ಮಕ್ಕಳಿಗೆ ತಪ್ಪಾದ ರಾಮಾಯಣ ತೋರಿಸಲ್ಲ ಎಂದು ಆದಿಪುರುಷ್ ಬುಕಿಂಗ್ ಕ್ಯಾನ್ಸಲ್ ಮಾಡಿದ ಪ್ರೇಕ್ಷಕರು!
ನಿನ್ನೆಯಷ್ಟೇ ( ಜೂನ್ 16 ) ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿದೆ. ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ಇದಾಗಿದ್ದು, ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂಗೂ ಸಹ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ.
ಇನ್ನು ಚಿತ್ರಕ್ಕೆ ಬಿಡುಗಡೆಯಾಗುವ ಮುನ್ನ ಯಾವ ರೀತಿ ಕೆಟ್ಟ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವೋ ಅದೇ ರೀತಿ ಬಿಡುಗಡೆಯಾದ ಬಳಿಕವೂ ಸಹ ಕಳಪೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಚಿತ್ರದಲ್ಲಿ ಹಲವಾರು ಅಂಶಗಳು ಸರಿ ಇಲ್ಲ ಎಂದು ಆರೋಪಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಚಿತ್ರದ ವಿಎಫ್ಎಕ್ಸ್ ಹೀನಾಯವಾಗಿ ಟ್ರೋಲ್ ಆಗುತ್ತಿದೆ. 500 ಕೋಟಿ ಬಜೆಟ್ ಸುರಿದು ಇಂತಹ ಕಳಪೆ ಚಿತ್ರ ಮಾಡಿದ್ದಾರಲ್ಲ ಎಂದು ಹೀಯಾಳಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿನ ಪಾತ್ರಗಳ ವೇಷಭೂಷಣದ ಬಗ್ಗೆಯಂತೂ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಆದರೆ ಕೆಲವೊಂದು ಕಡೆ ಪ್ರಭಾಸ್ ರಾಮನ ಹಾಗೆ ಕಾಣುವುದೇ ಇಲ್ಲ ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ದೃಶ್ಯವೊಂದರಲ್ಲಿ ಪ್ರಭಾಸ್ ಧರಿಸಿರುವ ಬಿಳಿ ವಸ್ತ್ರ ಕ್ರೈಸ್ತರು ಧರಿಸುವ ರೀತಿ ಇದೆ ಎಂದು ಟ್ರೋಲ್ ಮಾಡಲಾಗ್ತಿದೆ.
ಇನ್ನು ಸೀತೆ ಪಾತ್ರದಲ್ಲಿ ನಟಿಸಿರುವ ಕೃತಿ ಸೆನನ್ ಸೀರೆಯುಟ್ಟ ರೀತಿ ಬಗ್ಗೆ ಸಹ ವಿರೋಧ ವ್ಯಕ್ತವಾಗಿದೆ. ಸೀತೆ ಹೆಚ್ಚಾಗಿ ತಲೆಗೆ ಸೆರಗನ್ನು ಧರಿಸಿರುತ್ತಾರೆ, ಆದರೆ ಇಲ್ಲಿ ಕೃತಿ ಸೆನನ್ ತಲೆ ಮೇಲೆ ಹೆಚ್ಚಿನ ದೃಶ್ಯಗಳಲ್ಲಿ ಸೆರಗನ್ನು ಧರಿಸಿಲ್ಲ. ಅಲ್ಲದೇ ಅನೇಕ ಕಡೆ ಹಾಫ್ ಬ್ಲೌಸ್ ಧರಿಸಿದ್ದಾರೆ ಎಂದು ವಿರೋಧಿಸಿದ್ದಾರೆ.
ರಾವಣನ ಪಾತ್ರವೂ ಸಹ ಟ್ರೋಲ್‌ನಿಂದ ಹೊರತಾಗಿಲ್ಲ. ರಾವಣನ ಹತ್ತು ತಲೆ ಒಂದೇ ಸಮನೆ ಇತ್ತು ಎಂದು ನಂಬಿರುವ ಪ್ರೇಕ್ಷಕರಿಗೆ ಓಂ ರಾವತ್ ಮೇಲೆ ಐದು ತಲೆ ಹಾಗೂ ಅದರ ಕೆಳಗೆ ಐದು ತಲೆಗಳನ್ನು ತೋರಿಸಿ ಹೊಸ ರಾವಣ ಅವತಾರವನ್ನು ಪರಿಚಯಿಸಿದ್ದಾರೆ.
ಹನುಮಂತನ ಅವತಾರದ ಬಗ್ಗೆ ಸಹ ಚಿತ್ರ ಬಿಡುಗಡೆಯಾಗುವ ಮುನ್ನ ವ್ಯಕ್ತವಾಗಿದ್ದ ರೀತಿಯೇ ವಿರೋಧ ವ್ಯಕ್ತವಾಗಿದೆ. ಇನ್ನು ಉಳಿದ ಪಾತ್ರಗಳಲ್ಲಿಯೂ ಸಹ ಒಂದಲ್ಲಾ ಒಂದು ತಪ್ಪನ್ನು ಸಿನಿ ರಸಿಕರು ಹುಡುಕುತ್ತಿದ್ದು, ರಾಮಾಯಣವನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ.
ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಈ ರೀತಿಯ ವಿಮರ್ಶೆಗಳು ವ್ಯಕ್ತವಾಗುತ್ತಿದ್ದಂತೆ ಹಲವರು ಚಿತ್ರ ನೋಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮುಂಚಿತವಾಗಿ ಬುಕ್ ಮಾಡಿದ್ದ ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡುತ್ತಿದ್ದಾರೆ. ಹೀಗೆ ಕ್ಯಾನ್ಸಲ್ ಮಾಡುತ್ತಿರುವ ಬಹುತೇಕರು 'ನಮ್ಮ ಮಕ್ಕಳಿಗೆ ತಪ್ಪಾದ ರಾಮಾಯಣವನ್ನು ತೋರಿಸಲು ಇಚ್ಛಿಸುವುದಿಲ್ಲ. ಹೀಗಾಗಿ ಟಿಕೆಟ್ ಕ್ಯಾನ್ಸಲ್ ಮಾಡುತ್ತಿದ್ದೇವೆ' ಎಂದು ಬರೆದುಕೊಂಡು ಟಿಕೆಟ್ ಕ್ಯಾನ್ಸಲ್ ಮಾಡಿರುವ ಫೋಟೊ ಹಂಚಿಕೊಂಡಿದ್ದಾರೆ.
ಇನ್ನು ಇಲ್ಲಿ ಕ್ಯಾನ್ಸಲ್ ಆಗಿರುವ ಟಿಕೆಟ್‌ಗಳನ್ನು ಫ್ಯಾಮಿಲಿ ಆಡಿಯನ್ಸ್ ಬುಕ್ ಮಾಡಿದ್ದರು. 1000+ ಹಾಗೂ 2000+ ಮೊತ್ತದ ಟಿಕೆಟ್‌ಗಳನ್ನು ರದ್ದು ಮಾಡಿದ್ದು, ಇದು ಚಿತ್ರದ ಮೇಲೆ ಕಲೆಕ್ಷನ್ ಮೇಲೆ ಖಂಡಿತವಾಗಿ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು. ಅಲ್ಲದೇ ಈ ಟ್ವೀಟ್‌ಗಳನ್ನು ನೋಡಿದ ಬಳಿಕ ಉಳಿದ ಕೆಲ ಸಿನಿಕರೂ ಸಹ ತಾವೂ ಇಂತಹದ್ದೇ ನಿರ್ಧಾರ ಮಾಡ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











