The Kashmir Files: ಈ ಚಿತ್ರಕ್ಕಾಗಿ 'ಬಚ್ಚನ್ ಪಾಂಡೆ' ಸ್ಥಗಿತ, 'ಜೇಮ್ಸ್'ಗೂ ಕಂಟಕ!
ಹಿಂದಿಯ 'ದಿ ಕಾಶ್ಮೀರ್ ಫೈಲ್ಸ್', ಕನ್ನಡದ 'ಜೇಮ್ಸ್', ತೆಲುಗಿನ 'RRR' ಚಿತ್ರಗಳು ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿವೆ. ಈ ಮೂರು ಸಿನಿಮಾಗಳ ನಡುವೆ ಚಿತ್ರಮಂದಿರಗಳಿಗೆ ಪೈಪೋಟಿ ಶುರುವಾಗಿದೆ. ಎಲ್ಲಿ ಏನೇ ಪೈಪೋಟಿ ನಡೆದರು ಓಕೆ. ಆದರೆ ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಮೋಸ ಯಾಕೆ ಎಂದು ಕನ್ನಡಿಗರು ಕಿಡಿಕಾರುತ್ತಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಹಾವಾಳಿ ಎಲ್ಲೆಡೆ ಜೋರಾಗಿದೆ. ದೇಶ ಪ್ರೇಮದ ಹೆಸರಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರಕ್ಕಾಗಿ ಹಲವು ಚಿತ್ರಗಳನ್ನು ಬಲವಂತವಾಗಿ ಬಲಿಕೊಡಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕನ್ನಡದ 'ಜೇಮ್ಸ್'. ಪರಭಾಷೆ ಚಿತ್ರ ಬಿಡಿ 'ದಿ ಕಾಶ್ಮೀರ್ ಫೈಲ್ಸ್' ಹಿಂದಿ ಚಿತ್ರಗಳ ಮೇಲೂ ದಬ್ಬಾಳಿಕೆ ನಡೆಸಿರೋದಾಗಿ ವರದಿ ಆಗಿದೆ.
ನಟ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರಕ್ಕೆ ಈಗ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಕಂಟಕ ಎದುರಾಗಿದೆ. ಇತ್ತೀಚೆಗೆ ನಟ ಅಕ್ಷಯ್ ಕುಮಾರ್ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದರು. ಆದರೂ ಅದು ಹೇಗೆ ಅಕ್ಷಯ್ ಚಿತ್ರಕ್ಕೆ ಕಂಟಕ ಎದುರಾಯ್ತು ಎನ್ನುವ ಪ್ರಶ್ನೆ ಮೂಡಬಹುದು.

'ಬಚ್ಚನ್ ಪಾಂಡೆ' ಸ್ಥಗಿತ!
'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರವನ್ನು ಬಲವಂತವಾಗಿ ಚಿತ್ರಮಂದಿರದಿಂದ ತೆಗೆದು ಹಾಕಲು ಒತ್ತಾಯಿಸಲಾಗಿದೆ. ಒಡಿಶಾದ ಚಿತ್ರಮಂದಿರ ಒಂದರಲ್ಲಿ 'ಬಚ್ಚನ್ ಪಾಂಡೆ' ಚಿತ್ರ ಪ್ರದರ್ಶನದ ವೇಳೆ ಕೇಸರಿ ಶಾಲು ಹೊದ್ದು ಬಂದ ತಂಡ ಒಂದು, ಬಚ್ಚನ್ ಪಾಂಡೆ ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಪ್ರರ್ದಶಿಸಲು ಒತ್ತಾಯ ಮಾಡಿದೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

'ಜೇಮ್ಸ್'ಗೂ ಕಂಟಕವಾದ 'ದಿ ಕಾಶ್ಮೀರ್ ಫೈಲ್ಸ್'!
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಸರ್ಕಾರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಪರವಾಗಿ ನಿಂತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ತಕ್ಕಂತೆ ಈ ಚಿತ್ರವನ್ನು ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ. ಈ ಚಿತ್ರದಿಂದ ಕನ್ನಡದ 'ಜೇಮ್ಸ್'ಗೂ ತೊಂದರೆ ಆಗುತ್ತಿದೆ. 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಪ್ರದರ್ಶನ ಮಾಡುವ ಸಲುವಾಗಿ 'ಜೇಮ್ಸ್' ಚಿತ್ರವನ್ನು ಎತ್ತಂಗಡಿ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಕರ್ನಾಟಕದಲ್ಲಿ 'ದಿ ಕಾಶ್ಮೀರ್ ಫೈಲ್ಸ್'ಗೆ ಭಾರಿ ವಿರೋಧ!
'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕಾಗಿ ಕನ್ನಡದ 'ಜೇಮ್ಸ್' ಚಿತ್ರವನ್ನು ತೆಗೆದು ಹಾಕಲಾಗುತ್ತಿದೆ. ಈ ಸುದ್ದಿ ಬರುತ್ತಿದ್ದ ಹಾಗೆ ಕನ್ನಡಿಗರು ಈ ಹಿಂದಿ ಚಿತ್ರವನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ಬಾಯ್‌ಕಾಟ್ ದಿ ಕಾಶ್ಮೀರ್ ಫೈಲ್ಸ್' ಎಂದು ಹಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇದು ನಿಜವೆಂದಿದ್ದಾರೆ. ಬಿಜೆಪಿಯ ಹಲವರು 'ಜೇಮ್ಸ್' ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಹಾಕಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

'ದಿ ಕಾಶ್ಮೀರ್ ಫೈಲ್ಸ್' ಗಳಿಸಿದ್ದು ಎಷ್ಟು ಕೋಟಿ?
'ದಿ ಕಾಶ್ಮೀರ್ ಫೈಲ್ಸ್' ಚಿತ್ರ 'ರಾಧೆ ಶ್ಯಾಮ್' ಜೊತೆಗೆ ರಿಲೀಸ್ ಆದರೂ, ಆ ಚಿತ್ರದ ರೆಕಾರ್ಡ್ ಮುರಿದು ಸದ್ಯ ಕೋಟಿ, ಕೋಟಿ ಬಾಚುತ್ತಾ ಇದೆ. ಚಿತ್ರ ರಿಲೀಸ್ ಆಗಿ 12ನೇ ದಿನಕ್ಕೆ 190 ಕೋಟಿ ಕಲೆಕ್ಷನ್ ಆಗಿದೆ. ಸದ್ಯದಲ್ಲೇ 200 ಕೋಟಿಯ ಗಡಿದಾಟಲಿದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಕಳೆಯುತ್ತಿದ್ದರೂ, ಬೇರೆ ಸಿನಿಮಾಗಳನ್ನು ತೆಗೆದು ಈ ಚಿತ್ರವನ್ನು ಪ್ರದರ್ಶನ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.


Click it and Unblock the Notifications











