'ಬಡೇ ಮಿಯಾ ಚೋಟೆ ಮಿಯಾ' ಠುಸ್ ಪಟಾಕಿ ; 'ಈದ್'ಗೆ ಬಾಲಿವುಡ್‌ನ 'ಮೈದಾನ್' ಖಾಲಿ..!
ಬಡೇ ಮಿಯಾ ಚೋಟೆ ಮಿಯಾ & ಮೈದಾನ್.. ಈ ವಾರ ಈದ್ ಮತ್ತು ಯುಗಾದಿ ಹಬ್ಬದ ನೆಪದಲ್ಲಿ ಬಿಡುಗಡೆಯಾದ ಬಾಲಿವುಡ್ ನ ಎರಡು ಸಿನಿಮಾಗಳು. ಎರಡು ನಿರೀಕ್ಷಿತ ಸಿನಿಮಾಗಳೇ. ಆದರೆ ಬಂದ ಫಲಿತಾಂಶ ಅನಿರೀಕ್ಷಿತ.
ಹೌದು, ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ .. ಒಬ್ಬರು ಪುರಾತನ ಕಾಲದ ಸ್ಟಾರ್. ಮತ್ತೊಬ್ಬರು ಈ ಯುಗದ ಸ್ಟಾರ್. ಈ ಎರಡು ಸ್ಟಾರ್ ಗಳು ಎದುರಾಳಿಗಳ ವಿರುದ್ಧ ಸೆಣಸಾಡುತ್ತಿದ್ದರೆ ಹಣದ ಮಳೆಯೇ ಬೀಳುತ್ತೆ ಎಂದು ಕನಸು ಕಂಡಿತ್ತು ಬಾಲಿವುಡ್. ಆದರೆ.. ಅಂದುಕೊಂಡಂತ ಮಾಯದಂತ ಮಳೆ ಬರಲಿಲ್ಲ. ಬಂದಿದ್ದು ಸಾಧಾರಣ ಮಳೆ.

ಮೊದಲ ದಿನ ಹದಿನೈದು ಕೋಟಿಯನ್ನ ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿದ ಬಡೇ ಮಿಯಾ ಚೋಟೆ ಮಿಯಾ, ಎರಡನೇ ದಿನ ಗಳಿಸಿದ್ದು ಮೊದಲನೇ ದಿನದ ಅರ್ಧದಷ್ಟು ಮಾತ್ರ. ಅಂದರೆ 07 ಕೋಟಿಯನ್ನಷ್ಟೇ. ಇನ್ನೂ ಬಡೇ ಮಿಯಾ ಚೋಟೆ ಮಿಯಾ ಕೇವಲ 2Dಯಲ್ಲಿ ಅಷ್ಟೇ ಅಲ್ಲ 3Dಯಲ್ಲಿಯೂ ಇದೆ. ಆದರೂ ಕೂಡ ಈ ಕಿಲಾಡಿ ಜೋಡಿಯ ಆಕ್ಷನ್ ಅಡ್ವೆಂಚರ್ ನೋಡುವ ಉತ್ಸಾಹ ದೇಶದ ಯಾವ ಮೂಲೆಯಲ್ಲಿಯೂ ಹೆಚ್ಚು ಕಂಡು ಬಂದಿಲ್ಲ. ಇದ್ದಿದ್ದರಲ್ಲಿ.. ಮುಂಬೈ ಹೊರತು ಪಡಿಸಿದರೆ, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ ಈ ಚಿತ್ರಕ್ಕೆ ಅಲ್ಪ ಸ್ವಲ್ಪ ಬೇಡಿಕೆ ಇದೆ. ಮಿಕ್ಕಂತೆ ನೀರಸ ಪ್ರದರ್ಶನ
ಇನ್ನೂ ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ಅಭಿಪ್ರಾಯ ಇದೆ. ಕೆಲವರ ಪಾಲಿಗೆ ಇದು ಬಾಡೂಟ. ಇನ್ನೂ ಕೆಲವರ ಪಾಲಿಗೆ ಹಳಸಿದೂಟ. ಇನ್ನೂ ಈ ಚಿತ್ರದ ವಿಚಾರದಲ್ಲಿ ಬಾಲಿವುಡ್‌ನ ಪ್ರಖ್ಯಾತ ವಿಮರ್ಷಕರಲ್ಲಿಯೂ ಎರಡು ಬಣಗಳಾಗಿವೆ. ತರಣ್ ಆದರ್ಶ್ ಹಾಗೂ ಅವರ ಸಂಗಡಿಗರು ಚಿತ್ರ ಚೂರು ಚೆನ್ನಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರೆ ಸುಮಿತ್ ಕಡೇಲ್ ಮತ್ತು ಸಹಪಾಠಿಗಳು ಬಡೇ ಮಿಯಾ ಚೋಟೆ ಮಿಯಾ ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲ ಎಂಬರ್ಥದಲ್ಲಿ ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಈ ಕಾರಣಕ್ಕೆ.. ಯಾರ ಮಾತನ್ನ ನಂಬುವುದು.. ಯಾರ ಮಾತನ್ನ ಬಿಡುವುದು ಎಂಬ ಗೊಂದಲದಲ್ಲಿ ಸಹಜವಾಗಿ ಸಿನಿಪ್ರಿಯರು ಈಗ ಸಿಲುಕಿದ್ದಾರೆ.

ಇದು ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಕಥೆಯಾದರೆ, ಮೈದಾನ್ ಚಿತ್ರದ ವ್ಯಥೆ ಬೇರೆಯೇ ಇದೆ. ವಿಮರ್ಷಕರು ಹಾಗೂ ಪ್ರೇಕ್ಷಕರು ಅಜಯ್ ದೇವಗನ್ ಅಭಿನಯದ ಈ ಸ್ಫೋಟ್ಸ್ ಡ್ರಾಮಾವನ್ನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ.. ಗಲ್ಲಾಪೆಟ್ಟಿಗೆಯಲ್ಲಿ ದುಡ್ಡಿನ ಸದ್ದು ಮಾತ್ರ ಕೇಳ್ತಿಲ್ಲ.
ಮೊದಲನೇ ದಿನ ಭಾರತದ ಬಾಕ್ಸಾಫೀಸ್‌ನಲ್ಲಿ ಕೇವಲ 4.5 ಕೋಟಿಯನ್ನ ಗಳಿಸಿದ ಮೈದಾನ್, ಎರಡನೇ ದಿನ 03 ಕೋಟಿಯನ್ನಷ್ಟೇ ಗಳಿಸಿದೆ. ಇನ್ನೂ ಮೂರನೇ ದಿನ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಶೇಕಡಾ 60% ರಷ್ಟು ಕುಸಿತವಾಗಿದ್ದು ಕೇವಲ 66 ಲಕ್ಷವನ್ನಷ್ಟೇ ಗಳಿಸಿದೆ. ಅಬ್ಬಬ್ಬಾ ಅಂದರೆ 03ನೇ ದಿನದ ಮುಕ್ತಾಯಕ್ಕೆ ಚಿತ್ರ 01 ಕೋಟಿ ಗಳಿಸಿದರೆ ಅದೇ ಹೆಚ್ಚು ಅನ್ನುವ ಮಾತು ಈಗ ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ಇನ್ನೂ ಬಡೇ ಮಿಯಾ ಚೋಟೆ ಮಿಯಾ ಚಿತ್ರದ ವಿಚಾರದಲ್ಲಿ ಬೆಂಗಳೂರಿಗರಲ್ಲಿ ಇರುವ ಎಕ್ಸಾಯಟ್ಮೆಂಟ್ ಮೈದಾನ್ ಚಿತ್ರದ ವಿಚಾರದಲ್ಲಿ ಇಲ್ಲ. ಕೇವಲ 08% ಜನರಲ್ಲಿ ಮಾತ್ರ ಮೈದಾನ್ ನೋಡುವ ಹಂಬಲ ಇದೆ. ಅಲ್ಲಿಗೆ.. ಮೈದಾನ್ ಬಾಕ್ಸಾಫೀಸ್‌ನ ಮೈದಾನದಲ್ಲಿ ಉಳಿಯುವುದು, ಬಡೇ ಮಿಯಾ ಚೋಟೆ ಮಿಯಾ ವಿರುದ್ಧ ಸೆಣಸಾಡಿ ಗೆಲ್ಲುವುದು ಬಹುತೇಕ ಅಸಾಧ್ಯ
ಒಟ್ನಲ್ಲಿ ಪ್ರತಿ ಬಾರಿ ಈದ್ ಹಬ್ಬಕ್ಕೆ ಬಾಲಿವುಡ್ ನಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಸಲ್ಮಾನ್ ಖಾನ್ ಚಿತ್ರವೊಂದು ತಪ್ಪದೇ ಬಿಡುಗಡೆಯಾಗುತ್ತಿತ್ತು. ಹಣದ ಹೊಳೆ ಕೂಡ ಹರಿಯುತ್ತಿತ್ತು. ಆದರೆ ಈ ಬಾರಿ ಸಲ್ಮಾನ್ ಖಾನ್ ಸಿನಿಮಾನೂ ಇಲ್ಲ. ಬಿಡುಗಡೆಯಾದ ಎರಡು ಚಿತ್ರಗಳನ್ನ ನೋಡುವ ಉತ್ಸಾಹವೂ ಸಿನಿಮಾ ಪ್ರೇಮಿಗಳಲ್ಲಿ ಇಲ್ಲ. ಈ ಬಾರಿಯ ಈದ್ ಬಾಲಿವುಡ್‌ಗೆ ಖುಷಿಯನ್ನೂ ತಂದು ಕೊಡಲಿಲ್ಲ ಅನ್ನುವುದು ಮಾತ್ರ ಸತ್ಯ.


Click it and Unblock the Notifications











