'ಪಠಾಣ್' ನೋಡಲು ಬಾಂಗ್ಲಾದೇಶದಿಂದ ಬಂದ ಅಭಿಮಾನಿಗಳು, ಪಾಕ್‌ನಲ್ಲಿ ಅಕ್ರಮ ಪ್ರದರ್ಶನ!
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಹನ್ನೆರಡು ದಿನಗಳಲ್ಲಿ ಸಿನಿಮಾ 850 ಕೋಟಿಗೂ ಹೆಚ್ಚು ಹಣ ಗಳಿಸಿದೆ.
ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಲ್ಲಿ ರಾಜಕೀಯ ಕಾರಣಗಳಿಗಾಗಿ ಸಿನಿಮಾ ಬಿಡುಗಡೆ ಆಗಿಲ್ಲವಾದರೂ ಅಲ್ಲಿನ ಅಭಿಮಾನಿಗಳು ಸಹ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ.
ಹೌದು, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಲ್ಲಿ ಭಾರತದ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆದರೆ ಆ ದೇಶದ ಶಾರುಖ್ ಖಾನ್ ಅಭಿಮಾನಿಗಳು ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ.

ಬಾಂಗ್ಲಾದೇಶದ ಕೆಲ ಶಾರುಖ್ ಖಾನ್ ಅಭಿಮಾನಿಗಳು 'ಪಠಾಣ್' ಸಿನಿಮಾ ನೋಡಲು ಭಾರತಕ್ಕೆ ಆಗಮಿಸಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಕೆಲ ಅಭಿಮಾನಿಗಳು ತ್ರಿಪುರದ ಅಗರ್ತಲಾಗೆ ಆಗಮಿಸಿ ಅಲ್ಲಿ ಸಿನಿಮಾವನ್ನು ನೋಡಿ ಮರಳಿ ತಮ್ಮ ದೇಶಕ್ಕೆ ತೆರಳಿದ್ದಾರೆ. ಬಾಂಗ್ಲಾದ ಶಾರುಖ್ ಅಭಿಮಾನಿಗಳ ಈ ಸಾಹಸಕ್ಕೆ ಭಾರತದ ಶಾರುಖ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ಪಾಕಿಸ್ತಾನದ ಶಾರುಖ್ ಖಾನ್ ಅಭಿಮಾನಿಗಳು ಅಕ್ರಮವಾಗಿ 'ಪಠಾಣ್' ಸಿನಿಮಾ ವೀಕ್ಷಿಸಿದ್ದಾರೆ. ಪಾಕಿಸ್ತಾನದಲ್ಲಿ ಸಹ ಭಾರತದ ಸಿನಿಮಾಗಳನ್ನು ಪ್ರದರ್ಶಿಸುವಂತಿಲ್ಲ ಹಾಗಿದ್ದರೂ ಕೆಲವು ಚಿತ್ರಮಂದಿರಗಳಲ್ಲಿ 'ಪಠಾಣ್' ಸಿನಿಮಾವನ್ನು ಅಕ್ರಮವಾಗಿ ಪ್ರದರ್ಶಿಸಲಾಗಿದೆ. ಅಲ್ಲಿ ಸಿನಿಮಾ ಟಿಕೆಟ್ ಬೆಲೆ 500 ರಿಂದ 1000 ನಿಗದಿಪಡಿಸಲಾಗಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲಾಗಿದೆ.
ಆದರೆ ಈ ಅಕ್ರಮ ಸಿನಿಮಾ ಪ್ರದರ್ಶನಕ್ಕೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಸಿದ್ದು, ಅಕ್ರಮವಾಗಿ ಸಿನಿಮಾ ಪ್ರದರ್ಶನ ಮಾಡುವವರಿಗೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಸಿಕ್ಕಿಹಾಕಿಕೊಂಡರೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ಪಾಕ್ ಸೆನ್ಸಾರ್ ಬೋರ್ಡ್ ಎಚ್ಚರಿಕೆ ನೀಡಿದೆ.
'ಪಠಾಣ್' ಸಿನಿಮಾವು ಸ್ಪೈ ಥ್ರಿಲ್ಲರ್ ಆಗಿದ್ದು ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ.


Click it and Unblock the Notifications











