'ತಾಂತ್ರಿಕ ಕಾರಣ': ನಟ ಸನ್ನಿ ಡಿಯೋಲ್ ಬಂಗಲೆ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್!
ಮುಂಬೈನ ಜುಹುದಲ್ಲಿರುವ ಬಾಲಿವುಡ್ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಬಂಗಲೆಯ ಹರಾಜು ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ನಟ ಸನ್ನಿ ಡಿಯೊಲ್ ಬ್ಯಾಂಕ್ ಬರೋಡಾದಲ್ಲಿ ಮಾಡಿದ್ದ 55.99 ಕೋಟಿ ರೂಪಾಯಿ ಸಾಲ, ಬಡ್ಡಿ ಮತ್ತು ದಂಡವನ್ನು 2022ರ ಡಿಸೆಂಬರ್ ತಿಂಗಳಿನಿಂದ ಪಾವತಿಸಿಲ್ಲ. ಹೀಗಾಗಿ ಆಗಸ್ಟ್ 25 ರಂದು ನಡೆಯಲಿರುವ ಇ-ಹರಾಜಿನಲ್ಲಿ ಸನ್ನಿ ಡಿಯೋಲ್ ಅವರ ಬಂಗಲೆಯನ್ನು ಹರಾಜು ಹಾಕುವುದಾಗಿ ಭಾನುವಾರ ಬ್ಯಾಂಕ್ ಆಫ್ ಬರೋಡಾ ನೋಟಿಸ್ ನೀಡಿತ್ತು.

ಆದರೆ, "ತಾಂತ್ರಿಕ ಕಾರಣಗಳನ್ನು" ಉಲ್ಲೇಖಿಸಿ, ಮುಂಬೈನ ಜುಹುದಲ್ಲಿರುವ ನಟ ಸನ್ನಿ ಡಿಯೋಲ್ ಅವರ ಬಂಗಲೆಯ ಇ-ಹರಾಜಿನ ಕುರಿತು ಬ್ಯಾಂಕ್ ಆಫ್ ಬರೋಡಾ (BoB) ಸೋಮವಾರ ತನ್ನ ನೋಟಿಸ್ ಅನ್ನು ಹಿಂತೆಗೆದುಕೊಂಡಿದೆ.
ಸೋಮವಾರ "ಅಜಯ್ ಸಿಂಗ್ ಡಿಯೋಲ್ ಅಲಿಯಾಸ್ ಶ್ರೀ ಸನ್ನಿ ಡಿಯೋಲ್ ಅವರಿಗೆ ಸಂಬಂಧಿಸಿದಂತೆ ಇ-ಹರಾಜು ನೋಟೀಸ್‌ಗೆ ಸಂಬಂಧಿಸಿದ ಕೊರಿಜೆಂಡಮ್ (ಸರಿಪಡಿಸಬೇಕಾದ ದೋಷ) ಅನ್ನು ತಾಂತ್ರಿಕ ಕಾರಣಗಳಿಂದ ಹಿಂತೆಗೆದುಕೊಳ್ಳಲಾಗಿದೆ" ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ತಿಳಿಸಿದೆ.
ಸನ್ನಿ ವಿಲ್ಲಾ ಎಂದು ಕರೆಯಲ್ಪಡುವ ಜುಹು ಆಸ್ತಿಯ ಹರಾಜು 51.43 ಕೋಟಿಯಿಂದ ಪ್ರಾರಂಭವಾಗುತ್ತದೆ ಎಂದು ಬ್ಯಾಂಕ್ ಭಾನುವಾರ ತಿಳಿಸಿತ್ತು. ಕನಿಷ್ಠ ಬಿಡ್ ಮೊತ್ತವನ್ನು 5.14 ಕೋಟಿಗೆ ನಿಗದಿಪಡಿಸಲಾಗಿತ್ತು. ಹೆಚ್ಚುವರಿಯಾಗಿ, ಸನ್ನಿ ವಿಲ್ಲಾ ಮತ್ತು ಸನ್ನಿ ಸೌಂಡ್ಸ್ ಅನ್ನು ಹೊಂದಿರುವ 599.44 ಚದರ ಮೀಟರ್ ಆಸ್ತಿಯನ್ನು ಸಹ ಹರಾಜು ಮಾಡಲು ನಿರ್ಧರಿಸಲಾಗಿತ್ತು. ಸನ್ನಿ ಸೌಂಡ್ಸ್ ಡಿಯೋಲ್ಸ್ ಒಡೆತನದ ಕಂಪನಿಯಾಗಿದ್ದು, ಸಾಲಕ್ಕೆ ಕಾರ್ಪೊರೇಟ್ ಗ್ಯಾರಂಟರ್ ಆಗಿದೆ.

2002 ರ SARFAESI ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಹರಾಜು ನಡೆಯುವುದನ್ನು ತಡೆಯಲು ಸನ್ನಿ ಡಿಯೋಲ್ ಇನ್ನೂ ತಮ್ಮ ಬಾಕಿ ಇರುವ ಸಾಲವನ್ನು ಬ್ಯಾಂಕ್‌ನಲ್ಲಿ ಇತ್ಯರ್ಥಪಡಿಸಬಹುದು ಎಂದು ಭಾನುವಾರದ ಸೂಚನೆಯಲ್ಲಿ ತಿಳಿಸಲಾಗಿತ್ತು. ಆದರೆ, ಹರಾಜು ನೋಟೀಸ್ ನೀಡಿ ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿಯೇ ವಾಪಸ್ ಪಡೆಯಲಾಗಿದೆ.
ಇನ್ನು, ನಟ ರಾಜಕಾರನಿ ಸನ್ನಿ ಡಿಯೋಲ್ ಅವರಿರ ಬಂಗಲೆ ಹರಾಜಿಗೆ ನೀಡಲಾಗಿದ್ದ ನೋಟಿಸ್ ಹಿಂಪಡೆದಿರುವ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬ್ಯಾಂಕ್‌ನ ನೋಟಿಸ್‌ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಇದನ್ನು ಹಿಂಪಡೆಯಲು ತಾಂತ್ರಿಕ ಕಾರಣಗಳು ಎಲ್ಲಿಂದ ಬಂದಿವೆ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, "ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಜುಹು ನಿವಾಸವನ್ನು ಬ್ಯಾಂಕ್ ಆಫ್ ಬರೋಡಾ ಅವರು ₹ 56 ಕೋಟಿ ಪಾವತಿಸದ ಕಾರಣ ಇ-ಹರಾಜಿಗೆ ಇಟ್ಟಿದೆ ಎಂದು ನಿನ್ನೆ ಮಧ್ಯಾಹ್ನ ಇಡೀ ದೇಶಕ್ಕೆ ತಿಳಿಯಿತು. ಇಂದು ಬೆಳಿಗ್ಗೆ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, 'ತಾಂತ್ರಿಕ ಕಾರಣಗಳಿಂದ' ಬ್ಯಾಂಕ್ ಆಫ್ ಬರೋಡಾ ಹರಾಜು ನೋಟಿಸ್ ಅನ್ನು ಹಿಂಪಡೆದಿದೆ ಎಂಬುದು ರಾಷ್ಟ್ರಕ್ಕೆ ತಿಳಿದುಬಂದಿದೆ. ಈ 'ತಾಂತ್ರಿಕ ಕಾರಣಗಳನ್ನು' ಪ್ರಚೋದಿಸಿದವರು ಯಾರು ಎಂದು ಆಶ್ಚರ್ಯಪಡುತ್ತೀರಾ..?" ಎಂದು ಆಡಳಿತ ಪಕ್ಷದ ಕಾಲೆಳೆದಿದ್ದಾರೆ.
ಇನ್ನು, ನಟ ಸನ್ನಿ ಡಿಯೋಲ್ ಅಭಿನಯದ ಗದರ್ 2 ದೇಶಾದ್ಯಂತ ಭಾರಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎರಡನೇ ವಾರವೂ ಹೌಸ್‌ಫುಲ್ ಪ್ರದರ್ಶನ ನೀಡುತ್ತಿದೆ. ಈ ಸಮಯದಲ್ಲೇ ಅವರು ಬ್ಯಾಂಕ್ ಸಾಲ ಕಟ್ಟಿಲ್ಲ ಎಂಬ ವಿಷಯವು ಬೆಳಕಿಗೆ ಬಂದಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.


Click it and Unblock the Notifications











