ಪಿಕ್ ಪಾಕೆಟ್ ಮಾಡಿ ಪೊಲೀಸರ ಅತಿಥಿಯಾದ ಖ್ಯಾತ ನಟಿ
ಕಳ್ಳರು ಪಿಕ್ ಪಾಕೆಟ್ ಮಾಡಿ ಪೊಲೀಸರ ಅತಿಥಿಗಳು ಆಗೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಸಾಕಷ್ಟು ಜನನಿಬಿಡ ಪ್ರದೇಶಗಳಲ್ಲಿ, ರೈಲು, ಬಸ್ಸುಗಳಲ್ಲಿ, ಹಲವು ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿ ಜನರಿಗೆ ಯಾಮಾರಿಸಿರುತ್ತಾರೆ. ಆದರೇ ಈಗ ನಾವು ಹೇಳ್ತಿರೋ ಸ್ಟೋರಿಯಲ್ಲಿ ಕಳ್ಳನ ಬದಲಾಗಿ ಓರ್ವ ಖ್ಯಾತ ನಟಿ ಪಿಕ್ ಪಾಕೆಟ್ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಈಗ ಎಲ್ಲಿ ನೋಡಿದ್ರು ಈಕೆಯದ್ದೆ ಸುದ್ದಿ. ಅಷ್ಟಕ್ಕು ಈಕೆ ಯಾರು, ಮಾಡಿದ್ದು ಏನು ಎಂಬ ಬಗ್ಗೆ ಮುಂದೆ ಓದಿ.
ಈ ನಟಿಯ ಹೆಸರು ರೂಪಾ ದತ್ತಾ. ಬಾಲಿವುಡ್ ಹಾಗೂ ಬಂಗಾಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾ, ಸೀರಿಯಲ್ ಅಂತ ಕಾಣಿಸಿಕೊಂಡಿರುವ ರೂಪಾ ದತ್ತಾ ಇದೀಗ ಪಿಕ್ಪಾಕೆಟ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಹೌದು ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡಿದ ಆರೋಪದಲ್ಲಿ ರೂಪಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿಯನ್ನು ನೀಡಿದ್ದು, ನಟಿಯ ಬ್ಯಾಗ್ನಲ್ಲಿ 70,000 ಕ್ಕು ಹೆಚ್ಚಿನ ಹಣ ಪತ್ತೆ ಆಗಿದೆ ಎಂದು ತಿಳಿಸಿದ್ದಾರೆ.
ತನಿಖೆ ಸಂದರ್ಭದಲ್ಲಿ ಮೊದಲಿಗೆ ಈ ಹಣದ ಮೂಲದ ಬಗ್ಗೆ ರೂಪಾ ದತ್ತಾ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಆದರೆ ನಂತರದಲ್ಲಿ ಪೊಲೀಸರ ತನಿಖೆ ಸಂದರ್ಭ ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನು ಪೊಲೀಸ್ ತನಿಖೆಯಲ್ಲಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಈ ರೀತಿ ಮಾಡುತ್ತಿರುವುದು ಇದು ಮೊದಲಲ್ಲ ಎಂದೂ ನಟಿ ಒಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಲಾಗಿದೆ. ಇನ್ನು ರೂಪಾ ದತ್ತಾ ಬ್ಯಾಗ್ನಲ್ಲಿ ಡೈರಿಯೊಂದು ಪತ್ತೆಯಾಗಿದೆ. ಕಳ್ಳತನ ಮಾಡಿದ ಹಣದ ಲೆಕ್ಕವಿಡುವ ಪುಸ್ತಕವದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಆ ಡೈರಿಯಲ್ಲಿ ಕೋಲ್ಕತ್ತಾದ ಇನ್ನೂ ಹಲವು ಜನನಿಬಿಡ ಪ್ರದೇಶಗಳ ಹೆಸರಿದ್ದವು ಎಂದೂ ಹೇಳಲಾಗಿದೆ.

ಶನಿವಾರದಂದು ಮೇಳದಲ್ಲಿ ರೂಪಾ ಅವರ ಚಲನವಲನ ಪೊಲೀಸರಿಗೆ ಅನುಮಾನ ಹುಟ್ಟುಹಾಕಿತ್ತು. ಕಾರಣ, ಅವರು ಖಾಲಿ ಪರ್ಸ್ಗಳನ್ನು ಕಸದ ತೊಟ್ಟಿಗೆ ಎಸೆಯುತ್ತಿದ್ದರು. ಕೊನೆಗೆ ರೂಪಾರನ್ನು ವಶಪಡಿಸಿ ತನಿಖೆ ನಡೆಸಿದಾಗ, ನಟಿಯ ಬ್ಯಾಗ್ನಲ್ಲಿ ಹಲವು ಪರ್ಸ್ಗಳು ಪತ್ತೆಯಾಗಿವೆ. ಇದರ ನಂತರ ರೂಪಾರನ್ನು ಬಂಧಿಸಲಾಗಿದೆ.

ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಯನ್ಯಾನಾಥ್ ಸಹಾ ನೀಡಿದ ದೂರಿನ ಮೇರೆಗೆ ನಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379/411 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅದರಲ್ಲಿರುವಂತೆ, '12.03.2022 ರಂದು 17.15 ಗಂಟೆಗೆ ಕರ್ತವ್ಯವನ್ನು ನಿರ್ವಹಿಸುತ್ತಾ ಎಸ್‌ಐ ಕೋಲ್ಕತ್ತಾ ಪುಸ್ತಕ ಮೇಳಕ್ಕೆ ಹೋಗಿದ್ದರು. ತನಿಖೆಯ ನಂತರ ಒಟ್ಟು 65,760 ರೂ ಮೊತ್ತದ ಹಣವಿರುವ ಪರ್ಸ್ ಆಕೆಯ ಬಳಿ ಪತ್ತೆಯಾಗಿವೆ. ಹಲವು ಪರ್ಸ್ಗಳನ್ನು ಹೊಂದಿದ್ದಕ್ಕೆ ಕಾರಣವನ್ನು ನೀಡಲು ಆಕೆ ವಿಫಲವಾಗಿದ್ದಾಳೆ' ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ರೂಪಾ ದತ್ತಾಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Click it and Unblock the Notifications











