ಸೈಫ್ ಅಲಿ ಖಾನ್ ಹಲ್ಲೆ ಪ್ರಕರಣ, ಮಲೈಕಾ ಅರೋರಾ ವಿರುದ್ಧ ವಾರೆಂಟ್ ಹೊರಡಿಸಿದ ಮುಂಬೈ ನ್ಯಾಯಾಲಯ..!
ಸಾಮಾನ್ಯರು ಸೆಲೆಬ್ರೆಟಿಗಳೆಂದರೆ ರಾಯಲ್ ಲೈಫು, ಕಾರು, ಪಾರ್ಟಿ, ಫೈವ್ ಸ್ಟಾರ್ ಹೋಟೆಲ್, ಮೋಜು, ಮಸ್ತಿ, ಕೈ ತುಂಬಾ ದುಡ್ಡು, ಸೆಲ್ಫಿ ಇತ್ಯಾದಿಗಳೆಂದು ಬಿಂಬಿಸುತ್ತಾರೆ. ತಮ್ಮ ನೆಚ್ಚಿನ ಕಲಾವಿದರ ಕುರಿತು ಯಾರಾದಾರೂ ಕೆಟ್ಟದಾಗಿ ಮಾತನಾಡಿದರೆ, ಅವಮಾನ ಮಾಡಿದರೆ, ತಮಗೆ ಅವಮಾನವಾದಂತೆ ಸೋಶಿಯಲ್ ಮೀಡಿಯಾದಲ್ಲಿ ಜಗಳಕ್ಕಿಳಿಯುತ್ತಾರೆ. ಅಭಿಮಾನದ ಹೆಸರಿನಲ್ಲಿ ಬೇರೆಯವರನ್ನು ಹೀಯಾಳಿಸುತ್ತಾರೆ. ಬೇರೆ ಸ್ಟಾರ್‌ಗಳನ್ನು ನಿಂದಿಸುತ್ತಾರೆ.
ಆದರೆ ಇವೆಲ್ಲದರ ಮಧ್ಯೆ ಕೆಲವರು ತಾವು ಸ್ಟಾರ್, ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಬೇಕು, ಮಾದರಿ ವ್ಯಕ್ತಿಯಾಗಬೇಕು ಎನ್ನುವುದನ್ನು ಮರೆತು ಗೂಂಡಾ ವರ್ತನೆಯಿಂದ ಕೂಡ ಸುದ್ದಿಯಾಗುತ್ತಾರೆ. ಬೇಡದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ತಾವು ಸಂಕಷ್ಟಕ್ಕೆ ಸಿಲುಕುತ್ತಾರೆ. ಬೇರೆಯವರನ್ನು ಕಷ್ಟಕ್ಕೆ ದೂಡುತ್ತಾರೆ.ಉದಾಹರಣೆಗೆ ಸೈಫ್ ಅಲಿ ಖಾನ್ ಮತ್ತು ಮಲೈಕಾ ಅರೋರಾ ಪ್ರಕರಣವನ್ನೇ ತೆಗೆದುಕೊಳ್ಳಿ.

ಹೌದು, ಸರಿ ಸುಮಾರು ಹದಿಮೂರು ವರ್ಷದ ಹಿಂದೆ ಸೈಫ್ ಅಲಿ ಖಾನ್ ಮುಂಬೈನ ಹೋಟೆಲ್‌ನಲ್ಲಿ ದಕ್ಷಿಣ ಆಫ್ರಿಕಾದ ಉದ್ಯಮಿ ಭಾರತೀಯ ಮೂಲದ ಇಕ್ಬಾಲ್ ಮೀರ್ ಶರ್ಮಾ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಅವತ್ತು ಇಕ್ಬಾಲ್ ಮೀರ್ ಶರ್ಮಾ ತಮ್ಮ ಮೇಲೆ ಸೈಫ್ ಅಲಿ ಖಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.ನನ್ನ ಮೂಗಿಗೆ ಬಲವಾಗಿ ಹೊಡೆದಿದ್ದಾರೆ ಇದರಿಂದ ನನ್ನ ಮೂಗಿನ ಮೂಳೆ ಮುರಿದಿದೆ ಎಂದು ಹೇಳಿದ್ದರು. ನನ್ನ ಮೇಲೆ ಹಲ್ಲೆ ಮಾಡುವುದಲ್ಲದೇ ನನ್ನ ಮಾವ ರಮಣ್ ಪಟೇಲ್ ಅವರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎಂದು ಆರೋಪವನ್ನು ಕೂಡ ಮಾಡಿದ್ದರು.
ಈ ಪ್ರಕರಣದಲ್ಲಿ ಈಗ ಸೈಫ್ ಅಲಿ ಖಾನ್ ಅಲ್ಲ ಬದಲಿಗೆ ಮಲೈಕಾ ಅರೋರಾಗೆ ಮುಂಬೈ ನ್ಯಾಯಾಲಯ ಶಾಕ್ ನೀಡಿದೆ. ಮಲೈಕಾ ಅರೋರಾ ವಿರುದ್ಧ ವಾರೆಂಟ್ ಹೊರಡಿಸಿದೆ. ಮಲೈಕಾ ಅದೃಷ್ಟ ನ್ಯಾಯಾಲಯ ವಾರೆಂಟ್ ಹೊರಡಸಿದೆಯಾದರೂ ಜಾಮೀನು ಪಡೆಯಬಹುದು ಎಂದು ಹೇಳಿದೆ.
ಹೌದು, ಅಸಲಿಗೆ 2012ರಲ್ಲಿ ಈ ಹಲ್ಲೆ ಪ್ರಕರಣ ದಾಖಲಾದಾಗ ಸೈಫ್ ಅಲಿ ಖಾನ್ ಜೊತೆ ಮಲೈಕಾ ಅರೋರಾ ಕೂಡ ಇದ್ದರು. ಇಷ್ಟೇ ಅಲ್ಲ ಆಗ ಸ್ನೇಹಿತೆಯಾಗಿದ್ದ ಸೈಫ್ ಅಲಿ ಖಾನ್ ಅವರ ಮಡದಿ ಕರೀನಾ ಕಪೂರ್ ಕೂಡ ಇದ್ದರು. ಮಲೈಕಾ ಅರೋರಾ ಸಹೋದರಿ ಅಮೃತಾ ಅರೋರಾ ಅವರ ಗಂಡ ಶಾಕೀಲ್ ಲದಾಕ್ ಮತ್ತು ಬಿಲಾಲ್ ಅಮ್ರೋಹಿ ಕೂಡ ಇದ್ದರು. ಆ ಸಮಯದಲ್ಲಿ ಸೈಫ್ ಅಲಿ ಖಾನ್ ಜೊತೆಯಲ್ಲಿ ಇವರೆಲ್ಲರ ಮೇಲೆ ಕೂಡ ಪ್ರಕರಣ ದಾಖಲಾಗಿತ್ತು.
ಇನ್ನು ಹಲ್ಲೆ ನಡೆದಾಗ ಮಲೈಕಾ ಅರೋರಾ ಅಲ್ಲಿಯೇ ಟೇಬಲ್ ಬಳಿ ಕುಳಿತುಕೊಂಡಿದ್ದರು. ಹೀಗಾಗಿ ಮಲೈಕಾ ಅರೋರಾ ಅವರನ್ನು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಇನ್ನು ಹಲ್ಲೆ ನಡೆದು ಒಂದು ದಶಕವಾದರು ಕೂಡ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯುತ್ತಿದ್ದು ಫೆಬ್ರವರಿ 15ರಂದು ಮಲೈಕಾ ಅರೋರಾ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ ಮಲೈಕಾ ಗೈರಾದರು. ಹೀಗಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತ್ತು.
ಆದರೆ ನಿನ್ನೆ ಕೂಡ ಮಲೈಕಾ ಗೈರಾಗಿದ್ಧಾರೆ. ಹೀಗಾಗಿ ಜಾಮೀನು ಪಡೆಯಬಹುದಾದ ವಾರೆಂಟ್ ಹೊರಡಿಸಿರುವ ನ್ಯಾಯಾಲಯ ಏಪ್ರಿಲ್ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಒಂದು ವೇಳೆ ಮಲೈಕಾ ಅರೋರಾ ಮುಂದಿನ ವಿಚಾರಣೆಯಲ್ಲಿಯೂ ಗೈರಾದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ಇನ್ನು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ನ್ಯಾಯಾಲಯಕ್ಕೆ ಗೈರಾಗಿದ್ದ ಮಲೈಕಾ ಅರೋರಾ ಅವರ ಸಹೋದರಿ ಅಮೃತಾ ಮಾರ್ಚ್ ಕೊನೆಯ ವಾರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ನಾವೆಲ್ಲರು ಫೆಬ್ರವರಿ 22-2012ರಂದು ಔತಣಕೂಟಕ್ಕೆ ಹೋಗಿದ್ದೇವು, ನಮ್ಮ ಪಾಡಿಗೆ ನಾವೆಲ್ಲ ಮಾತನಾಡುತ್ತಾ ಊಟ ಮಾಡುತ್ತಿದ್ದೇವು ಎಂದು ಹೇಳಿದ್ದ ಅಮೃತಾ ಈ ಸಮಯದಲ್ಲಿ ಶರ್ಮಾ ಬಂದು ಮೆಲ್ಲಗೆ ಮಾತನಾಡುವಂತೆ ಹೇಳಿದ್ದರು ಅಲ್ಲದೇ ನಮ್ಮ ಮೇಲೆ ಕೂಗಾಡಿದ್ದರು ಎಂದು ಹೇಳಿದ್ದರು.
ಇಕ್ಬಾಲ್ ಮೀರ್ ಶರ್ಮಾ ನಾವು ಇದ್ದ ಜಾಗಕ್ಕೆ ಬಂದು ಕೂಗಾಡಿದ ನಂತರ ಸೈಫ್ ಅಲಿ ಖಾನ್ ಅವರ ಬಳಿ ಕ್ಷಮೆಯನ್ನು ಕೇಳಿ ಭೋಜನವನ್ನು ಮುಂದುವರೆಸಿದರು ಎಂದು ಹೇಳಿದ್ದ ಅಮೃತಾ, ಆ ನಂತರ ಸೈಫ್ ಅಲಿ ಖಾನ್ ಶೌಚಾಲಯಕ್ಕೆ ತೆರಳಿದ್ದರು, ಆಗ ಆ ಸಮಯದಲ್ಲಿ ನಮಗೆ ಜೋರಾಗಿ ಶಬ್ದ ಕೇಳಿಸಲು ಶುರುವಾಯ್ತು ಆಗ ಏನಾಯಿತು ಎಂದು ನೋಡಲು ನಾವೆಲ್ಲರು ಹೋದಾಗ ಶರ್ಮಾ ಅವಾಚ್ಯ ಶಬ್ದಗಳಿಂದ ಸೈಫ್ ಅಲಿ ಖಾನ್ ಅವರನ್ನು ಮತ್ತೆ ನಮ್ಮೆಲ್ಲರನ್ನು ನಿಂದಿಸುತ್ತಿದ್ದರು ಎಂದು ಕಳೆದ ಮಾರ್ಚ್‌ನಲ್ಲಿ ನಡೆದ ವಿಚಾರಣೆಯಲ್ಲಿ ಅಮೃತಾ ಅರೋರಾ ಹೇಳಿದ್ದರು. ಇಕ್ಬಾಲ್ ಮೀರ್ ಶರ್ಮಾ ಅವರೇ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದರು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಂದ ಕೂಡ ಸೈಫ್ ಅಲಿ ಖಾನ್, ಸದ್ಯ ಅಮೃತಾ ಅರೋರಾ ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯನ್ನೇ ನೀಡುತ್ತಾ ಬಂದಿದ್ಧಾರೆ. ನಮ್ಮದೇನು ತಪ್ಪಿಲ್ಲ ನಾವು ನಮ್ಮ ಪಾಡಿಗೆ ಊಟ ಮಾಡುತ್ತಿದ್ದೇವು ಆಗ ಅಲ್ಲಿಗೆ ಬಂದ ಇಕ್ಬಾಲ್ ಮೀರ್ ಶರ್ಮಾ ನನ್ನ ಜೊತೆಯಲ್ಲಿದ್ದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದರು, ಪ್ರಚೋದಿಸಿದರು, ಇದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಸೈಫ್ ಅಲಿ ಖಾನ್ ಹಲ್ಲೆ ನಡೆದ ನಂತರ ಹೇಳಿದ್ದರು. ಆ ನಂತರ ಕೂಡ ತಮ್ಮ ಈ ಹೇಳಿಕೆಗೆ ಬದ್ಧರಾಗಿದ್ದರು. ಅಮೃತಾ ಅರೋರಾ ಕೂಡ ಸೈಫ್ ಅವರ ಮಾತುಗಳನ್ನೇ ನ್ಯಾಯಾಲಯದಲ್ಲಿ ಕಳೆದ ಬಾರಿಯ ವಿಚಾರಣೆಯಲ್ಲಿ ಪುನರುಚ್ಚಿಸಿದ್ದರು.
ಅಂದ್ಹಾಗೇ 2012ರ ಫೆಬ್ರವರಿಯಲ್ಲಿ ನಡೆದ ಈ ಹಲ್ಲೆ ಪ್ರಕರಣದ ನಂತರ, ಇಕ್ಬಾಲ್ ಮೀರ್ ಶರ್ಮಾ ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 ರ ಅಡಿಯಲ್ಲಿ ಸೈಫ್ ಅಲಿ ಖಾನ್, ಶಾಕಿಲ್ ಲದಾಕ್ ಮತ್ತು ಬಿಲಾಲ್ ಅಮ್ರೊಹಿ ಅವರನ್ನು ಬಂಧಿಸಿದ್ದರು. ಆ ನಂತರ ಮೂವರು ಜಾಮೀನು ಪಡೆದು ಹೊರ ಬಂದಿದ್ದರು.
ಸದ್ಯ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 29ರಂದು ಮುಂದೂಡಿದೆ. ಮಲೈಕಾ ಅರೋರಾ ವಿರುದ್ದ ಜಾಮೀನು ಪಡೆಯಬಹುದಾದ ವಾರೆಂಟ್ ಹೊರಡಿಸಿದೆ. ಏಪ್ರಿಲ್ 29ರಂದು ವಿಚಾರಣೆಗೆ ಮಲೈಕಾ ಅರೋರಾ ಹಾಜರಾಗುತ್ತಾರಾ ? ತಮ್ಮ ಸಹೋದರಿ ಮತ್ತು ಸೈಫ್ ಈಗಾಗಲೇ ಹೇಳಿರುವ ಮಾತುಗಳನ್ನೇ ಪುನರಾವರ್ತನೆಯನ್ನು ಮಾಡುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
ಇನ್ನುಳಿದಂತೆ ಸೈಫ್ ಅಲಿ ಖಾನ್ ಮೇಲೆ ಈ ವರ್ಷದ ಆರಂಭದಲ್ಲಿ ಚೂರಿಯಿಂದ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮೊನ್ನೆಯಷ್ಟೇ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಈ ಹಲ್ಲೆಯ ನಂತರ ಕೆಲ ಕಾಲ ವಿಶ್ರಾಂತಿಯನ್ನು ಪಡೆಯುತ್ತಿದ್ದ ಸೈಫ್ ಅಲಿ ಖಾನ್ ಸದ್ಯ ಚೇತರಿಸಿಕೊಂಡು ಚಿತ್ರೀಕರಣಕ್ಕೆ ಮರಳಿದ್ದಾರೆ. ಕೆಲವೊಂದಷ್ಟು ಚಿತ್ರಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಜ್ಯುವೆಲ್ ಥೀಫ್ ಚಿತ್ರ ಶೀಘ್ರದಲ್ಲಿಯೇ ಓಟಿಟಿಯಲ್ಲಿ ಪ್ರಸಾರವಾಗಲಿದೆ. ಇನ್ನು ರೇಸ್ 4 ಚಿತ್ರದಲ್ಲಿ ಕೂಡ ಸೈಫ್ ಅಲಿ ಖಾನ್ ನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications










