ವೇದಿಕೆಯಲ್ಲಿ ಅಸಭ್ಯವಾಗಿ ನಟಿಯ ಸೊಂಟ ಮುಟ್ಟಿದ ಪವರ್ ಸ್ಟಾರ್; ಭಾರೀ ಟೀಕೆ
ಸಿನಿಮಾ ಚಿತ್ರೀಕರಣದ ವೇಳೆ ನಟ-ನಟಿಯರು ತಬ್ಬಿಕೊಳ್ಳುವುದು, ನಟರು ನಟಿಯರ ಸೊಂಟಕ್ಕೆ ಕೈ ಹಾಕುವಂತಹ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತಾರೆ. ಅದೆಲ್ಲವೂ ನಟನೆಯ ಭಾಗವಾಗಿರುತ್ತದೆ. ಆದರೆ ಕಲಾವಿದರು ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ರೀತಿಯಲ್ಲಿ ವರ್ತಿಸಬೇಕು. ಕೆಲವರು ಇದಕ್ಕೆ ವಿರುದ್ಧ ಎನ್ನುವಂತೆ ನಡೆದುಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಇದೆಲ್ಲ ವೈರಲ್ ಆಗಿ ಚರ್ಚೆ ಹುಟ್ಟಾಕುತ್ತಿದೆ.
ಸದ್ಯ ವೇದಿಕೆಯೊಂದರಲ್ಲಿ ಸ್ಟಾರ್ ನಟನೊಬ್ಬರು ಇದೇ ರೀತಿಯ ವರ್ತನೆ ತೋರಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ತೆಲುಗು ನಟ ಬಾಲಕೃಷ್ಣ ಕೂಡ ವೇದಿಕೆಯಲ್ಲೇ ನಟಿ ಅಂಜಲಿ ಜೊತೆ ಅನುಚಿತವಾಗಿ ವರ್ತಿಸಿದ್ದು ಸುದ್ದಿಯಾಗಿತ್ತು. ಇದೀಗ ಭೋಜ್‌ಪುರಿ ನಟ ಪವನ್ ಸಿಂಗ್ ವೇದಿಕೆಯಲ್ಲೇ ನಟಿಯ ಸೊಂಟಕ್ಕೆ ಕೈ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭೋಜ್‌ಪುರಿ ನಟ ಪವನ್ ಸಿಂಗ್ ಹಾಗೂ ನಟಿ ಅಂಜಲಿ ರಾಘವ್ ಭಾಗವಹಿಸಿದ್ದರು. ಇಬ್ಬರೂ ವೇದಿಕೆ ಏರಿದ್ದರು. ಅಂಜಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಪವನ್ ಸಿಂಗ್ ಆಕೆಯ ಸೊಂಟವನ್ನು ಪದೇ ಪದೆ ಮುಟ್ಟಿದ್ದಾರೆ. ಇದು ಆಕೆಗೂ ಇರಿಸುಮುರಿಸು ಉಂಟುಮಾಡಿದೆ. ಈ ವೀಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿದೆ.
ಒಪ್ಪಿಗೆಯಿಲ್ಲದೆ ಯಾರನ್ನಾದರೂ ಸ್ಪರ್ಶಿಸುವುದು ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವವರು ಬಹಳ ಎಚ್ಚರಿಕೆಯಿಂದ ವಹಿಸಬೇಕು. ಇಂತಹ ವಿಚಾರಗಳು ತಪ್ಪು ಸಂದೇಶ ರವಾನಿಸುತ್ತದೆ. ಭೋಜ್‌ಪುರಿ ಚಿತ್ರರಂಗದಲ್ಲಿ ಪವನ್ ಸಿಂಗ್ ಬಹುಬೇಡಿಕೆಯ ಸ್ಟಾರ್ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಆತನನ್ನು ಅಭಿಮಾನಿಗಳು ಪವರ್ ಸ್ಟಾರ್ ಎಂದೇ ಕರೆಯುತ್ತಾರೆ.
ಪವನ್ ಸಿಂಗ್ ನಟನೆಯ 'ಹಮ್ ಹೈ ರಹಿ ಪ್ಯಾರ್ ಕೆ' ಚಿತ್ರದಲ್ಲಿ ಕನ್ನಡ ನಟಿ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದರು. ಇನ್ನು ಭೋಜ್‌ಪುರಿ ಭಾಷೆಯ ಹಲವು ಸಿನಿಮಾಗಳಲ್ಲಿ ಪವನ್ ಬಣ್ಣ ಹಚ್ಚಿದ್ದಾರೆ. ನಟನಾಗಿ ಮಾತ್ರವಲ್ಲದೇ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಗುರ್ತಿಸಿಕೊಂಡಿದ್ದಾರೆ. ರಾಜಕೀಯರಂಗದಲ್ಲಿ ಕೂಡ ಪವನ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.
ಬಾಲಿವುಡ್ 'ಸ್ತ್ರೀ'-2 ಚಿತ್ರದಲ್ಲಿ ಹಾಡೊಂದನ್ನು ಪವನ್ ಸಿಂಗ್ ಹಾಡಿದ್ದಾರೆ. ಇನ್ನು ಸಾಕಷ್ಟು ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಅವರು ರಸಸಂಜೆ ಕಾರ್ಯಕ್ರಮಗಳಿಗೆ ಭಾರೀ ಕ್ರೇಜ್ ಇದೆ.


Click it and Unblock the Notifications











