ನಟಿ ಅಂಜಲಿಯನ್ನು ಬಾಲಯ್ಯ ತಳ್ಳಿದ ಘಟನೆ; ಈತ "ದೊಡ್ಡ ಕ್ರೂರಿ" ಎಂದ ಬಾಲಿವುಡ್ ಫಿಲ್ಮ್ ಮೇಕರ್
ಇತ್ತೀಚೆಗೆ ತೆಲುಗು ನಟ ಬಾಲಕೃಷ್ಣ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದುಕೊಂಡ ರೀತಿ ಬಗ್ಗೆ ಆಕ್ರೋಶ್ ವ್ಯಕ್ತವಾಗುತ್ತಿದೆ. ನಟಿ ಅಂಜಲಿ ಅವರನ್ನು ಬಾಲಯ್ಯ ನೂಕಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಲಕೃಷ್ಣ ಕುಡಿದು ಈ ರೀತಿ ವರ್ತಿಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಬಾಲಯ್ಯ ಆಗಮಿಸಿದ್ದರು. ಖ್ಯಾತ ನಟ ಎನ್‌ಟಿಆರ್ ಪುತ್ರ, ಹಿಂದೂಪುರ ಕ್ಷೇತ್ರದ ಶಾಸಕರೂ ಆಗಿರುವ ಬಾಲಯ್ಯ ವೇದಿಕೆ ಮೇಲೆ ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ. ಆ ಕ್ಷಣದಲ್ಲಿ ಏನೂ ಆಗದಂತೆ ನಟಿ ಅಂಜಲಿ ತೋರ್ಪಡಿಸಿಕೊಂಡರೂ ಒಂದು ಕ್ಷಣ ಆಕೆ ವಿಚಲಿತರಾಗಿದ್ದು ಸುಳ್ಳಲ್ಲ.

ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಬಾಲಯ್ಯ ವರ್ತನೆಯನ್ನು ಕೇಕೆ ಹಾಕಿ ಸಂಭ್ರಮಿಸಿದ್ದು ವಿಪರ್ಯಾಸ. ಈ ಬಗ್ಗೆ ಕೂಡ ನೆಟ್ಟಿಗರು ಟೀಕಿಸುತ್ತಿದ್ದಾರೆ. ಈ ಹಿಂದೆ ಕೂಡ ಬಾಲಯ್ಯ ಸಾರ್ವಜನಿಕವಾಗಿ ಕೆಲವೊಮ್ಮೆ ನಡೆದುಕೊಂಡಿದ್ದ ರೀತಿ, ನೀಡಿದ್ದ ಹೇಳಿಕೆಗೂ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ವೇದಿಕೆಯಲ್ಲೇ ಅಂಜಲಿ ಅವರನ್ನು ಬಾಲಯ್ಯ ತಳ್ಳಿದ ಘಟನೆ ಬಗ್ಗೆ ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
ವೈರಲ್ ವೀಡಿಯೋವನ್ನು ರೀ-ಟ್ವೀಟ್ ಮಾಡಿ 'ಯಾರೀ ಕ್ರೂರಿ?' ಎಂದು ಹನ್ಸಲ್ ಮೆಹ್ತಾ ಕಾಮೆಂಟ್ ಮಾಡಿದ್ದಾರೆ. ಬಳಿಕ ನೆಟ್ಟಿಗರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ "ಆತ ತೆಲುಗಿನ ಖ್ಯಾತ ನಟ, ಆಂಧ್ರದ ಶಾಸಕ ಹಾಗೂ ಹೆಸರಾಂತ ನಟ, ಆಂಧ್ರ ಮಾಜಿ ಸಿರಂ ಎನ್‌ಟಿಆರ್ ಪುತ್ರ" ಎಂದು ತಿಳಿಸಿದ್ದಾರೆ. ಇದನ್ನು ನೋಡಿ ಹನ್ಸಲ್ ಮೆಹ್ತಾ 'ದೊಡ್ಡ ಕ್ರೂರಿ'(ಕ್ರೂರಿ X 100) ಎಂದು ಕಾಮೆಂಟ್ ಮಾಡಿದ್ದಾರೆ.
ಹನ್ಸಲ್ ಮೆಹ್ತಾ ಮಾತ್ರವಲ್ಲ, ಹಲವರು ಬಾಲಕೃಷ್ಣ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಬಾಲಯ್ಯ ವೇದಿಕೆ ಏರುವ ಮುನ್ನ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದರು. ಈ ವೇಳೆ ಅವರ ಕಾಲಿನ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯ ಇದ್ದಂತೆ ವೀಡಿಯೋ ವೈರಲ್ ಆಗುತ್ತಿದೆ. ಅಂದರೆ ಕಾರ್ಯಕ್ರಮದ ನಡುವೆಯೂ ಬಾಲಯ್ಯ ಮದ್ಯ ಸೇವಿಸಿದ್ದಾರೆ, ಕುಡಿದ ಮತ್ತಿನಲ್ಲಿ ವೇದಿಕೆ ಮೇಲೆ ಆ ರೀತಿ ನಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದಾರೆ.
ಬಾಲಯ್ಯ ಅಭಿಮಾನಿಗಳು ಮಾತ್ರ ಈ ಆರೋಪವನ್ನು ಒಪ್ಪಲು ಸಿದ್ಧರಿಲ್ಲ. ಬಾಲಕೃಷ್ಣ ಕೊಂಡ ರೋಷಾವೇಶದಿಂದ ನಡೆದುಕೊಳ್ಳುತ್ತಾರೆ. ಈ ಹಿಂದೆ ಕೂಡ ಆ ಬಗ್ಗೆ ನಾವು ನೋಡಿದ್ದೇವೆ. ಇನ್ನು ಬಾಲಯ್ಯ ಕಾಲಿನ ಬಳಿ ಬಾಟಲ್‌ನಲ್ಲಿ ಮದ್ಯ ಇರುವಂತೆ ಕಾಣಿಸಿದೆ. ಆದರೆ ಅವರು ಅದನ್ನು ಕುಡಿದಿದ್ದು ಎಲ್ಲೂ ಕಾಣಿಸಿಲ್ಲ. ಇನ್ನು ಆ ಬಾಟಲ್‌ನಲ್ಲಿ ಇದ್ದಿದ್ದು ಮದ್ಯ ಎಂದು ಹೇಳಲು ಸಾಧ್ಯವಿಲ್ಲ. ಅದು ಬೇರೆ ಪಾನೀಯ ಆಗಿರಬಹುದು. ನಿಮ್ಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಬಾಲಯ್ಯ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿರುವುದರಿಂದ ಅಂಜಲಿ ಅವರನ್ನು ತಳ್ಳಿದ ಬಗ್ಗೆ ಪ್ರತಿಪಕ್ಷ ನಾಯಕರು ಟೀಕಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆಲ್ಲಾ ಮಾಡಬಹುದಾ? ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ಇದೆಲ್ಲದರ ನಡುವೆ ಬಾಲಯ್ಯ ಕ್ರೂರಿ ಎಂದು ಬಾಲಿವುಡ್ ಫಿಲ್ಮ್ ಮೇಕರ್ ಹನ್ಸಲ್ ಮೆಹ್ತಾ ಹೇಳಿರುವುದು ವೈರಲ್ ಆಗುತ್ತಿದೆ. ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ಅಂಜಲಿ ಹಾಗೂ ನೇಹಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.


Click it and Unblock the Notifications











