'ಧುರಂಧರ್' ಸಿನಿಮಾ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ರು ಕದ್ದುಮುಚ್ಚಿ ಸಿಡಿಗಳು ಮಾರಾಟ; ಬೆಲೆ ಎಷ್ಟು?
ಆದಿತ್ಯಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ 'ಧುರಂಧರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಶೀಘ್ರದಲ್ಲೇ ಚಿತ್ರದ ಸೀಕ್ವೆಲ್ ತೆರೆಗೆ ಬರಲಿದೆ. ಪಾಕಿಸ್ತಾನ ಸೇರಿದಂತೆ 6 ಗಲ್ಫ್ ದೇಶಗಳಲ್ಲಿ ಸಿನಿಮಾ ಬ್ಯಾನ್ ಆಗಿತ್ತು. ಆದರೆ ಓಟಿಟಿಗೆ ಬಂದಮೇಲೆ ಪಾಕಿಸ್ತಾನದ ಸಿನಿರಸಿಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ ಎನ್ನಲಾಗ್ತಿದೆ. ಪೈರಸಿ ಸಿಡಿ ಮಾರಾಟ ಕೂಡ ಜೋರಾಗಿದೆ.
ಪಾಕಿಸ್ತಾನ ವಿರೋಧಿ ಸಂದೇಶ ಎನ್ನುವ ಕಾರಣಕ್ಕೆ ಪಾಕಿಸ್ತಾನ, ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಲ್ಲಿ ಚಿತ್ರವನ್ನು ನಿಷೇಧಿಸಲಾಗಿತ್ತು. ಇನ್ನುಳಿದಂತೆ ವಿಶ್ವದಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ನಟರಾದ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೀಕ್ವೆಲ್ ನೋಡಲು ಸಿನಿರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

ಪಾಕಿಸ್ತಾನದ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುವ ಭಾರತೀಯ ಸೈನಿಕನ ಕಥೆ 'ಧುರಂಧರ್' ಚಿತ್ರದಲ್ಲಿದೆ. ಖಂದಹಾರ್ ಹೈಜಾಕ್, 26/11ರ ಮುಂಬೈ ದಾಳಿ ವಿಚಾರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪಾಕ್ ಒಂದು ಉಗ್ರರಾಷ್ಟ್ರ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅದೇ ಕಾರಣಕ್ಕೆ ಅಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ಆದರೆ ಪೈರಸಿ ಸಿಡಿ ಮಾರಾಟ ಅವ್ಯಹತವಾಗಿ ನಡೀತಿದೆ. ಯೂಟ್ಯೂಬರ್ ಕಾರ್ಲ ರಾಕ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅದು ಗೊತ್ತಾಗುತ್ತಿದೆ.
ಪಾಕಿಸ್ತಾನದ ಕರಾಚಿಯ ರೈನ್‌ಬೋ ಸೆಂಟರ್ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್. ಇದೊಂದು ವಿಡಿಯೋ ಎಂಟರ್‌ಟೈನ್‌ಮೆಂಟ್ ಸೆಂಟರ್ ಆಗಿದ್ದು ದೇಶದ ವೀಡಿಯೊ ಪೈರಸಿ ಉದ್ಯಮವಾಗಿ ಹೆಸರಾಗಿದೆ. ಇದೇ ರೈನ್‌ಬೋ ಸೆಂಟರ್‌ನಲ್ಲಿ ಸುತ್ತಾಡಿ ಕಾರ್ಲ ರಾಕ್, ವ್ಲಾಗ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ 'ಧುರಂಧರ್' ಸಿನಿಮಾ ಪೈರಸಿ ಸಿಡಿಯನ್ನು 50 ಪಾಕಿಸ್ತಾನದ ರೂಪಾಯಿಯಲ್ಲಿ(ಭಾರತದ ರೂಪಾಯಿಯಲ್ಲಿ 16 ರೂಪಾಯಿಗೆ) ಮಾರುತ್ತಿದ್ದಾರೆ.
ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ. ಆದರೆ ಈ ಅಂಗಡಿಯಲ್ಲಿ ನೋಡಿ ಸಿಡಿಗಳು ಸಿಗುತ್ತವೆ ಎಂದು ಕಾರ್ಲ ರಾಕ್ ತೋರಿಸಿದ್ದಾರೆ. ಅಂಗಡಿಯವನ್ನು ಮಾತನಾಡಿಸಿದ್ದಾರೆ. 50 ರೂಪಾಯಿ ಒಂದು ಸಿಡಿ ಎಂದು ಆತ ಹೇಳಿದ್ದಾನೆ.
ಪಾಕಿಸ್ತಾನದ ಲಿಯಾರಿ ಪಟ್ಟಣದ ಸುತ್ತಾ 'ಧುರಂಧರ್' ಚಿತ್ರದ ಕಥೆ ಹೆಚ್ಚಾಗಿ ಸಾಗುತ್ತದೆ. 25 ವರ್ಷಗಳ ಹಿಂದೆ ಲಿಯಾರಿ ಹೇಗಿತ್ತು ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇದನ್ನು ನೋಡಿ ಪಾಕಿಸ್ತಾನದ ಮಂದಿ ಕೂಡ ಶಾಕ್ ಆಗಿದ್ದಾರೆ. ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ್ದ ಪಾಕ್ ಪ್ರಜೆಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
ಅಂದಹಾಗೆ ಲಿಯಾರಿ ಪಟ್ಟಣದ ದೃಶ್ಯಗಳನ್ನು ಬ್ಯಾಂಕಾಕ್‌ನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿತ್ತು. 25 ವರ್ಷಗಳ ಹಿಂದಿನ ಲಿಯಾರಿ ಪಟ್ಟಣವನ್ನು ಯಥಾವತ್ ತೋರಿಸಲಾಗಿತ್ತು. ಇದನ್ನು ನೋಡಿ ಕೆಲ ಪಾಕಿಸ್ತಾನಿ ಪ್ರಜೆಗಳು ಅಚ್ಚರಿಗೊಂಡಿದ್ದರು. ಚಿತ್ರತಂಡದ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದರು.
ಮಾರ್ಚ್ 19ಕ್ಕೆ 'ಧುರಂಧರ್- 2' ಸಿನಿಮಾ ತೆರೆಗೆ ಬರಲಿದೆ. ಈದ್ ವೀಕೆಂಡ್ ಟಾರ್ಗೆಟ್ ಮಾಡಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಅದೇ ದಿನ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗಪ್ಪಳಿಸಲಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಇದು ದಶಕದ ಬಾಕ್ಸಾಫೀಸ್ ಕದನ ಎಂದೇ ಹೇಳಲಾಗ್ತಿದೆ.
ಯಶ್ ನಟನೆಯ ಟಾಕ್ಸಿಕ್ ಹಾಗೂ ಬಾಲಿವುಡ್ 'ಧುರಂಧರ್- 2' ನಡುವೆ ಭಾರೀ ಪೈಪೋಟಿ ಏರ್ಪಡುವ ಸುಳಿವು ಸಿಕ್ತಿದೆ. ಎರಡೂ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. ಇನ್ನು ಸ್ಕ್ರೀನ್‌ಗಳ ವಿಚಾರದಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











