Baby John Box Office Day 1 ; ವಿಜಯ್ ಅಭಿನಯಿಸಿದ್ದ 'ಥೇರಿ' ಚಿತ್ರದ ದಾಖಲೆ ಮುರಿಯಿತಾ 'ಬೇಬಿ ಜಾನ್'..?
ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಸ್ಟಾರ್‌ಗಳಲ್ಲಿ ವರುಣ್ ಧವನ್ ಕೂಡ ಒಬ್ಬರು. ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ತರಹದ ಕಥೆಗಳಲ್ಲಿ ಈಗಾಗಲೇ ಮಿಂಚಿ ಬಾಲಿವುಡ್‌ನಲ್ಲಿ ಮನೆ ಮಾತಾಗಿರುವ ವರುಣ್ ಧವನ್ ಸದ್ಯ ಬೇಬಿ ಜಾನ್ ಚಿತ್ರದ ಮೂಲಕ ಮತ್ತೊಮ್ಮೆ ಮಾಸ್ ಪ್ರೇಕ್ಷಕರ ಮನ ತಣಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಆದರೂ ಕೂಡ ಮೊದಲ ದಿನ ಚಿತ್ರ ಹನ್ನೆರಡು ಕೋಟಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ಬೇಬಿ ಜಾನ್ ಆರಂಭದಿಂದ ಸದ್ದು ಮಾಡುತ್ತಾನೇ ಬಂದಿತ್ತು. ಇದಕ್ಕೆ ಬೇಬಿ ಜಾನ್ 2016ರಲ್ಲಿ ಬಂದಿದ್ದ ಇಳಯ ದಳಪತಿ ವಿಜಯ್ ಅಭಿನಯದ ಥೇರಿ ಚಿತ್ರದ ರಿಮೇಕ್ ಎನ್ನುವುದು ಒಂದು ಕಾರಣವಾದರೆ ಜವಾನ್ ಚಿತ್ರದ ಮೂಲಕ ದೊಡ್ಡ ಗೆಲುವನ್ನು ಕಂಡ ಮತ್ತು ಥೇರಿ ಚಿತ್ರವನ್ನು ನಿರ್ದೇಶಿಸಿದ್ದ ಆಟ್ಲೀ ಈ ಚಿತ್ರದ ನಿರ್ಮಾಪಕ ಎನ್ನುವುದು ಕಾರಣವಾಗಿತ್ತು.

ಇನ್ನು, ಟೀಸರ್ ಮತ್ತು ಹಾಡು ಕೂಡ ಜನ ಮನ ಗೆದ್ದಿತ್ತು. ಅದರಲ್ಲಿಯೂ ನೈನ್ ಮಟ್ಕಾ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿತ್ತು. ಈ ಕಾರಣಕ್ಕೆ ಚಿತ್ರ ನೋಡಲು ಅನೇಕರು ಕುತೂಹಲದಿಂದ ಕಾಯುತ್ತಿದ್ದರು. ಇದಕ್ಕೆ ಪುರಾವೆ ಎನ್ನುವಂತೆ ಬೇಬಿ ಜಾನ್ ಚಿತ್ರದ ಮೊದಲ ದಿನದ ಲೆಕ್ಕವನ್ನು ಈಗ ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣಿಡುವ Sacnilk ವೆಬ್ ಪೋರ್ಟಲ್ ಮೊದಲ ದಿನ ಎಲ್ಲೆಲ್ಲಿ ಎಷ್ಟು ಜನ ಬೇಬಿ ಜಾನ್ ಚಿತ್ರವನ್ನು ನೋಡಿದ್ದಾರೆ ಎನ್ನುವ ಲೆಕ್ಕಾಚಾರವನ್ನು ಹಂಚಿಕೊಂಡಿದೆ.
ಆ ಪ್ರಕಾರ ನಿನ್ನೆ ಮುಂಬೈನ ಚಿತ್ರಮಂದಿರಗಳಲ್ಲಿ ಶೇಕಡಾ 26.25% ಆಕ್ಯೂಪೆನ್ಸಿ ಇದ್ದರೆ, ಹೈದ್ರಾಬಾದ್‌ನಲ್ಲಿ ಶೇಕಡಾ 27.00% ಆಕ್ಯೂಪೆನ್ಸಿ ಇತ್ತು. ಇನ್ನು ಬೇಬಿ ಜಾನ್ ಚಿತ್ರವನ್ನು ನೋಡುವ ಆತುರ ಮತ್ತು ಕಾತುರ ನಿನ್ನೆ ಉತ್ತರ ಭಾರತಕ್ಕಿಂತ ಅತೀ ಹೆಚ್ಚು ಕಂಡು ಬಂದಿದ್ದು ಬೆಂಗಳೂರಿಗರಲ್ಲಿ ಅನ್ನುವುದು ಅಚ್ಚರಿಯಾದರೂ ಸತ್ಯ. Sacnilk ವೆಬ್ ಪೋರ್ಟಲ್ ಪ್ರಕಾರ ನಿನ್ನೆ ಬೆಂಗಳೂರಿನಲ್ಲಿ 268 ಪ್ರದರ್ಶನ ಕಂಡ ಬೇಬಿ ಜಾನ್ ಚಿತ್ರವನ್ನು ನೋಡಲು ಚಿತ್ರಮಂದಿರಗಳಿಗೆ ಶೇಕಡಾ 38.00% ಜನರು ತೆರಳಿದ್ದರು. ಇನ್ನು ಆಗಲೇ ಹೇಳಿದಂತೆ ಬೇಬಿ ಜಾನ್ ತಮಿಳಿನ ಥೇರಿ ಚಿತ್ರದ ರಿಮೇಕ್. ಈ ಕಾರಣಕ್ಕೆ ಚೆನ್ನೈನಲ್ಲಿ ಈ ಚಿತ್ರದ ಆಕ್ಯೂಪೆನ್ಸಿ ನಿನ್ನೆ ಶೇಕಡಾ 52.00% ಇತ್ತು.
ಇನ್ನು ಕಳೆದ ಐದು ವರ್ಷಗಳಲ್ಲಿ ವರುಣ್ ಧವನ್ ಅಭಿನಯದ ಯಾವ ಚಿತ್ರ ಕೂಡ ಮೊದಲ ದಿನ ಎರಡಂಕಿಯ ಗಳಿಕೆಯನ್ನು ಕಂಡಿರಲಿಲ್ಲ. ಈ ಹಿಂದೆ ಕಳಂಕ್ ಮೊದಲ 21.60 ಕೋಟಿಯನ್ನು ಗಳಿಸಿತ್ತಾದರೂ ಆ ಚಿತ್ರದಲ್ಲಿ ಬಹುತಾರಾಗಣ ಇತ್ತು. ಈ ಕಾರಣಕ್ಕೆ ಕಳಂಕ್ ವರುಣ್ ಧವನ್ ಅವರ ಚಿತ್ರವೆಂದು ಬಾಲಿವುಡ್ ಪರಿಗಣಿಸಿಲ್ಲ. ಇದನ್ನು ಹೊರತು ಪಡಿಸಿದರೆ ಆ ನಂತರ ಬಂದ ಸ್ಟ್ರೀಟ್ ಡ್ಯಾನ್ಸರ್, ಜುಗ್ ಜುಗ್ ಜೀಯೋ, ಬೇಡಿಯಾ ಚಿತ್ರದ ಮೊದಲ ದಿನದ ಗಳಿಕೆ ಹತ್ತು ಕೋಟಿಯ ಒಳಗೆ ಇತ್ತು. ಈಗ ಬೇಬಿ ಜಾನ್ ಈ ದಾಖಲೆಯನ್ನು ಮುರಿದು ಮೊದಲ ದಿನ ₹ 12.50 ಕೋಟಿಯನ್ನು ಗಳಿಸಿದೆ.
ಅಂದ್ಹಾಗೇ 2016ರಲ್ಲಿ ತೆರೆಗೆ ಬಂದಿದ್ದ ಥೇರಿ ಕೇವಲ ತಮಿಳುನಾಡಿನಲ್ಲಿಯೇ ಮೊದಲ ದಿನ ₹13.1 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ಹಿಂದಿಕ್ಕುವಲ್ಲಿ ಬೇಬಿ ಜಾನ್ ವಿಫಲವಾಗಿದೆ. ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಇಂದು ಈ ಚಿತ್ರದ ಗಳಿಕೆ ಕುಸಿಯುವ ಸಾಧ್ಯತೆ ಇದೆ.


Click it and Unblock the Notifications











