ದೇಶದ್ರೋಹದ ಆರೋಪ; ಖ್ಯಾತ ನಟಿಯ ಬಂಧನ, ವಿಚಾರಣೆ
ನೆರೆಯ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಶೇಖ್ ಹಸೀನಾ ಮಾಡಿದ ಭಾಷಣದಿಂದ ಆಕ್ರೋಶಗೊಂಡ ವಿರೋಧಿ ಬಣ ಢಾಕಾದಲ್ಲಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದೆ. ಇದೆಲ್ಲದರ ನಡುವೆ ದೇಶದ್ರೋಹದ ಆರೋಪದಲ್ಲಿ ಬಾಂಗ್ಲಾ ನಟಿ, ನಿರ್ದೇಶಕಿ ಮೆಹರ್ ಅಫ್ರೋಜ್ ಶಾನ್ ಬಂಧನವಾಗಿದೆ.
ಗುರುವಾರ(ಫೆಬ್ರವರಿ 6) ರಾತ್ರಿ ಮೆಹರ್ ಅಫ್ರೋಜ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೇಶದ ವಿರುದ್ಧ ಪಿತೂರಿ ನಡೆಸಿದ ಆರೋಪದ ಮೇಲೆ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ (DMP)ಯ ಪತ್ತೇದಾರಿ ವಿಭಾಗದ (DB) ತಂಡವು ಆಕೆಯನ್ನು ಬಂಧಿಸಿದೆ ಎಂದು ಹೆಚ್ಚುವರಿ ಡಿಎಂಪಿ ಆಯುಕ್ತ ರೆಜೌಲ್ ಕರೀಮ್ ಮಲ್ಲಿಕ್ ಮಾಹಿತಿ ನೀಡಿದ್ದಾರೆ.

ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ನಟಿ ಮೆಹರ್ ಅಫ್ರೋಜ್ ಟೀಕಿಸಿದ್ದರು ಎಂದು ವರದಿಯಾಗಿದೆ. ಜಮಾಲ್ಪುರದಲ್ಲಿ ನಟಿ ಮೆಹರ್ ಕುಟುಂಬ ಸದಸ್ಯರು ವಾಸವಾಗಿದ್ದಾರೆ. ಸ್ಥಳಿಯ ಮಾಧ್ಯಮಗಳ ವರದಿ ಪ್ರಕಾರ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ನಟಿಯ ಬಂಧನವಾಗಿದೆ.
ನಟಿ ಮೆಹರ್ ಕುಟುಂಬಕ್ಕೆ ರಾಜಕೀಯರಂಗದ ನಂಟು ಇದೆ. ಸ್ವತಃ ನಟಿ ಮೆಹರ್ ಕಳೆದ ಚುನಾವಣೆಯಲ್ಲಿ ಅವಾಮಿ ಲೀಗ್ ಅಭ್ಯರ್ಥಿಯಾಗಿ ಮೀಸಲು ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ತಂದೆ ಮೊಹಮ್ಮದ್ ಅಲಿ ಕಳೆದ ರಾಷ್ಟ್ರೀಯ ಚುನಾವಣೆಗೆ ಅವಾಮಿ ಲೀಗ್ ಕಡೆಯಿಂದ ನಾಮನಿರ್ದೇಶನ ಬಯಸಿದ್ದರು. ಇನ್ನು ಮೆಹರ್ ಅವರ ತಾಯಿ ಬೇಗಂ ತಹುರಾ ಅಲಿ, ಮೀಸಲು ಮಹಿಳಾ ಸ್ಥಾನದಿಂದ ಎರಡು ಅವಧಿಗೆ ಬಾಂಗ್ಲಾ ಸಂಸತ್ತಿನಲ್ಲಿ ಕೆಲಸ ಮಾಡಿದ್ದರು.
2004ರಲ್ಲಿ ಚಿತ್ರ ನಿರ್ದೇಶಕ ಹುಮಾಯೂನ್ ಅಹ್ಮದ್ ಎಂಬುವವರ ಜೊತೆ ನಟಿ ಮೆಹರ್ ಮದುವೆ ಆಗಿತ್ತು. ಇಬ್ಬರು ಗಂಡು ಮಕ್ಕಳು ಇದ್ದಾರೆ. 2012ರಲ್ಲಿ ಪತಿ ನಿಧನರಾಗಿದ್ದರು. 1999ರಲ್ಲಿ ಬಂದಿದ್ದ 'ಸ್ರಬೊನ್ ಮೇಘರ್ ದಿನ್' ಚಿತ್ರದಲ್ಲಿ ಮೆಹರ್ ಮೊದಲಿಗೆ ಬಣ್ಣ ಹಚ್ಚಿದ್ದರು. 'ದುಯಿ ದುವಾರಿ', 'ಚಂದ್ರೋಕೋಥ', 'ಶ್ಯಾಮೋಲ್ ಛಾಯಾ' ಹಾಗೂ 'ಅಮರ್ ಅಚೆ ಜೋಲ್' ಎಂಬ ಚಿತ್ರಗಳಲ್ಲಿ ಮುಂದೆ ನಟಿಸಿದರು. ಈ ಎಲ್ಲಾ ಚಿತ್ರಗಳಿಗೆ ಪತಿ ಹುಮಾಯೂನ್ ಅಹ್ಮದ್ ಆಕ್ಷನ್ ಕಟ್ ಹೇಳಿದ್ದರು.
ಸಿನಿಮಾ ಮಾತ್ರವಲ್ಲ ಬಾಂಗ್ಲಾ ಕಿರುತೆರೆಯಲ್ಲಿ ಕೂಡ ನಟಿ ಮೆಹರ್ ಅಫ್ರೋಜ್ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ಕಿರುತೆರೆ ನಾಟಕ, ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ನಿರ್ದೇಶನ ಮಾಡಿದ್ದರು. ಗಾಯಕಿಯಾಗಿ ಕೆಲ ಹಾಡುಗಳನ್ನು ಹಾಡಿದ್ದಾರೆ. ಸದ್ಯ ನಟಿ ಮೆಹರ್ ಅಫ್ರೋಜ್ ಬಂಧನ ವಿಚಾರ ಆಕೆಯ ಅಭಿಮಾನಿಗಳಲ್ಲಿ ಆತಂಕ ತಂದಿದೆ.


Click it and Unblock the Notifications











