Ameesha Patel: "ನಮ್ಮ ಅಂದ ನೋಡ್ಬೇಡಿ.. ನಟನೆ ನೋಡಿ.. ನಟಿಯರಿಗೆ ಕೆಲವೊಮ್ಮೆ ಸೌಂದರ್ಯ ಶಾಪವಾಗುತ್ತೆ": ಅಮೀಷಾ ಪಟೇಲ್
ಬಾಲಿವುಡ್‌ನಲ್ಲಿ ತಮ್ಮ ಮಾದಕ ಮೈಮಾಟ ಹಾಗೂ ನಟನೆಯಿಂದ ಅಮೀಷಾ ಪಟೇಲ್ ಮೋಡಿ ಮಾಡಿದ್ದಾರೆ. ಇತ್ತೀಚೆನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಹಾಟ್ ಪೋಟೊ, ವಿಡಿಯೋಗಳಿಂದ ಸುದ್ದಿ ಆಗಿದ್ದೇ ಹೆಚ್ಚು. ಸದ್ಯ ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಂಬೈ ಚೆಲುವೆ 'ಗದರ್'-2 ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಮೀಷಾ ಸಾಕಷ್ಟು ಸಮಸ್ಯೆಗಳನ್ನು ಎದುಸಿರುತ್ತಿದ್ದಾರೆ. ಆರ್ಥಿಕ ಸಮಸ್ಯೆ ಮಾತ್ರವಲ್ಲ, ಕೋರ್ಟ್ ಕೇಸ್, ವಿವಾದ ಹೀಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಬರೀ ವಿವಾದಗಳಿಂದ ಕಂಗೆಟ್ಟಿದ್ದ ಚೆಲುವೆಗೆ 'ಗದರ್'-2 ಸಕ್ಸಸ್ ಖುಷಿ ತಂದಿದೆ. ಈ ಸಿನಿಮಾ ಆಕೆಗೆ ನೈತಿಕವಾಗಿ ಕೊಂಚ ಬಲ ನೀಡಿದೆ.

'ಗದರ್'-2 ಗೆಲುವಿನ ಅಲೆಯಲ್ಲಿ ಅಮೀಷಾ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ನಾಯಕಿಯರ ಸೌಂದರ್ಯದ ಬಗ್ಗೆ ಈಕೆಯ ಕಾಮೆಂಟ್ಸ್ ವೈರಲ್ ಆಗುತ್ತಿವೆ. ಚೆನ್ನಾಗಿ ನಟಿಸಬೇಕು ಎನ್ನುವ ನಟಿಯರಿಗೆ ಕೆಲವೊಮ್ಮೆ ಅವರ ಸೌಂದರ್ಯವೇ ಶಾಪವಾಗುತ್ತದೆ ಎಂದು ಅಮೀಷಾ ಪಟೇಲ್ ಹೇಳಿದ್ದಾರೆ. ಸುಂದರವಾಗಿದ್ದರೆ ಸಿನಿಮಾದಲ್ಲಿ ಗ್ಲಾಮರ್ ಗೊಂಬೆಯಾಗಿ ಮಾತ್ರ ಬಳಸಿಕೊಳ್ಳುತ್ತಾರೆ ಎಂದಿದ್ದಾರೆ.
ನಾಯಕಿಯರು ಅಂದರೆ ಬರೀ ಚೆಂದವಾಗಿ ತೆರೆಮೇಲೆ ತೋರಿಸಿ ರಂಜಿಸುವುದಲ್ಲ. ಅವರ ನಟನೆಗೂ ಪ್ರಾಮುಖ್ಯತೆ ನೀಡಬೇಕು. ಅವರಲ್ಲಿ ಒಳ್ಳೆ ನಟನೆ ಇದ್ದರೂ ಬರೀ ಎಕ್ಸ್‌ಪೋಸ್ ಮಾಡಲು ಅವಕಾಶ ಕೊಡುತ್ತಾರೆ. ಬದಲಿಗೆ ನಟನೆಗೆ ಸ್ಕೋಪ್ ಇರುವ ಪಾತ್ರಗಳನ್ನು ಕೊಡುತ್ತಿಲ್ಲ" ಎಂದು ಮುಂಬೈ ಬೆಡಗಿ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕಾಗಿಯೇ ಸೌಂದರ್ಯವು ಕೆಲವೊಮ್ಮೆ ತಾರೆಯರಿಗೆ ಶಾಪವಾಗುತ್ತದೆ ಎಂದಿದ್ದಾರೆ.
ನನ್ನ ವಿಷಯದಲ್ಲೂ ಅದು ಹೀಗೆಯೇ ಆಯಿತು. 'ಕಹೋ ನಾ ಪ್ಯಾರ್ ಹೈ', 'ಗದರ್', 'ಹಮ್‌ರಾಝ್' ಚಿತ್ರಗಳಲ್ಲಿ ನಾನು ನಾಯಕರಿಗೆ ಸರಿ ಸಮಾನವಾದ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೂ ನನ್ನನ್ನು ಗ್ಲಾಮರ್ ಕೋನದಲ್ಲೇ ಪ್ರೇಕ್ಷಕರು ನೋಡಿದ್ದಾರೆ. ನನ್ನ ಅಭಿನಯದ ಬಗ್ಗೆ ಯಾರೂ ಮಾತನಾಡಲಿಲ್ಲ. ನಾನು ತೆರೆಯ ಮೇಲೆ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಕ್ಕೆ ನನ್ನ ನಟನೆ ಕಾಣಿಸಲಿಲ್ಲ ಎಂದು ಅಮಿಷಾ ಬೇಸರ ವ್ಯಕ್ತಪಡಿಸಿದ್ದಾರೆ.
ಸುಂದರವಾಗಿರು ಕಾರಣಕ್ಕೆ ನಾಯಕಿಯರಾಗಿ ಮಿಂಚುತ್ತಾರೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಸೌಂದರ್ಯ ಮತ್ತು ನಟನೆ ಮೇಳೈಸಿದಾಗ ಮಾತ್ರ ತಾರೆಯರು ಇಂಡಸ್ಟ್ರಿಯಲ್ಲಿ ಮಿಂಚುತ್ತಾರೆ ಎಂಬ ಮಾತಿದೆ. ಆ ಕಾಲದಲ್ಲಿ ನಾಯಕಿಯರ ಪಾತ್ರಗಳು ಗ್ಲಾಮರ್‌ಗಿಂತ ನಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತಿತ್ತು. ನಟಿಸಲು ಬರದಿದ್ದರೆ ಚಿತ್ರರಂಗದಿಂದ ಮರೆಯಾಗುತ್ತಿದ್ದರು. ಆದರೆ ಈಗ ಸೌಂದರ್ಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ನಟನೆಗೆ ನೀಡುತ್ತಿಲ್ಲ ಎಂದು ಆಕೆ ಹೇಳಿದ್ದಾರೆ.
ಅಮೀಶಾ ಪಟೇಲ್ ಹೇಳಿದ ಮಾತುಗಳಲ್ಲಿ ಸತ್ಯಾಂಶ ಇದೆ. ಇತ್ತೀಚಿನ ವರ್ಷಗಳಲ್ಲಿ ನಟಿಯರನ್ನು ಸಿನಿಮಾಗಳಲ್ಲಿ ಗ್ಲಾಮರ್ ಬೊಂಬೆ ರೀತಿ ಹೆಚ್ಚು ತೋರಿಸಲಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ನಟನೆಗೆ ಅವಕಾಶ ಇರುವ ಪಾತ್ರಗಳು ಸಿಗುತ್ತಿವೆ. ಒಳ್ಳೆ ನಟಿಯರು ಕೂಡ 2 ಸೀನ್, 3 ಸಾಂಗ್ಸ್‌ಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ನಟಿಯರಿಗೆ ನಟನೆಗೆ ಅವಕಾಶ ಬೇಕು ಅಂದರೆ ಮಹಿಳಾ ಪ್ರಧಾನ ಸಿನಿಮಾ ಮಾಡಬೇಕು ಎನ್ನುವಂತಾಗಿದೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಅಮೀಶಾ ಪಟೇಲ್ ಚಿತ್ರರಂಗಕ್ಕೆ ಬರೋದು ಕಷ್ಟ ಏನು ಆಗಲಿಲ್ಲ. ಆಕೆ ತಂದೆ ಅಮಿತ್ ಪಟೇಲ್ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಕ್ಲಾಸ್‌ಮೇಟ್ ಆಗಿದ್ದರು. ಹಾಗಾಗಿ ರಾಕೇಶ್ ರೋಷನ್ 'ಕಹೋ ನಾ ಪ್ಯಾರ್ ಹೈ' ಚಿತ್ರದಲ್ಲಿ ತಮ್ಮ ಮಗ ಹೃತಿಕ್ ರೋಷನ್‌ಗೆ ನಾಯಕಿಯಾಗಿ ಅಮೀಶಾಳನ್ನು ಆಯ್ಕೆ ಮಾಡಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಆಕೆ ನಟಿಸಿ ಗೆದ್ದರು.


Click it and Unblock the Notifications











