ಬೆಂಗಳೂರು ನೀನು ನನಗೆ ಮೋಸ ಮಾಡಿದೆ ; 8 ಲಕ್ಷ ಕಳೆದುಕೊಂಡು ಗೋಳಾಡಿದ ನಟಿ
ಎಲ್ಲರಿಗೆ ಗೊತ್ತಿರುವಂತೆ ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ. ಆದರೆ ಈಗೀಗ ಬದಲಾದ ಕಾಲದಲ್ಲಿ ಈ ನಂಬಿಕೆಯನ್ನು ಯಾರು ಹೇಗೆ ಬೇಕಾದರು ಬಳಸಿಕೊಳ್ಳಬಹುದು ಎನ್ನುವಂತಾಗಿದೆ. ಹೊಂಚು ಹಾಕಿ ಸಂಚು ಮಾಡಿ ಗಂಟು ಹೊಡೆಯಲು ಇಲ್ಲಿ ಹಲವರು ದಿನನಿತ್ಯ ಹಲವು ಬಗೆಯ ಸರ್ಕಸ್ ಮಾಡುತ್ತಲಿರುತ್ತಾರೆ.
ನಮ್ಮ ಪ್ರತಿಯೊಂದು ಕ್ರಿಯೆಗೆ ಅದರದ್ದೇ ಆದ ಪ್ರತಿಫಲ ಇರುತ್ತೆ ಎನ್ನುವುದನ್ನು ಕೂಡ ಮರೆಯುವ ಇವರು ನಂಬಿಕೆ ದ್ರೋಹ ಮಾಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಪಾರುಲ್ ಗುಲಾಟಿ ಅವರ ಪ್ರಕರಣ.

ಹೌದು, ಪಾರುಲ್ ಗುಲಾಟಿ.. ಬಾಲಿವುಡ್‌ನ ಬೆಡಗಿ. ''ಬುರ್‍ರಾಆಆ'' ಎಂಬ ಪಂಜಾಬಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪಾರುಲ್ ವೆಬ್ ಸರಣಿ ನೋಡುವ ಅಭ್ಯಾಸ ಇರುವವರಿಗೆ ತುಂಬಾನೇ ಚಿರಪರಿಚಿತ. ''ಗರ್ಲ್ಸ್ ಹಾಸ್ಟೆಲ್''.. ''ಹಕ್ ಸೇ''.. ''ಹೇ ಪ್ರಭು''.. ''ಇಲಿಗಲ್''.. ''ಮೇಡ್ ಇನ್ ಹೆವನ್ ಸೀಸನ್ 2''.. ''ಯುರ್ ಆನರ್''.. ಇವರ ಕೆಲ ಪ್ರಖ್ಯಾತ ವೆಬ್ ಸರಣಿಗಳು. ಇನ್ನು ಪಾರುಲ್ ಕೇವಲ ಅಭಿನೇತ್ರಿ ಮಾತ್ರ ಅಲ್ಲ. ಉದ್ಯಮಿ ಕೂಡ ಹೌದು. ಇವರದ್ದೇ ''ನಿಶ್ ಹೇರ್'' ಎಂಬ ಬ್ಯ್ರಾಂಡ್ ಇದೆ. ದೆಹಲಿ, ಹೈದರಾಬಾದ್, ಪುಣೆ, ಗೋವಾದಲ್ಲಿ ಇವರ ''ನಿಶ್ ಹೇರ್'' ನ ಬ್ಯ್ರಾಂಚ್ ಗಳಿವೆ. ಮುಂಬೈನಲ್ಲಿಯೇ ಮೂರು ಮಳಿಗೆಗಳಿವೆ. ಇಂಥಾ ಪಾರುಲ್ ಗುಲಾಟಿಯ ನಂಬಿಕೆಗೆ ಬೆಂಗಳೂರಿನಲ್ಲಿ ಇಬ್ಬರು ದ್ರೋಹ ಬಗೆದಿದ್ದಾರೆ.
ಬೆಂಗಳೂರಿನಲ್ಲಿ ಆಗಿದ್ದೇನು..?
ಭಾರತದ ಬೇರೆ ಕಡೆ ಇರುವಂತೆ ಬೆಂಗಳೂರಿನ ಲ್ಯಾವಲೆ ರೋಡ್‌ನಲ್ಲಿ ಪಾರುಲ್ ಅವರ ನಿಶ್ ಹೇರ್ ಬ್ಯ್ರಾಂಚ್ ಇದೆ. ಕಳೆದ ವರ್ಷ ಸೆಪ್ಟೆಂಬರ್ 15ರಂದು ಈ ಬ್ಯ್ರಾಂಚ್‌ಉದ್ಘಾಟನೆಯಾಗಿತ್ತು. ಬೇರೆ ಎಲ್ಲೆಡೆ ಇರುವಂತೆ ಇಲ್ಲಿಯೂ ಎಲ್ಲವೂ ಸರಾಗವಾಗಿದೆ ಎಂದೇ ಪಾರುಲ್ ಅಂದುಕೊಂಡಿದ್ದರು. ಕೆಲಸಕ್ಕೆ ಬಂದಿರುವವರನ್ನು ಕಣ್ಮುಚ್ಚಿ ನಂಬಿ ಮುಂಬೈನಲ್ಲಿ ನೆಮ್ಮದಿಯಿಂದ ಇದ್ದರು. ಆದರೆ, ಅದ್ಯಾಕೋ ಕಳೆದ ಕೆಲ ದಿನಗಳಿಂದ ಪಾರುಲ್‌ಗೆ ಬೆಂಗಳೂರಿನ ಔಟ್‌ಲೆಟ್‌ನಲ್ಲಿನ ಲೆಕ್ಕ ತಪ್ಪುತ್ತಿದೆಯಲ್ಲ ಎನ್ನುವ ಪ್ರಶ್ನೆ ಕಾಡಲು ಶುರುವಾಗಿತ್ತು.
ಇನ್ನು ಪಾರುಲ್ ತಮ್ಮ ಈ ನಿಶ್ ಹೇರ್ ಸಾಮ್ರಾಜ್ಯವನ್ನು ರಾತ್ರೋ ರಾತ್ರಿ ಕಟ್ಟಿಲ್ಲ. ಹಲವಾರು ವರ್ಷ ಕನಸು ಕಂಡು, ಬೆವರು ಸುರಿಸಿ ಸೃಷ್ಟಿಸಿರುವ ಸಾಮ್ರಾಜ್ಯ ಇದು. ಇವತ್ತು ಇದರ ಬೆಲೆ 50 ಕೋಟಿಗೂ ಅಧಿಕ ಇದೆ. ಹೀಗಾಗಿಯೇ ಪಾರುಲ್‌ಗೆ ಕಾರ್ಪೋರೇಟ್ ವ್ಯವಹಾರದ ಸೂಕ್ಷ್ಮತೆ ಚೆನ್ನಾಗಿಯೇ ಗೊತ್ತು. ಈ ಹಿನ್ನೆಲೆ ಕಾಲ ಕಾಲಕ್ಕೆ ಆಡಿಟಿಂಗ್ ನಡೆದರೂ ಕೂಡ ಬೆಂಗಳೂರು ಸ್ಟೋರ್ ನ ಲೆಕ್ಕ ಮಾತ್ರ ತಾಳೆಯಾಗದಿರುವದನ್ನು ನೋಡಿ ಅನುಮಾನಗೊಂಡ ಪಾರುಲ್ ಹೇಳದೇ ಕೇಳದೇ ಮುಂಬೈದಿಂದ ಸೀದಾ ಬೆಂಗಳೂರಿಗೆ ಬಂದಿಳಿದಿದ್ದಾರೆ. ಲ್ಯಾವೆಲ್ಲೆ ರೋಡ್‌ನಲ್ಲಿರುವ ಸ್ಟೋರ್ ಗೆ ಸಪ್ರೈಸ್ ವಿಸಿಟ್ ಹಾಕಿದ್ದಾರೆ.
ಲೇಡಿ ಸೇಲ್ಸ್ ಎಕ್ಸಿಕ್ಯೂಟಿವ್ ಎಸ್ಕೇಪ್
ಒಂದಿಲ್ಲೊಂದು ದಿನ ಪಾರುಲ್ ಹೀಗೆ ಏಕಾಏಕಿ ದಾಳಿ ಮಾಡಬಹುದು ಎನ್ನುವ ಲೆಕ್ಕಾಚಾರವನ್ನು ಸ್ಟೋರ್ ನಲ್ಲಿನ ಲೇಡಿ ಸೇಲ್ಸ್ ಎಕ್ಸಿಕ್ಯೂಟಿವ್ ಮೊದಲೇ ಹಾಕಿದ್ದಳಾ ಗೊತ್ತಿಲ್ಲ. ಆದರೆ. ಈಕೆಯ ಕೈಯಲ್ಲಿ ಸ್ಟೋರ್ ನ ಸಿಸಿಟಿವಿಯ ನಿಯಂತ್ರಣ ಇತ್ತು. ಈ ಹಿನ್ನೆಲೆ ಪಾರುಲ್ ಸ್ಟೋರ್‌ಗೆ ಬರುತ್ತಿದ್ದಂತೆಯೇ ಬೆಚ್ಚಿ ಬಿದ್ದಿರುವ ಸಿಸಿಟಿವಿ ಕ್ಯಾಮೆರಾದ ಆಕ್ಸೆಸ್ ಹೊಂದಿದ್ದ ಸೇಲ್ಸ್ ಎಕ್ಸಿಕ್ಯೂಟಿವ್ ಯುವತಿ, ಅನಾರೋಗ್ಯದ ನೆಪವೊಡ್ಡಿ ರಜೆ ಹಾಕಿದ್ದಾಳೆ. ಆದರೆ , ಸ್ಟೋರ್ ಮ್ಯಾನೇಜರ್ ಮಾತ್ರ ಅಲ್ಲೇ ಇದ್ದ ಕಾರಣ ಸಿಕ್ಕಿಬಿದ್ದಿದ್ದಾನೆ.

ವಂಚಿಸಿದ್ದು ಹೇಗೆ ?
ಸ್ಟೋರ್ ಮ್ಯಾನೇಜರ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಯುವತಿ ಇಬ್ಬರು ಸೇರಿಕೊಂಡು ದಿನ ನಿತ್ಯ 15,000 ದಿಂದ 20,000 ರೂಪಾಯಿ ಮೌಲ್ಯದ ಹೇರ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಆ ಹಣವನ್ನು ಕಂಪನಿಯ ಅಧಿಕೃತ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬದಲು, ಗ್ರಾಹಕರಿಂದ ನೇರವಾಗಿ ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ''ನಿಶ್ ಹೇರ್'' ಬ್ರ್ಯಾಂಡ್ ಹೆಸರನ್ನು ಬಳಸಿ, ಅದರದ್ದೇ ಲಕ್ಸುರಿ ಪ್ಯಾಕೇಜಿಂಗ್‌ನಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದ್ದರು. ಆದರೆ ಹಣ ಪಾವತಿ ಮಾಡುವ ಸಮಯ ಬಂದಾಗ, ಗ್ರಾಹಕರಿಗೆ ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್‌ಗಳನ್ನು (QR Codes) ಸ್ಕ್ಯಾನ್ ಮಾಡಲು ಅಥವಾ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸೂಚಿಸುತ್ತಿದ್ದರು. ಇದರಿಂದಾಗಿ ಕಂಪನಿಯ ಲೆಕ್ಕಕ್ಕೆ ಯಾವುದೇ ಹಣ ಜಮೆಯಾಗುತ್ತಿರಲಿಲ್ಲ, ಬದಲಿಗೆ 100% ಲಾಭ ನೇರವಾಗಿ ಈ ಸಿಬ್ಬಂದಿಗಳ ಜೇಬು ಸೇರುತ್ತಿತ್ತು. ಇತ್ತ ಉತ್ಪನ್ನಗಳು ಖಾಲಿಯಾಗುತ್ತಿದ್ದರೂ ಕಂಪನಿಗೆ ಮಾತ್ರ ನಯಾಪೈಸೆ ಆದಾಯ ಬರುತ್ತಿರಲಿಲ್ಲ.
ಪಾರುಲ್ ಕಣ್ಣೀರು
ತನಗಾದ ಈ ನಂಬಿಕೆ ದ್ರೋಹದಿಂದ ಸಂಪೂರ್ಣವಾಗಿ ಕುಸಿದು ಹೋಗಿರುವ ಪಾರುಲ್ ಅವರು ನನ್ನ ಉತ್ಪನ್ನಗಳನ್ನು, ನನ್ನ ಪ್ಯಾಕೇಜಿಂಗ್ ಬಳಸಿ, ನನ್ನ ಹೆಸರಿನಲ್ಲೇ ಮಾರಾಟ ಮಾಡಿ, ಹಣವನ್ನು ಮಾತ್ರ ತಾವೇ ನುಂಗಿದ್ದಾರೆ. ಅವರು ನನಗೆ ಮಾತ್ರವಲ್ಲ, ಗ್ರಾಹಕರಿಗೂ ಮೋಸ ಮಾಡಿದ್ದಾರೆ" ಎಂದು ಭಾವುಕರಾಗಿದ್ದಾರೆ. ಇಂತಹ ನೀಚ ಬುದ್ಧಿಯ ಜನರಿಗೆ ಬೇರೆಲ್ಲೂ ಕೆಲಸ ಸಿಗಬಾರದು ಎಂಬುದಷ್ಟೇ ನನ್ನ ಉದ್ದೇಶ. ಇವರಿಗೆ ನಿಯತ್ತೇ ಇಲ್ಲ, ಎಲ್ಲಿಗೆ ಹೋದರೂ ಇವರು ಕಳ್ಳತನ ಮಾಡುತ್ತಾರೆ. ಇವರು ಅತಿ ಕೀಳು ಮಟ್ಟದ ಜನರು ದಯಮಾಡಿ ಈ ಇಬ್ಬರಿಗೆ ಯಾರು ಕೆಲಸ ಕೊಡಬೇಡಿ, ನನ್ನಂತೆ ಮೋಸ ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಬೆಂಗಳೂರು ನೀನು ನನಗೆ ದ್ರೋಹ ಮಾಡಿದೆ ಎಂದು ಬಿಕ್ಕಿದ್ದಾರೆ.
ಗ್ರಾಹಕರ ಹತ್ತಿರ ಮನವಿ
ಇದೇ ವೇಳೆ ತಮ್ಮ ಗ್ರಾಹಕರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿರುವ ಪಾರುಲ್ ಗುಲಾಟಿ, ಒಂದು ವೇಳೆ ನೀವು ಕಂಪನಿಯ ಅಧಿಕೃತ ಕ್ಯೂಆರ್ ಕೋಡ್ ಅಥವಾ ಬ್ಯಾಂಕ್ ಖಾತೆ ಬದಲಾಗಿ, ನೇರವಾಗಿ ಸಿಬ್ಬಂದಿಯ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ, ನೀವೂ ವಂಚನೆಗೊಳಗಾಗಿರಬಹುದು. ಹೀಗಾಗಿ, ಯಾವುದೇ ಖರೀದಿ ಮಾಡುವಾಗ ಕಡ್ಡಾಯವಾಗಿ ಬಿಲ್ ಕೇಳಿ ಮತ್ತು ಹಣ ಯಾರ ಖಾತೆಗೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸಿ ಎಂದು ಮನವಿ ಮಾಡಿಕೊಂಡಿದ್ಧಾರೆ.


Click it and Unblock the Notifications