ತಪ್ಪಾದ ರೈಲು ಹತ್ತಿದರೆ ಇಳಿದು ಬಿಡಬೇಕು ; ಡಿವೋರ್ಸ್ ಆಗಿದ್ದೇಕೆ ? ಸತ್ಯ ಹೇಳಿದ ಬಿಂದಾಸ್ ನಟಿ ಹನ್ಸಿಕಾ
ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಒದ್ದಾಡಿದ್ದು ಇದೆ. ದೇವದಾಸರಾಗಿದ್ದು ಇದೆ. ಮತ್ತೂ ಕೆಲವರು ಆತ್ಮ*ಹತ್ಯೆ ಮಾಡಿಕೊಂಡಿದ್ದು ಇದೆ.
ಯಾಕೆಂದರೆ ಹಿಂದೆ ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ ಎಂಬ ನಂಬಿಕೆ ಇತ್ತು. ವಿಚ್ಚೇದನ ಎಂಬ ಪದ ಆ ಕಾಲಕ್ಕೆ ಶಾಪದಂತೆ ಭಾಸವಾಗುತ್ತಿತ್ತು. ಡಿವೋರ್ಸ್ ಪಡೆದವರನ್ನು ಸಮಾಜ ಅವಮಾನ ಮಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ಮದುವೆಯಾಗಿದ್ದನ್ನೂ ಕೂಡ ಮರೆತು ಬದುಕುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಯಾವ ಲವಲೇಶವೂ ಕೂಡ ಮುಖದಲ್ಲಿ ಕಾಣಿಸುವುದಿಲ್ಲ. ಉದಾಹರಣೆಗೆ ಹನ್ಸಿಕಾ ಮೋಟ್ವಾನಿ ಅವರ ವ್ಯೆಯಕ್ತಿಕ ಜೀವನವನ್ನೇ ತೆಗೆದುಕೊಳ್ಳಿ.
ಹೌದು, ಕನ್ನಡದ ''ಬಿಂದಾಸ್'' ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ 2022ರಲ್ಲಿ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು. ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ.
ಆ ಕಾಲದಲ್ಲಿ ಈ ವಿಚಾರ ತುಂಬಾ ಸದ್ದು ಮಾಡಿತ್ತು. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.
ಆದರೂ ತಲೆ ಕೆಡಿಸಿಕೊಳ್ಳದ ಹನ್ಸಿಕಾ ಡಿಸೆಂಬರ್ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ''Mundota Fort''ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.

ಹೀಗೆ ಅದ್ದೂರಿಯಾಗಿ ಮದುವೆಯಾದ ಹನ್ಸಿಕಾ ತಮ್ಮ ಕೈ ಹಿಡಿದ ಸೊಹೇಲ್ ಖತುರಿಯಾ ಅವರ ಕೈಯನ್ನು ಈ ವರ್ಷದ ಆರಂಭದಲ್ಲಿಯೇ ಬಿಟ್ಟಿದ್ದಾರೆ. ವಿಚ್ಚೇದನ ನೀಡಿದ್ದಾರೆ. ಈ ಮೂಲಕ ತಮ್ಮ ಮೂರುವರೆ-ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.
ಇಂಥಾ ಹನ್ಸಿಕಾ ಇದೀಗ ತಮ್ಮ ಮದುವೆ ಮತ್ತು ಡಿವೋರ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಯಾವ ಪಶ್ಚಾತಾಪವೂ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು''ಹೌಟರ್‌ಫ್ಲೈ'' ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹನ್ಸಿಕಾ ಮೋಟ್ವಾನಿ, ಯಾವ ವಿಷಯದಲ್ಲಿಯೂ ನನ್ನ ಕುಟುಂಬ ಯಾವತ್ತು ನನ್ನ ಮೇಲೆ ಒತ್ತಡ ಹೇರಲಿಲ್ಲ ಎಂದು ಹೇಳಿದ್ದಾರೆ.
ಜನರಿಗೆ ಕುತೂಹಲಕಾರಿಯಾದ ಕ್ಲಿಕ್ ಬೈಟ್ ಬೇಕಿತ್ತು, ಮಾಧ್ಯಮದವರಿಗೆ ಹೆಡ್ ಲೈನ್ಸ್ ಬೇಕಿತ್ತು, ಬೇಕಾಗಿದ್ದು ಅವರ ಅವರಿಗೆ ಈಗ ಸಿಕ್ಕಾಗಿದೆ ಎಂದು ಹೇಳಿರುವ ಹನ್ಸಿಕಾ ನಾನು ಯಾವತ್ತು ನನ್ನ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಅದು ನನಗೆ ಮುಖ್ಯವಲ್ಲ. ನನಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ ಎಂದು ಕೂಡ ಹೇಳಿದ್ದಾರೆ.
ತಪ್ಪಾದ ರೈಲನ್ನು ಹತ್ತಿದಾಗ ಅದರಿಂದ ಕೆಳಗಿಳಿದು ಬಿಡಬೇಕು, ಅಲ್ಲಿಯೇ ಇದ್ದು ಕಷ್ಟಪಡಬಾರದು ಎಂದು ಹೇಳಿರುವ ಹನ್ಸಿಕಾ, ನನಗೆ ಸರಿ ಎಂದು ಅನಿಸಿದ್ದನ್ನೂ ನಾನು ಮಾಡಿದ್ದೇನೆ, ಪರವಾಗಿಲ್ಲ, ನನ್ನ ಕುಟುಂಬದ ಅಪಾರವಾದ ಬೆಂಬಲ ನನಗೆ ಇದೆ ಎಂದು ಹೇಳಿದ್ದಾರೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಪುನರುಚ್ಚಿಸಿರುವ ಹನ್ಸಿಕಾ ನಾನು ಈಗಿರುವ ಸ್ಥಿತಿಯಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ.

ಮುಂದುವರೆದು ಪ್ರತಿಯೊಂದಕ್ಕೂ ಕೊಂಕು ಮಾತುಗಳನ್ನಾಡುವ, ನಮ್ಮ ಸಮಾಜದಲ್ಲಿರುವ ಆ ನಾಲ್ಕು ಜನರ ಕುರಿತು ಕೂಡ ಮಾತನಾಡಿರುವ ಹನ್ಸಿಕಾ,ಮದುವೆ ಮತ್ತು ತಾಯ್ತನದ ವಿಚಾರದಲ್ಲಿ ಹೆಣ್ಣುಮಕ್ಕಳ ಮೇಲೆ ನಮ್ಮ ಸಮಾಜ ಯಾಕಿಷ್ಟು ಒತ್ತಡ ಹೇರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೆಯೆಲ್ಲಾ 25ನೇ ವರ್ಷಕ್ಕೆ ಮದುವೆಯಾಗು ಎಂದು ಹೇಳುತ್ತಿದ್ದರು, ಆ ನಂತರ 30 ಆಯ್ತು, ಈಗ 40ಕ್ಕೆ ಮದುವೆಯಾಗಲು ಹೇಳುತ್ತಾರೆ, ಯಾರು ಈ ಜನ ಎಂದು ಕಿಡಿ ಕಾರಿರುವ ಹನ್ಸಿಕಾ, ಮದುವೆಯಾದ ಮೇಲೆಯೂ ಇವರು ಬರುತ್ತಾರೆ, ಮಗು ಮಾಡಿಕೊಳ್ಳಿ ಎಂಬ ಒತ್ತಡ ಹಾಕಲು ಶುರು ಮಾಡುತ್ತಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಅವರು ಇವರು ಹೇಳಿದರೂ ಎಂದು ನಿರ್ಧಾರ ತೆಗೆದುಕೊಳ್ಳಬೇಡಿ, ಸರಿ ಅನಿಸದಿದ್ದರೆ ಮುಂದುವರೆಯಬೇಡಿ ಎಂದು ಕಿವಿ ಮಾತನ್ನು ಕೂಡ ಹೇಳಿರುವ ಹನ್ಸಿಕಾ ಆ ಒತ್ತಡವನ್ನು ನಾವು ಮಾತ್ರ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ಅದೃಷ್ಟವಶಾತ್ ನನ್ನ ವಿಷಯದಲ್ಲಿ ಹೀಗಾಗಲಿಲ್ಲ ಎಂದು ಹೇಳಿರುವ ಹನ್ಸಿಕಾ, ನಿನಗೆ ವಯಸ್ಸಾಯ್ತು ಮದುವೆಯಾಗು, ಮಕ್ಕಳು ಮಾಡಿಕೊಂಡು ಹಾಯಾಗಿ ಇರು ಎಂದು ಹೇಳುವ ಜನರನ್ನು ನಾನು ನನ್ನ ಜೀವನದಲ್ಲಿ ಯಾವತ್ತೂ ಭೇಟಿಯಾಗಿಲ್ಲ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ತುಂಬಾ ಬಲಿಷ್ಠರು ಮತ್ತು ಸ್ವತಂತ್ರರಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಬೇಕಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಪ್ರೀತಿ ಮತ್ತು ಸಂಬಂಧಗಳ ಕುರಿತು ಕೂಡ ಮಾತನಾಡಿರುವ ಹನ್ಸಿಕಾ, ಪ್ರೀತಿ ತುಂಬಾನೇ ಸುಂದರವಾದದ್ದು, ಸದ್ಯಕ್ಕೆ ಇದು ಸರಿಯಾದ ಸಮಯವೇ ಎಂದು ನನಗೆ ಗೊತ್ತಿಲ್ಲ, ಆದರೆ ಬ್ರಹ್ಮಾಂಡವೇ ನನಗೆ ಮಾರ್ಗದರ್ಶನ ನೀಡುತ್ತದೆ ಎನ್ನುವುದು ನನ್ನ ಭಾವನೆ ಅಂದಿದ್ದಾರೆ. ನನ್ನ ಹಣೆಯಲ್ಲಿ ಬರೆದಿದ್ದರೆ ಅದು ನನಗೆ ಸಿಗುತ್ತೆ ಎಂದಿದ್ದಾರೆ. ಮೊದಲು ನೀವು ನಿಮ್ಮನ್ನು ಗೌರವಿಸಬೇಕು, ಆ ನಂತರವೇ ನೀವು ಇನ್ನೊಬ್ಬರನ್ನು ಗೌರವಿಸಲು ಸಾಧ್ಯ ಎಂದು ಕೂಡ ಹನ್ಸಿಕಾ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications