ಸಮಂತಾ ಎರಡನೇ ಪತಿ ರಾಜ್ ಗೆಲುವಿನ ಹಿಂದಿತ್ತು ಮೊದಲ ಪತ್ನಿಯ ಶ್ರಮ ; ಶ್ಯಾಮಿಲಿ ಯಾರು ? ಹಿನ್ನೆಲೆ ಏನು ?
ಪ್ರೀತಿಸುವುದೇ ಆಗಲಿ, ಪ್ರೀತಿಯನ್ನು ಕಳೆದುಕೊಳ್ಳುವುದೇ ಆಗಲಿ, ಯಾವುದು ಹೇಳಿ ಕೇಳಿ ಬರುವುದಿಲ್ಲ. ಪ್ರೀತಿಗೆ ನಿರ್ದಿಷ್ಟ ತಳಪಾಯ ಮತ್ತು ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಇಲ್ಲವಾದರೆ ಪ್ರೀತಿ-ಪ್ರೀತಿಯಾಗಿ ಉಳಿಯುವುದಿಲ್ಲ. ಇನ್ನೂ. ಪ್ರೀತಿಯಲ್ಲಿ ಹೃದಯ ಚೂರು ಚೂರಾಗುವಾಗ ನೋವಾಗುವುದು ಸಹಜ. ಆದರೆ ನಕಾರಾತ್ಮಕವಾದ ಪ್ರೀತಿಯಲ್ಲಿ ಭವಿಷ್ಯ ಇರುವುದಿಲ್ಲ. ಹೀಗಾಗಿಯೇ ಮುಂದೊಂದು ದಿನ ನಿಜವಾದ ಪ್ರೀತಿ ಸಿಗಬಹುದು...
ಎಂದುಕೊಂಡು ಸಂಬಂಧಕ್ಕೆ ಹಲವರು ಗುಡ್ ಬೈ ಹೇಳುತ್ತಾರೆ. ಆ ಪೈಕಿ ರಾಜ್ ನಿಡಿಮೋರು ಮತ್ತು ಶ್ಯಾಮಿಲಿ ದೇ ಜೋಡಿ ಕೂಡ ಒಂದಾ..? ಗೊತ್ತಿಲ್ಲ. ಆದರೆ ಸದ್ಯ ಇವರ ದಾಂಪತ್ಯ ಜೀವನ ಮತ್ತು ಪ್ರೇಮ ಕತೆ-ವ್ಯಥೆ ಚರ್ಚೆಯಲ್ಲಿಯಂತೂ ಇದೆ.

ಹೌದು .. ಎಲ್ಲರಿಗೆ ಗೊತ್ತಿರುವಂತೆ ''ದಿ ಫ್ಯಾಮಿಲಿ ಮ್ಯಾನ್'' ಚಿತ್ರದ ನಿರ್ಮಾಪಕ - ನಿರ್ದೇಶಕ ರಾಜ್ ನಿಡಿಮೋರು ಸಮಂತಾ ಜೊತೆ ಹೊಸ ಫ್ಯಾಮಿಲಿಯನ್ನು ಶುರು ಮಾಡಿದ್ದಾರೆ. ಮೊದಲ ಹೆಂಡ್ತಿ ಶ್ಯಾಮಿಲಿ ಅವರನ್ನು ಮರೆತು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಸಮಂತಾ ಜೊತೆ ಸದ್ಯ ಖುಷಿಯಾಗಿದ್ದಾರೆ.
ಆದರೆ .. ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಮೊದಲೇ ಒಡೆದಿದ್ದ ಹೃದಯ ಈಗ ನುಚ್ಚು ನೂರಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸಮಂತಾ ತೆಕ್ಕೆಗೆ ರಾಜ್ ನಿಡಿಮೋರು ಬಿದ್ದ ಕ್ಷಣದಿಂದ ಶ್ಯಾಮಿಲಿ ತಮ್ಮ ಮನದ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ( ಡಿಸೆಂಬರ್ 1 ) ಸಮಂತಾ ಅತ್ತ ರಾಜ್ ನಿಡಿಮೋರು ಜೊತೆ ಸಪ್ತಪದಿ ತುಳಿಯುತ್ತಿದ್ದರೆ ಇತ್ತ ಶ್ಯಾಮಿಲಿ ತಮ್ಮ ಹತಾಶೆ ನೋವನ್ನು ಹೊರ ಹಾಕುತ್ತಿದ್ದರು. ಹತಾಶ ಜನ ಹತಾಶ ಕೆಲಸಗಳನ್ನು ಮಾಡುತ್ತಾರೆ ಎಂದು ಬರೆದುಕೊಂಡಿದ್ದರು.

ಈ ಹಿನ್ನೆಲೆ ಇದೀಗ ಹಲವರಲ್ಲಿ ಯಾರು ಶ್ಯಾಮಿಲಿ ದೇ ಎನ್ನುವ ಪ್ರಶ್ನೆ ಇದೆ. ರಾಜ್ ನಿಡಿಮೋರು ಜೊತೆ ಶ್ಯಾಮಿಲಿ ಮದುವೆಯಾಗಿದ್ದು ಯಾವಾಗ..? ಇಬ್ಬರ ಸಂಬಂಧ ಮುರಿದು ಬಿದ್ದಿದ್ದು ಯಾವಾಗ..? ಎನ್ನುವ ಕುತೂಹಲ ಇದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಯಾರು ಈ ಶ್ಯಾಮಿಲಿ ? ಹಿನ್ನೆಲೆ ಏನು ?
ಶ್ಯಾಮಿಲಿ ದೇ ಮನಶಾಸ್ತ್ರ ಪದವಿಧರೆ. ಮುಂಬೈ ವಿಶ್ವ ವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಶ್ಯಾಮಿಲಿಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಇರಲಿಲ್ಲ. ಆದರೆ.. ಆಸಕ್ತಿ ಇತ್ತು. ಈ ಆಸಕ್ತಿ ಇವರನ್ನು ಚಿತ್ರರಂಗದತ್ತ ಕರೆತಂದಿತು.

ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕರಾದ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತು ವಿಶಾಲ್ ಭಾರದ್ವಾಜ್ ಅವರ ಜೊತೆ ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಬದುಕು ಶುರು ಮಾಡಿದರು ಶ್ಯಾಮಿಲಿ ದೇ. ವಿಶಾಲ್ ಭಾರದ್ವಾಜ್ ನಿರ್ದೇಶನದ ''ಓಂಕಾರ'' ಮತ್ತು ರಾಕೇಶ್ ಓಂ ಪ್ರಕಾಶ್ ಮೆಹ್ರಾ ನಿರ್ದೇಶನದ ''ರಂಗ್ ದೇ ಬಸಂತಿ'' ಚಿತ್ರಗಳ ತೆರೆಯ ಹಿಂದೆ ಶ್ಯಾಮಿಲಿ ದೇ ಅವರ ಶ್ರಮ ಕೂಡ ಇತ್ತು.
ಇನ್ನೂ ಮತ್ತೊಂದು ಕಡೆ ಒಂದು ದಶಕ ನಿರ್ದೇಶಕರಾಗಿ ರಾಜ್ ತನ್ನ ಸ್ನೇಹಿತ ಡಿಕೆ ಜೊತೆ ಬಾಲಿವುಡ್‌ನಲ್ಲಿ ಸೈಕಲ್ ಹೊಡೆದಿದ್ದರು. ರಾಜ್ ಮತ್ತು ಡಿಕೆ ಜೊತೆಯಲ್ಲಿ ಆರು ಚಿತ್ರಗಳನ್ನು ಮಾಡಿದ್ದರು. ಆದರೆ.. ಹೇಳಿಕೊಳ್ಳುವ ಗೆಲುವು ಇವರಿಗೆ ಸಿಕ್ಕಿರಲಿಲ್ಲ. 2014ರಲ್ಲಿ ಇದೇ ರಾಜ್ ಆಂಡ್ ಡಿಕೆ ''ಹ್ಯಾಪಿ ಎಂಡಿಂಗ್'' ಚಿತ್ರವನ್ನು ಮಾಡಿದ್ದರು. ಈ ಚಿತ್ರಕ್ಕೆ ಶ್ಯಾಮಿಲಿ ದೇ ಅವರ ಕ್ರಿಯೇಟಿವ್ ಮೇಲ್ವಿಚಾರಣೆ ಇತ್ತು.
ಈ ಚಿತ್ರದ ಸಮಯದಲ್ಲಿಯೇ ರಾಜ್ ಮತ್ತು ಶ್ಯಾಮಿಲಿ ದೇ ನಡುವೆ ಪ್ರೇಮಾಂಕುರವಾಯ್ತಾ..? ಗೊತ್ತಿಲ್ಲ. ಆದರೆ.. ಮರು ವರ್ಷವೇ ಅಂದರೆ 2015ರಲ್ಲಿ ರಾಜ್ ನಿಡಿಮೋರು ಜೊತೆ ಶ್ಯಾಮಿಲಿ ಸಪ್ತಪದಿಯನ್ನು ತುಳಿದರು. ಮದುವೆಯ ಬಂಧನಕ್ಕೊಳಗಾದರು.
ರಾಜ್ ಜೊತೆ ಮದುವೆಯಾದ ನಂತರ ಶ್ಯಾಮಿಲಿ ಬಹುತೇಕ ತೆರೆ ಮರೆಗೆ ಸರಿದರು. ಮದುವೆಯ ನಂತರ ಶ್ಯಾಮಿಲಿ ಹೆಚ್ಚೆಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಫೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರಷ್ಟೇ.

ಇನ್ನು, ಶ್ಯಾಮಿಲಿ ಅವರನ್ನು ಮದುವೆಯಾದ ಕೆಲ ವರ್ಷಗಳ ನಂತರ ರಾಜ್ ನಿಡಿಮೋರು ''ಡೆಕ್ಕನ್ ಕ್ರಾನಿಕಲ್''ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ಪತ್ನಿ ಶ್ಯಾಮಿಲಿಯನ್ನು ಹಾಡಿ ಹೊಗಳಿದ್ದರು. ನನ್ನ ಪತ್ನಿ ಯಾವ ಸಿನಿಮಾ ಹಿನ್ನೆಲೆಯಿಂದ ಬಂದವಳಲ್ಲ. ಅವಳಿಂದನೇ ನನ್ನ ಕಾಲು ಇನ್ನೂ ನೆಲದ ಮೇಲಿದೆ ಎಂದು ಹೇಳಿದ್ದ ರಾಜ್ ನನ್ನೆಲ್ಲಾ ಚಿತ್ರಗಳಲ್ಲಿನ ಪಾತ್ರಧಾರಿಗಳ ಆಯ್ಕೆ ವಿಚಾರದಲ್ಲಿ ಶ್ಯಾಮಿಲಿಯ ಕೊಡುಗೆ ದೊಡ್ಡದು ಎಂದು ಹೇಳಿದ್ದರು. ಪಾತ್ರವರ್ಗದ ವಿಚಾರದಲ್ಲಿ ಅವಳು ನನಗೆ ತುಂಬಾ ಸಲಹೆ ಕೊಡುತ್ತಾಳೆ ಎಂದು ಹೇಳಿದ್ದರು.
ಹೀಗೆ ಅನೋನ್ಯವಾಗಿದ್ದ ಇವರ ಇಬ್ಬರು ದೂರವಾಗಿದ್ದು ಯಾವಾಗ ? ಸಂಸಾರದಲ್ಲಿ ಬಿರುಕು ಮೂಡಿದ್ದಾದರೂ ಯಾಕೆ-ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲವಾದರೂ ಮಾಧ್ಯಮಗಳ ವರದಿಯ ಪ್ರಕಾರ 2022ರಲ್ಲಿ ಇಬ್ಬರ ವಿಚ್ಚೇದನವಾಗಿದೆ.
ಆದರೆ.. ಶ್ಯಾಮಿಲಿ ದೇ ಅವರ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಕಣ್ಣು ಹಾಯಿಸಿದರೆ, ಶ್ಯಾಮಿಲಿ ಅವರಿಗೆ ರಾಜ್ ನಿಜಕ್ಕೂ ವಿಚ್ಚೇದನ ನೀಡಿದ್ದಾರಾ..? ಎನ್ನುವ ಅನುಮಾನ ಮೂಡುತ್ತೆ. ಮಾಧ್ಯಮಗಳಲ್ಲಿ ಬಂದ ವಿಚ್ಛೇದನದ ವರದಿ ಸುಳ್ಳು ಎನ್ನುವ ಭಾವನೆ ಮೂಡುತ್ತೆ.
ಯಾಕೆಂದರೆ 2023ರವರೆಗೆ ಶ್ಯಾಮಿಲಿ ಮತ್ತು ರಾಜ್ ಜೊತೆಯಲ್ಲಿಯೇ ಇದ್ದರು. ರಾಜ್ ಮತ್ತು ಡಿಕೆ ಅವರ ''ಫರ್ಜಿ'' ಚಿತ್ರದ ಗೆಲುವು ಸಂಭ್ರಮಿಸಿದ್ದರು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತುಂಬಾನೇ ಪ್ರೀತಿಯಿಂದ ಕೋರಿದ್ದರು. ಸಮಂತಾ ಮತ್ತು ವರುಣ್ ಧವನ್ ಅಭಿನಯದ ''ಸಿಟಾಡೆಲ್ ಹನಿ ಬನ್ನಿ'' ವೆಬ್ ಸರಣಿಯ ಕುರಿತು ಕೂಡ ಖುಷಿ ಖುಷಿಯಾಗಿ ಮಾಹಿತಿಗಳನ್ನು ಶ್ಯಾಮಲಿ ಹಂಚಿಕೊಂಡಿದ್ದರು.
ಆದರೆ ಈಗ ಅದೇ ಸಮಂತಾ ಇವರ ಪತಿ ರಾಜ್ ನಿಡಿಮೋರು ಅವರನ್ನು ಹೈಜ್ಯಾಕ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ. ಮದುವೆಯಾಗಿದ್ದಾರೆ. ಶ್ಯಾಮಿಲಿಗೆ ವಿಚ್ಚೇದನ ನೀಡದೆಯೇ ಸಮಂತಾ ಜೊತೆ ರಾಜ್ ನಿಡಿಮೋರು ಎರಡನೇ ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.


Click it and Unblock the Notifications











