಕಿಗೆ ಬಂದಿತ್ತು. ಈ ಎಯು ಯಾರು ಎಂಬ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆದಿದೆ.

ಲೋಕಸಭೆಯಲ್ಲಿ ಗದ್ದಲ
ಮಹಾರಾಷ್ಟ್ರದ ಕೆಲವು ಬಿಜೆಪಿ ಸಂಸದರು ಹಾಗೂ ಆಡಳಿತಾರೂಢ ರೆಬೆಲ್ ಶಿವಸೇನೆಯ ಕೆಲವು ಸಂಸದರು, ರಿಯಾ ಚಕ್ರವರ್ತಿಗೆ ಕರೆ ಮಾಡಿರುವ ಆ 'ಎಯು' ಎಂಬುದು ಬಹಿರಂಗಗೊಳ್ಳಬೇಕು ಎಂದು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದರು. ರಿಯಾ ಚರ್ಕವರ್ತಿಗೆ ಕರೆ ಮಾಡಿದ್ದ ಆ ಎಯು ಯಾರು ಎಂಬುದು ಬಹಿರಂಗ ಪಡಿಸಬೇಕು ಎಂದು ಪಟ್ಟು ಹಿಡಿದರು. 'ವೂ ಈಸ್ ಎಯು?' ಎಂಬ ಪ್ಲಕಾರ್ಡ್‌ಗಳನ್ನು ಸಹ ಪ್ರದರ್ಶಿಸಿದರು.

ಎಯು ಯಾರು?
ರಿಯಾ ಚಕ್ರವರ್ತಿ 'ಎಯು' ಹೆಸರಿನಲ್ಲಿ ವ್ಯಕ್ತಿಯೊಬ್ಬರ ಹೆಸರು ಸೇವ್ ಮಾಡಿಕೊಂಡಿದ್ದರು. ಆತ ಸುಶಾಂತ್ ಸಾವಿಗೆ ಮುನ್ನ ಹಾಗೂ ನಂತರ ಹಲವು ಬಾರಿ ರಿಯಾ ಚಕ್ರವರ್ತಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಈ ಎಯು, ಆದಿತ್ಯ ಠಾಕ್ರೆ ಎನ್ನಲಾಗುತ್ತಿದೆ. ಆದಿತ್ಯ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಮತ್ತು ಮಾಜಿ ಸಚಿವ. ಆದರೆ ಸಿಬಿಐ ಇದನ್ನು ಇನ್ನೂ ಖಚಿತಪಡಿಸಿಲ್ಲ. ಅಲ್ಲದೆ ಸಿಬಿಐ ತನ್ನ ತನಿಖಾ ವರದಿಯನ್ನು ಇನ್ನಷ್ಟೆ ಸಲ್ಲಿಸಬೇಕಿದೆ.

ರಿಯಾ ಚಕ್ರವರ್ತಿಯ ವಿರುದ್ಧ ಹಲವು ಆರೋಪ
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದ್ದರು. ಅವರ ಸಾವಿನ ಸುತ್ತ ಹಲವು ಅನುಮಾನಗಳು ಈಗಲೂ ಇವೆ. ರಿಯಾ, ಸುಶಾಂತ್ ಅನ್ನು ಕೊಂದಿದ್ದಾಳೆ ಎಂದು ಸುಶಾಂತ್ ಕುಟುಂಬದವರು ದೂರು ನೀಡಿದ್ದರೆ, ಸ್ವತಃ ರಿಯಾ ಚಕ್ರವರ್ತಿ, ಸುಶಾಂತ್ ಅಕ್ಕನೇ ಪ್ರಿಸ್ಕ್ರಿಪ್ಷನ್ ಇಲ್ಲದ ಮಾತ್ರೆಗಳನ್ನು ನೀಡಿ ಸುಶಾಂತ್ ಖಿನ್ನತೆಗೆ ಜಾರುವಂತೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಸುಶಾಂತ್ ಸಾವಿನ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣವಂತೂ ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಈ ಪ್ರಕರಣದಲ್ಲಿ ಸ್ವತಃ ರಿಯಾ ಚಕ್ರವರ್ತಿ, ಆಕೆಯ ಸಹೋದರ ಸೇರಿದಂತೆ ಹಲವರು ಜೈಲು ಸೇರಿದರು. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಇನ್ನೂ ಹಲವರ ವಿಚಾರಣೆ ನಡೆಯಿತು.


Click it and Unblock the Notifications











