ಕಳೆದ 15 ವರ್ಷದಲ್ಲಿ ಇಂತಹ ಹೀನಾಯ ಸೋಲನ್ನು ಕಂಡಿರಲಿಲ್ಲ ಈ ಸೂಪರ್ ಸ್ಟಾರ್...!
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾಗಳನ್ನು ನೋಡಲು ಗ್ರಾಮೀಣ ಪ್ರದೇಶದವರು ಬಂಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ದೂರ ದೂರಕ್ಕೆ ನೋಡಿದರೂ ಪ್ರೇಕ್ಷಕರು ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು .. ಇಲ್ಲೊಂದು .. ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಚಿತ್ರಮಂದಿರ ಅಪರೂಪಕ್ಕೆ ಭರ್ತಿಯಾಗುತ್ತೆ.
ಕೇವಲ ಕನ್ನಡ ಚಿತ್ರರಂಗ ಮಾತ್ರ ಅಲ್ಲ ಎಲ್ಲ ಭಾಷೆಯಲ್ಲಿ ಇದೇ ಸಮಸ್ಯೆ ಎದುರಾಗಿದೆ. ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ಸಾಲು ಸಾಲು ಸಿನಿಮಾ ಮಕಾಡೆ ಮಲಗುತ್ತಿವೆ. ಸಹಜವಾಗಿ ಕೇವಲ ಅಕ್ಷಯ್ ಕುಮಾರ್ ಮಾತ್ರ ಅಲ್ಲ, ಸೋಲಿನ ಸುಳಿಯಲ್ಲಿ ಸಿಲುಕಿರುವುದಕ್ಕೆ ಬಾಲಿವುಡ್ಡಿಗೆ ಬಾಲಿವುಡ್ಡೇ ಚಿಂತೆಯಲ್ಲಿ ಮುಳುಗಿದೆ. ಹೀಗಿರುವಾಗ ಗಾಯದ ಮೇಲೆ ಬರೆ ಎಳೆಯುವಂತೆ ಅಜಯ್ ದೇವಗನ್ ಅಭಿನಯದ ಹೊಸ ಸಿನಿಮಾ ಕೂಡ ಸೋತು ಸುಣ್ಣವಾಗಿದೆ.

ಹೌದು, ನಿನ್ನೆ.. ಅಜಯ್ ದೇವಗನ್ ಮತ್ತು ಟಬು ಅಭಿನಯದ 'ಔರೋ ಮೇ ಕಹಾ ಧಮ್ ಥಾ' ಸಿನಿಮಾ ಬಿಡುಗಡೆಯಾಗಿದೆ. ಆದರೆ, ಚಿತ್ರದಲ್ಲಿ ಸ್ಟಾರ್ ಹೀರೋ ಮತ್ತು ಹೀರೋಯಿನ್ ಇಬ್ಬರೂ ಇದ್ದರು, ಇಂತಹದ್ದೊಂದು ಸಿನಿಮಾ ತೆರೆಗೆ ಬಂದಿದೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿದ್ದಂತೆ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 'ಔರೋ ಮೇ ಕಹಾ ಧಮ್ ಥಾ' ಸಿನಿಮಾ ಮೊದಲ ದಿನ ಎರಡು ಕೋಟಿಯನ್ನ ಗಳಿಸುವಲ್ಲಿಯೂ ಕೂಡ ವಿಫಲವಾಗಿದೆ. ಅಜಯ್ ದೇವಗನ್ ಅವರ ವೃತ್ತಿ ಬದುಕಿನಲ್ಲಿಯೇ ಮೊದಲ ದಿನ ಅತ್ಯಂತ ಕಳಪೆ ಪ್ರದರ್ಶನ ಕಂಡ ಸಿನಿಮಾ ಎಂಬ ಬೇಡದ ದಾಖಲೆಯನ್ನೂ ಕೂಡ ಈ ಸಿನಿಮಾ ಬರೆದಿದೆ.
ಹೌದು, ನಿಮಗೆ ಗೊತ್ತಿರಲಿ.. 2009ರಲ್ಲಿ ಅಜಯ್ ದೇವಗನ್ ಅಭಿನಯದ ''ಆಲ್ ದಿ ಬೆಸ್ಟ್'' ಸಿನಿಮಾ ತೆರೆಗೆ ಬಂದಿತ್ತು. ರೊಹೀತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಆ ಕಾಲಕ್ಕೆ ಮೊದಲ ದಿನ 1.82 ಕೋಟಿಯನ್ನೂ ಗಳಿಸಿತ್ತು. ಈ ಮೂಲಕ ಅಜಯ್ ದೇವಗನ್ ಅವರ ಸುಧೀರ್ಘ ಪ್ರಯಾಣದಲ್ಲಿಯೇ ಮೊದಲ ದಿನ ಅತ್ಯಂತ ಕಡಿಮೆ ಹಣ ಸಂಪಾದಿಸಿದ ಸಿನಿಮಾ ಎಂಬ ಅಪಖ್ಯಾತಿಗೆ ಪಾತ್ರವಾಗಿತ್ತು. ಈಗ 'ಔರೋ ಮೇ ಕಹಾ ಧಮ್ ಥಾ' ಈ ದಾಖಲೆಯನ್ನೂ ಮುರಿದಿದೆ. ಅಜಯ್ ದೇವಗನ್ ಫಿಲ್ಮೋಗ್ರಫಿಗೆ ಕಪ್ಪು ಚುಕ್ಕೆಯಾಗಿದೆ.

ಅಂದ್ಹಾಗೇ ಅಜಯ್ ದೇವಗನ್ ಮತ್ತು ಟಬು ಎಂಬ ಇಬ್ಬರು ಸೂಪರ್ ಸ್ಟಾರ್‌ಗಳಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು ಹೊಸ ನಿರ್ದೇಶಕರಲ್ಲ. ಬದಲಿಗೆ ನೀರಜ್ ಪಾಂಡೆ ಅಂತಹ ಅನುಭವಿ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದೆ ಅಕ್ಷಯ್ ಕುಮಾರ್‌ಗೆ ''ಬೇಬಿ'' ಮತ್ತು ''ಸ್ಪೆಷಲ್ 26'' ಅಂತಹ ಹಿಟ್ ಚಿತ್ರಗಳನ್ನೂ ನೀಡಿರುವ ನೀರಜ್ ಪಾಂಡೆ, ''ಎಮ್.ಎಸ್.ಧೋನಿ'' ಜೀವನಕಥೆಯನ್ನೂ ಕೂಡ ನಿರ್ದೇಶಿಸಿದವರು. ಗೆದ್ದವರು. ಇನ್ನೂ ಓಟಿಟಿಯಲ್ಲಿ ಇವರ ನಿರ್ದೇಶನದ ವೆಬ್ ಸರಣಿಗಳಿಗೆ ಇರುವ ಬೇಡಿಕೆಯೇ ಬೇರೆ.
ಇಂಥಾ ಸ್ಟಾರ್ ಡೈರೆಕ್ಟರ್ ನೀರಜ್ ಪಾಂಡೆ ನಿರ್ದೇಶನದ ಚಿತ್ರ 'ಔರೋ ಮೇ ಕಹಾ ಧಮ್ ಥಾ' ವನ್ನು ಪ್ರೇಕ್ಷಕರು ಸಾರಾಸಗಾಟವಾಗಿ ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ಹೀಗಾಗಿಯೇ ಬೆಚ್ಚಿ ಬಿದ್ದಿರುವ ಬಾಲಿವುಡ್ ಇನ್ನೂ ಯಾವ ತರಹದ ಸಿನಿಮಾಗಳನ್ನೂ ಮಾಡಬೇಕೆಂದು ಚರ್ಚೆಯನ್ನು ಮಾಡುತ್ತಿದೆ. ಅಕ್ಷಯ್ ಕುಮಾರ್ ಅವರಂತೆ ಅಜಯ್ ದೇವಗನ್ ಕೂಡ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರಾ ಅನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಶೈತಾನ್ ಸಿನಿಮಾ ಹೊರತು ಪಡಿಸಿದರೆ, ನಿರೀಕ್ಷೆಯನ್ನೂ ಮೂಡಿಸಿದ್ದ 'ಮೈದಾನ್' ಕೂಡ ಮಕಾಡೆ ಮಲಗಿತ್ತು.

ಒಟ್ನಲ್ಲಿ ಸದ್ಯಕ್ಕೆ 'ಔರೋ ಮೇ ಕಹಾ ಧಮ್ ಥಾ' ಚಿತ್ರದ ಗಳಿಕೆಯನ್ನು ಕಂಡು ಹಿಂದಿ ಚಿತ್ರರಂಗ ಹೈರಾಣಾಗಿದೆ. ಸೋಲಿನ ಕುರಿತು ಚಿತ್ರತಂಡ ಕೂಡ ಆತ್ಮಾವಲೋಕನವನ್ನೂ ಮಾಡಿಕೊಳ್ಳುತ್ತಿದೆ. ಇದರ ನಡುವೆ ಮೊದಲ ದಿನ ಎರಡು ಕೋಟಿಯನ್ನೂ ಗಳಿಸದ ಈ ಸಿನಿಮಾ ಸೋಮವಾರದವರೆಗೆ ಆದರೂ ಚಿತ್ರಮಂದಿರದಲ್ಲಿ ಇರುತ್ತಾ ಅನ್ನುವ ಪ್ರಶ್ನೆ ಅಜಯ್ ದೇವಗನ್ ಅವರ ಅಭಿಮಾನಿಗಳನ್ನೂ ಕಾಡುತ್ತಿದೆ.


Click it and Unblock the Notifications











