ನಟಿಯ ವಿರುದ್ಧ ಅನುಚಿತ ವರ್ತನೆ, ಭದ್ರತಾ ಅಧಿಕಾರಿಗಳ ವಿರುದ್ಧ ಪತಿಯಿಂದ ದೂರು
ಬಾಲಿವುಡ್ ನಟಿ ಹಾಗೂ ಆಕೆಯ ಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಸಿಐಎಸ್‌ಎಫ್ ಅಧಿಕಾರಿಗಳ ವಿರುದ್ಧ ನಟಿಯ ಪತಿ ದೂರು ನೀಡಿದ್ದಾರೆ.
ಬಾಲಿವುಡ್ ನಟಿ ಆಯೆಷಾ ಟಾಕಿಯಾ ಹಾಗೂ ಅವರ ಪತಿ ಫರ್ಹಾನ್ ಆಜ್ಮಿ ಹಾಗೂ ಅವರ ಪುತ್ರ ಗೋವಾದಿಂದ ಮುಂಬೈಗೆ ವಾಪಸ್ಸಾಗಬೇಕಾದರೆ ಗೋವಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಯೆಷಾ ಟಾಕಿಯಾ ಪತಿ ಫರ್ಹಾಣ್ ಆಜ್ಮಿ, ಗೋವಾ ವಿಮಾನ ನಿಲ್ದಾಣದಲ್ಲಿ ಆರ್‌ಪಿ ಸಿಂಗ್, ಎಕೆ ರಾವತ್ ಹಾಗೂ ಕಮಾಂಡರ್ ರೌಟ್ ಬಹದ್ದೂರ್ ಅವರುಗಳು ನಮ್ಮನ್ನು ಉದ್ದೇಶಪೂರ್ವಕವಾಗಿ ತಡೆದರು. ಬಳಿಕ ನನ್ನ ಹೆಸರನ್ನು ಜೋರಾಗಿ ಎಲ್ಲರಿಗೂ ಕೇಳುವಂತೆ ಹೇಳಿ ನನ್ನನ್ನು ಲೈನ್‌ನಿಂದ ಹೊರಗೆ ನಿಲ್ಲುವಂತೆ ಹೇಳಿದರು'' ಎಂದು ಫರ್ಹಾನ್ ಆಜ್ಮಿ ಬರೆದುಕೊಂಡಿದ್ದಾರೆ.

''ಬಳಿಕ ಒಬ್ಬ ಅಧಿಕಾರಿ ನನ್ನ ಪತ್ನಿಯನ್ನು ಕೆಟ್ಟದಾಗಿ ಮುಟ್ಟಿ ದೂರ ತಳ್ಳಿದ, ಅಲ್ಲದೆ ಕೆಟ್ಟದಾಗಿ ಲೈಂಗಿಕತೆಗೆ ಸಂಬಂಧ ಜೋಕ್ ಒಂದನ್ನು ಹೇಳಿದ. ಇದರಿಂದ ಸಿಟ್ಟಾದ ನಾನು ''ನನ್ನ ಪತ್ನಿಯನ್ನು ಅಥವಾ ಯಾವುದೇ ಹೆಣ್ಣು ಮಕ್ಕಳನ್ನು ಹೀಗೆ ಕೆಟ್ಟದಾಗಿ ಮುಟ್ಟಿದರೆ ಜೋಕೆ'' ಎಂದು ಎಚ್ಚರಿಕೆ ನೀಡಿದೆ ಎಂದಿದ್ದಾರೆ.
''ಸಿಸಿಟಿವಿ ವಿಡಿಯೋ ಆಧಾರದಲ್ಲಿ ಈ ಘಟನೆ ಬಗ್ಗೆ ತನಿಖೆ ಆಗಲಿ ಎಂದು ನಾನು ಒತ್ತಾಯಿಸುತ್ತೇನೆ. ಗೋವಾ ವಿಮಾನ ನಿಲ್ದಾಣ, ಸಿಐಎಸ್‌ಎಫ್ ಘಟಕವು ಈ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಜನಾಂಗೀಯ ನಿಂದನೆ ಮಾಡಿದ, ಮಹಿಳೆಯರ ಬಗ್ಗೆ ಕನಿಷ್ಟ ಗೌರವ ಹೊಂದಿರುವ ಈ ಕೆಟ್ಟ ಮನಸ್ಸಿನ ವ್ಯಕ್ತಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು'' ಎಂದಿದ್ದಾರೆ.


Click it and Unblock the Notifications











