ಪ್ರತಿಷ್ಠಿತ BAFTA ಪ್ರಶಸ್ತಿ; 'ವೈಟ್ ಟೈಗರ್' ಖ್ಯಾತಿಯ ನಟ ಆದರ್ಶ್ ಗೌರವ್ ನಾಮನಿರ್ದೇಶನ
ಪ್ರಿಯಾಂಕಾ ಚೋಪ್ರಾ ನಟನೆಯ ವೈಟ್ ಟೈಗರ್ ಸಿನಿಮಾ ಪ್ರತಿಷ್ಠಿತ ಬಾಫ್ಟಾ ಪ್ರಶಸ್ತಿಯ ಎರಡು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. 2021ನೇ ಸಾಲಿನ ಬಾಫ್ಟಾ (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿ ನಾಮನಿರ್ದೇಶನ ಪಟ್ಟಿ ರಿಲೀಸ್ ಆಗಿದ್ದು, ಅತ್ಯುತ್ತಮ ನಟ ಮತ್ತು ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಸ್ಥಾನಪಡೆದಿದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ಆದರ್ಶ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ನಾಮನಿರ್ದೇಶನ ಪಟ್ಟಿ ಬಿಡುಗೆಯಾಗುತ್ತಿದ್ದಂತೆ, ಚಿತ್ರದ ನಟಿ ಮತ್ತು ಸಹ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ ನೀಡಿ, ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ, 'ಎಂಥ ಹೆಮ್ಮೆಯ ಕ್ಷಣ. ಬಾಫ್ಟಾ ನಾಮನಿರ್ದೇಶನ ಪಟ್ಟಿಯಲ್ಲಿ ಭಾರತದ ಪ್ರತಿಭೆಗಳು. ಈ ಸುದ್ದಿ ಕೇಳಿ ಭಾವಪರವಶಳಾದೆ. ನೀವು ಇದಕ್ಕೆ ಅರ್ಹರಾಗಿದ್ದೀರಿ. ಅಭಿನಂದನೆಗಳು ನಿಮಗೆ' ಎಂದು ಟ್ವೀಟ್ ಮಾಡಿದ್ದಾರೆ.

ವೈಟ್ ಟೈಗರ್ ಸಿನಿಮಾ 2021ನೇ ಸಾಲಿನ ಆಸ್ಕರ್ ಸ್ಪರ್ಧೆಯಲ್ಲೂ ರೇಸ್ ನಲ್ಲಿದೆ. ಖ್ಯಾತ ಬರಹಗಾರ ಅರವಿಂದ್ ಅಡಿಗ ಅವರ ವೈಟ್ ಟೈಗರ್ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ಚಿತ್ರಕ್ಕೆ ರಾಮಿನ್ ಬಹ್ರಾನಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಾಜ್ ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವೈಟ್ ಟೈಗರ್ ಸಿನಿಮಾ ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಎರಡು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಪ್ರತಿಷ್ಠಿತ ಬಾಫ್ಟಾ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 11 ಲಂಡನ್ ನ ರಾಯಲ್ ಅಲ್ಬರ್ಟ್ ಹಾಲ್‌ನಲ್ಲಿ ನಡೆಯಲಿದೆ.


Click it and Unblock the Notifications











