ಇರುವುದೆಲ್ಲವ ಬಿಟ್ಟು ; ಐಶ್ವರ್ಯ ರೈ-ಸುಶ್ಮಿತಾ ಸೇನ್ ಗೆ ಸೆಡ್ಡು ಹೊಡೆದಿದ್ದ ಸುಂದರಿ ಈಗ ಸನ್ಯಾಸಿ..!
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ .. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಬರ್ಖಾ ಮದನ್ ಮತ್ತೊಂದು ಅತ್ಯುತ್ತಮ ಉದಾಹರಣೆ.
ಬರ್ಖಾ ಮದನ್.. ಒಂದ್ಕಾಲದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಖ್ಯಾತ ಮಾಡೆಲ್. ಇಷ್ಟೇ ಯಾಕೆ 1994ರಲ್ಲಿ ನಡೆದಿದ್ದ ಸೌಂದರ್ಯ ಸಮರದಲ್ಲಿನ ಫೈನಲಿಸ್ಟ್ ಕೂಡ ಹೌದು. 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಸುಶ್ಮಿತಾ ಸೇನ್ ಹಾಗೂ ಐಶ್ವರ್ಯ ರೈ ಗೆ ತೀವೃ ಸ್ಪರ್ಧೆಯನ್ನೊಡ್ಡಿದ್ದ ಬರ್ಖಾ ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಐಶ್ವರ್ಯ ಹಾಗೂ ಬರ್ಖಾಗೆ ಸೆಡ್ಡು ಹೊಡೆದು ಆ ಕಾಲದಲ್ಲಿ ಸುಶ್ಮಿತಾ ಸೇನ್ ಮಿಸ್ ಇಂಡಿಯಾ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದರು.

ಆ ನಂತರ 1996ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ಖಿಲಾಡಿಯೋ ಕಾ ಖಿಲಾಡಿ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಬರ್ಖಾ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಭೂತ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಬಾಲಿವುಡ್ ನಲ್ಲಿ ನಿರ್ಮಾಪಕಿಯಾಗಿ ಕೂಡ ತಮ್ಮ ಅದೃಷ್ಟವನ್ನ ಪರೀಕ್ಷೆ ಮಾಡಿಕೊಂಡಿದ್ದರು. ಇಂಥಹ ಬರ್ಖಾ ಥಳಕು ಬಳುಕಿನ ಜೀವನಕ್ಕೆ ಸದ್ಯಕ್ಕೆ ಗುಡ ಬೈ ಹೇಳಿದ್ದಾರೆ. ಬೌದ್ದ ಧರ್ಮವನ್ನ ಸ್ವೀಕರಿಸಿ ಸನ್ಯಾಸಿಯಾಗಿದ್ದಾರೆ

ದಲೈ ಲಾಮಾ ಅವರ ಅನುಯಾಯಿಯಾಗಿರುವ ಬರ್ಖಾ ಮದನ್, ತಮ್ಮ ಹೆಸರನ್ನ ವೆನ್ ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಬದಲಿಸಿಕೊಂಡಿದ್ದಾರೆ. ಜೀವನದ ಜಂಜಾಟಗಳಿಂದ ದೂರವಾಗಿ ಪ್ರಕೃತಿಯ ಮಡಿಲಿನಲ್ಲಿ ಧ್ಯಾನವನ್ನ ಮಾಡ್ತಿದ್ದಾರೆ. ಜಪ-ತಪ ಮಾಡುತ್ತಾ ನೆಮ್ಮದಿಯನ್ನ ಕಂಡುಕೊಳ್ಳುವ ಪ್ರಯತ್ನವನ್ನ ಮಾಡ್ತಿದ್ದಾರೆ
ಒಟ್ಟಿನಲ್ಲಿ "ಅತಿಯಾದ ಯೋಚನೆಯಿಂದ ಯಾವ ಕೆಲಸವೂ ಆಗುವುದಿಲ್ಲ, ಬದಲಾಗಿ ಅದು ನಿಮ್ಮ ಸಂತೋಷವನ್ನು ಸಾಯಿಸುತ್ತದೆ." ಎನ್ನುವ ಬುದ್ಧ ತತ್ವದಂತೆ ಯಶಸ್ಸಿನ ಉತ್ತುಂಗವನ್ನ ಕಂಡರೂ ಮತ್ತೆ ಆರಂಭದ ಶೂನ್ಯಕ್ಕೆ ಮರಳಿ ತಮ್ಮನ್ನ ತಾವು ಅವಲೋಕಿಸಿಕೊಳ್ಳುವ ನಿಟ್ಟಿನಲ್ಲಿ ಬರ್ಖಾ ಮದನ್, ಸನ್ಯಾಸತ್ವ ಸ್ವೀಕರಿಸಿ ಆಡಂಬರದ ಜೀವನಕ್ಕೆ ವಿದಾಯ ಹೇಳಿದ್ದಾರೆ. 2012ರಿಂದ ಸನ್ಯಾಸತ್ವ ಸ್ವೀಕರಿಸಿ , ಸಾಮಾನ್ಯರಲ್ಲಿ ಸಾಮಾನ್ಯರಂತೆ ಬರ್ಖಾ ಬದುಕುತ್ತಿದ್ದಾರೆ.


Click it and Unblock the Notifications











