ನುಚ್ಚು ನೂರಾಯ್ತು ಧುರಂಧರ್ ನಟಿಯ ಹೃದಯ ; ಲವ್, ಬ್ರೇಕಪ್- ನನ್ನ ಬೆಳವಣಿಗೆ ಸಹಿಸದವನ ಜೊತೆ ನಾನು ಇರಲಾರೆ ಎಂದ ಚೆಲುವೆ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು.
ಇದಕ್ಕೆ ಕ್ರಿಸ್ಟಲ್ ಡಿಸೋಜಾ ಅವರ ವ್ಯೆಯಕ್ತಿಕ ಬದುಕು ಮತ್ತೊಂದು ಉದಾಹರಣೆ. ಹೌದು, ಕ್ರಿಸ್ಟಲ್ ಡಿಸೋಜಾ... ಬಾಲಿವುಡ್‌ನ ಚೆಲುವೆ. ''ಏಕ್ ಹಜಾರೋ ಮೇ ಮೇರಿ ಬೆಹನಾ ಹೈ'' ಧಾರಾವಾಹಿ ಮೂಲಕ ಬಣ್ಣದ ಬದುಕು ಶುರು ಮಾಡಿದ ಕ್ರಿಸ್ಟಲ್ ಆ ನಂತರ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ''ಚೆಹರೆ'' ಚಿತ್ರದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು. ''ಫಿತ್ರತ್'' ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಇನ್ನು ಸದ್ಯ ಬಾಲಿವುಡ್‌ನಲ್ಲಿ ಇರುವ ಎಲ್ಲ ಹಳೆಯ ದಾಖಲೆಗಳನ್ನು ಮುರಿದು 50ನೇ ದಿನದತ್ತ ಮುನ್ನುಗ್ಗುತ್ತಿರುವ ''ಧುರಂಧರ್'' ಚಿತ್ರದಲ್ಲಿ ''ಶರಾರತ್'' ಎಂಬ ಹಾಡು ಇದೆಯಲ್ಲ. ಆ ಹಾಡಿನಲ್ಲಿ ಹೆಜ್ಜೆ ಹಾಕಿದವರು ಬೇರೆ ಯಾರು ಅಲ್ಲ ಬದಲಿಗೆ ಇದೇ ಕ್ರಿಸ್ಟಲ್ ಡಿಸೋಜಾ.
ಇಂಥಾ ಕ್ರಿಸ್ಟಲ್ ಡಿಸೋಜಾ ಕಾಶ್ಮೀರದ ವ್ಯಾಪಾರಿ ಗುಲಾಮ್ ಗೌಸ್ ದಿವಾನಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. 2022ರಿಂದ ಪ್ರೇಮ ಗೀತೆಯನ್ನು ಹಾಡುತ್ತಿದ್ದರು. ಆದರೆ, ಈ ಸಂಬಂಧ ಕೇವಲ ಮೂರು ವರ್ಷಕ್ಕೆ ಅಂತ್ಯವಾಯ್ತು. ಕಳೆದ ವರ್ಷದ ಅಕ್ಟೋಬರ್ 2025ರಲ್ಲಿ ಗುಲಾಮ್‌ಗೆ ಗುಡ್ ಬೈ ಹೇಳಿದ್ದ ಕ್ರಿಸ್ಟಲ್ ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಹಲವರಲ್ಲಿ ಈ ಜೋಡಿ ಹಕ್ಕಿ ದೂರವಾಗಿದ್ದೇಕೆ..? ಎನ್ನುವ ಪ್ರಶ್ನೆ ಇತ್ತು. ಈ ಪ್ರಶ್ನೆಗಳಿಗೆ ಸದ್ಯ ''ಧುರಂಧರ್'' ಚಿತ್ರದ ಅತ್ಯಮೋಘ ಸಂಭ್ರಮದಲ್ಲಿ ತೇಲುತ್ತಿರುವ ಕ್ರಿಸ್ಟಲ್ ನಿಮ್ಮ ''ಫಿಲ್ಮಿಬೀಟ್'' ಮೂಲಕ ಉತ್ತರ ನೀಡಿದ್ದಾರೆ.
ಈ ಕುರಿತು ''ಫಿಲ್ಮಿಬೀಟ್ ಪ್ರೈಂ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ವಿಶೇಷ ಮತ್ತು ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ಕ್ರಿಸ್ಟಲ್ ಪ್ರೀತಿಯ ವಿಷಯದಲ್ಲಿ ನನಗೆ ಮೂರು ವಿಷಯಗಳು ಮಾತ್ರ ಮುಖ್ಯ, ಆ ಮೂರು ವಿಷಯಗಳೇ ಪ್ರಾಮಾಣಿಕತೆ, ನಿಷ್ಠೆ ಮತ್ತು ಒಡನಾಟ ಎಂದು ಹೇಳಿದ್ದಾರೆ. ಈ ಮೂರು ಗುಣಗಳು ಸಂಬಂಧದಲ್ಲಿ ಇಲ್ಲದಿದ್ದರೆ ಆ ಸಂಬಂಧಕ್ಕೆ ಅಥವಾ ಪ್ರೀತಿಗೆ ಅರ್ಥವೇ ಇಲ್ಲ ಎಂದಿದ್ದಾರೆ.

ಮುಂದುವರೆದು ಇಂದಿನ ದಿನಮಾನಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಈ ಮೂರು ಗುಣ ಹುಡುಕುವುದು ಬಹಳ ಕಷ್ಟ ಎಂದು ಹೇಳಿರುವ ಕ್ರಿಸ್ಟಲ್, ಪ್ರೀತಿ ಆಳವಾಗಿ ಬೇರೂರಲು ಈ ಮೂರು ವಿಷಯಗಳು ತುಂಬಾ ಮುಖ್ಯ ಆದರೆ ಈ ಕಾಲದಲ್ಲಿ ಅಂತಹವರು ಸಿಗುವುದು ಅಸಾಧ್ಯ ಎಂದಿದ್ದಾರೆ. ಸದ್ಯ ನಾನು ಸಿಂಗಲಾಗಿಯೇ ಖುಷಿ ಖುಷಿಯಾಗಿದ್ದೇನೆ ಎಂದು ಹೇಳಿರುವ ಕ್ರಿಸ್ಟಲ್ ತಪ್ಪಾದ ವ್ಯಕ್ತಿಯ ಜೊತೆ ಬಾಳುವುದಕ್ಕಿಂತ ಏಕಾಂಗಿಯಾಗಿರುವುದೇ ಉತ್ತಮ ಎಂದು ಹೇಳಿದ್ದಾರೆ.
ನನ್ನನ್ನೂ ಕೆಳಕ್ಕೆ ತಳ್ಳುವ ಅಥವಾ ನನ್ನ ಬೆಳವಣಿಗೆಗೆ ಅಡ್ಡಗಾಲು ಹಾಕುವ ವ್ಯಕ್ತಿಯ ಜೊತೆ ಇರಲು ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿರುವ ಕ್ರಿಸ್ಟಲ್ ಅಂತಹ ಸಂಬಂಧಕ್ಕಿಂತ ನಾನು ಒಬ್ಬಂಟಿಯಾಗಿರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ''ಧುರಂಧರ್'' ಚಿತ್ರದ ಗೆಲುವು, ಈ ಚಿತ್ರದಿಂದ ತಮಗೆ ಸಿಕ್ಕ ಜನ ಮನ್ನಣೆಯ ಬಗ್ಗೆ ಕೂಡ ಕ್ರಿಸ್ಟಲ್ ಮಾತನಾಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಮತ್ತು ರಣ್ವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅವರನ್ನು ಹೊಗಳಿದ್ದಾರೆ. ''ಧುರಂಧರ್ 2'' ಚಿತ್ರದಲ್ಲಿಯೂ ಕೂಡ ತಮ್ಮ ಪಾತ್ರ ಇರಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ.


Click it and Unblock the Notifications