ಷಡ್ಯಂತ್ರ, ಪಿತೂರಿ, ನನ್ನ ಪತ್ನಿ ಬೇರೆಯವರ ಕೈಗೊಂಬೆ ; ವಿಚ್ಚೇದನ, ಅನೈತಿಕ ಸಂಬಂಧ- ಮೌನ ಮುರಿದ ಗೋವಿಂದ
ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್‌ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಅನೇಕರು ಭಾಗಿಯಾಗುತ್ತಿದ್ದರು. ಇವರು ಅಭಿನಯಿಸಿದ ಹಲವು ಚಿತ್ರಗಳು ಕೇವಲ ಒಂದೇ ವರ್ಷದಲ್ಲಿ ತೆರೆಗೆ ಬರುತ್ತಿದ್ದವು. ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡುತ್ತಿದ್ದವು. ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದ್ದವು.
ಒಂದೇ ವರ್ಷದಲ್ಲಿ ಇವರ ಮುಖವನ್ನು ಮೂರು ನಾಲ್ಕು ಬಾರಿ ಬೆಳ್ಳಿತೆರೆಯಲ್ಲಿ ನೋಡಿದರೂ ಕೂಡ ಯಾರಿಗೂ ಬೋರ್ ಆಗುತ್ತಿರಲಿಲ್ಲ. ಆ ಪೈಕಿ ಅಂದಕಾಲತ್ತಿಲ್‌ನ ಬಾಲಿವುಡ್‌ನ ಹೀರೋ ನಂಬರ್ 1 ಗೋವಿಂದ ಕೂಡ ಒಬ್ಬರು. 90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು.

ಆದರೆ ಇದೇ ಗೋವಿಂದ ಆ ನಂತರ ತಮ್ಮ ನಡಾವಳಿ ಹಾಗೂ ದುರಂಹಕಾರಗಳಿಂದ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡರು. ''ಸೂಪರ್ ಸ್ಟಾರ್'' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ ಬಾಲಿವುಡ್‌ನಿಂದ ಕಣ್ಮರೆ ಕೂಡ ಆದರು.
ಇಂಥಾ ಗೋವಿಂದ ಪಾಲಿಗೆ ಇವರ ಪತ್ನಿ ಸುನಿತಾ ಅಹುಜಾ ಸದ್ಯ ತಲೆ ನೋವಾಗಿದ್ದಾರೆ. ನಿಜ ಜೀವನದಲ್ಲಿ ಖಳನಾಯಕಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ನಾಲ್ಕು ಗೋಡೆಗಳಲ್ಲಿ ಬಗೆಹರಿಯಬಹುದಾಗಿದ್ದ ವಿಚಾರವನ್ನು ಕಳೆದೊಂದು ವರ್ಷದಿಂದ ಸುನಿತಾ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಕರೆದು ಕರೆದು ತಮ್ಮ ಪತಿ ಗೋವಿಂದಗೆ 30 ವರ್ಷದ ಮರಾಠಿ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ.
ನನ್ನ ಗಂಡನ ಹಿಂದೆ ಬಿದ್ದಿರುವಾಕೆಗೆ ಕೇವಲ ಹಣ ಬೇಕಷ್ಟೇ ಎಂದು ಹೇಳುತ್ತಾ ಬರುತ್ತಿರುವ ಸುನಿತಾ 2025 ನನ್ನ ಪಾಲಿಗೆ ತುಂಬಾ ಕರಾಳ ವರ್ಷವಾಗಿತ್ತು ಎಂದು ಹೇಳುತ್ತಿದ್ದಾರೆ. ಕಳೆದ ವರ್ಷದ ಆರಂಭದಿಂದ ಶುರುವಾದ ಸುನಿತಾ ಅವರ ಈ ಮಾತು-ಮಂಥನ ಈ ವರ್ಷ ಕೂಡ ಮುಂದುವರೆದಿದೆ.
ಈ ವರ್ಷದ ಆರಂಭದಲ್ಲಿಯೇ ''ಮಿಸ್ ಮಾಲಿನಿ''ಗೆ ನೀಡಿದ ಸಂದರ್ಶನದಲ್ಲಿ ಸುನಿತಾ ಮತ್ತೊಮ್ಮೆ ತಮ್ಮ ಪತಿಯ ಮೇಲೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಮಾಡಿದ್ದಾರೆ. ನನ್ನ ಮಕ್ಕಳು ಅವರ ತಂದೆಯಂತೆ ಆಗುವುದು ಬೇಡ ಎಂದು ಕಣ್ಣೀರು ಹಾಕಿದ್ದಾರೆ.

ಸದ್ಯ ತಮ್ಮ ಪತ್ನಿಯ ಈ ಆರೋಪಗಳ ಬಗ್ಗೆ ಇದೇ ಮೊದಲ ಬಾರಿ ಗೋವಿಂದ ಮೌನ ಮುರಿದಿದ್ದಾರೆ. ಮಾತನಾಡಿದ್ದಾರೆ. ಷಡ್ಯಂತ್ರ.. ಪಿತೂರಿ.. ಎಂದು ತಮ್ಮದೇ ಥಿಯರಿಯನ್ನು ಮಂಡಿಸಿದ್ದಾರೆ. ಈ ಕುರಿತು ''ಎಎನ್‌ಐ''ಗೆ ಪ್ರತಿಕ್ರಿಯೆ ನೀಡಿರುವ ಗೋವಿಂದ ಇದೆಲ್ಲವೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮಾಡಲಾಗುತ್ತಿರುವ ವ್ಯವಸ್ಥಿತ ಸಂಚು ಎಂದು ಹೇಳಿದ್ದಾರೆ.
ನನಗೆ ನನ್ನ ಮಗಳು ಮತ್ತು ಅತ್ತೆ ಸೇರಿದಂತೆ ಮನೆಯ ಮಹಿಳೆಯರ ಮೇಲೆ ಅಪಾರ ಗೌರವ ಇದೆ ಎಂದು ಹೇಳಿರುವ ಗೋವಿಂದ, ನನ್ನ ಒಬ್ಬ ಆಪ್ತ ಸಹಾಯಕ ದೀರ್ಘಕಾಲದಿಂದ ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮತ್ತು ಪಿತೂರಿಯ ಬಗ್ಗೆ ನನಗೆ ಎಚ್ಚರಿಕೆಯನ್ನು ನೀಡಿದ್ದರು ಎಂದು ಹೇಳಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ನಾನು ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿದ್ದೆ ಎಂದು ಹೇಳಿರುವ ಗೋವಿಂದ, ನನ್ನ ವ್ಯೆಯಕ್ತಿಕ ಜೀವನದಲ್ಲಿ ಮತ್ತು ಚಿತ್ರರಂಗದಲ್ಲಿ ನನಗೆ ಹಿನ್ನಡೆಯಾದಾಗ ಅದಕ್ಕೆ ನನ್ನ ಅದೃಷ್ಟ, ಹಣೆಬರಹ ಕಾರಣ ಎಂದುಕೊಂಡಿದ್ದೆ ಎಂದಿದ್ದಾರೆ. ಆಧ್ಯಾತ್ಮದಲ್ಲಿ ನಂಬಿಕೆ ಹೊಂದಿರುವ ನಾನು ಬೇರೆಯವರು ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿದ್ದೆ ಎಂದು ಹೇಳಿದ್ದಾರೆ.
ಆದರೆ, ವರ್ಷಾನುವರ್ಷ ಯಾವುದೇ ಬದಲಾವಣೆಗಳಾಗದಿದ್ದಾಗ, ನನ್ನ ಸುತ್ತಲಿನ ನಕಾರಾತ್ಮಕತೆ ಮುಂದುವರೆದಾಗ ಇದು ಕೇವಲ ಕಾಕತಾಳೀಯವಲ್ಲ ಬದಲಿಗೆ ಉದ್ದೇಶಪೂರ್ವಕವಾದ ಕೆಲಸ ಎನ್ನುವುದು ನನಗೆ ಮನದಟ್ಟಾಯ್ತು ಎಂದು ಹೇಳಿರುವ ಗೋವಿಂದ ಕೆಲ ಒಮ್ಮೆ ಇಂತಹ ಕುತಂತ್ರಗಳು ಕುಟುಂಬದ ಸದಸ್ಯರಿಗೆ ಅರಿವಿಲ್ಲದೆ ಅವರ ಮೇಲೆ ಪ್ರಭಾವ ಬೀರಬಹುದು ಎಂದಿದ್ದಾರೆ. ಷಡ್ಯಂತ್ರ, ಪಿತೂರಿಗಳನ್ನು ಗುರುತಿಸುವ ಸಾಮರ್ಥ್ಯ ಅಥವಾ ಅನುಭವ ಎಲ್ಲರಿಗೂ ಇರುವುದಿಲ್ಲ ಎಂದಿದ್ದಾರೆ.
ಸುನಿತಾ ಸುಂಸ್ಕ್ರತ ಮಹಿಳೆಯಾಗಿದ್ದು ಯಾವತ್ತು ಅನುಚಿತವಾದ ಭಾಷೆ ಬಳಕೆ ಮಾಡಿಲ್ಲ ಎಂದು ಹೇಳಿರುವ ಗೋವಿಂದ, ಇತ್ತೀಚಿನ ಅವರ ಹೇಳಿಕೆಗಳಿಂದ ನನ್ನ ಮೇಲೆ ಭಾವನಾತ್ಮಕವಾದ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.ನಾನು ಮೌನವಾಗಿರುವುದರಿಂದ ನಿಜಕ್ಕೂ ನಾನೇ ತಪ್ಪಿತಸ್ಥ ಎಂದು ಅನೇಕರು ಅಂದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ನನ್ನ ವಿರುದ್ಧ ನನ್ನ ಪ್ರೀತಿ ಪಾತ್ರರನ್ನೇ ದಾಳವನ್ನಾಗಿ ಉಪಯೋಗಿಸಲಾಗುತ್ತೆ ಎನ್ನುವ ಎಚ್ಚರಿಕೆಯನ್ನು ನನಗೆ ಹಿಂದೆಯೇ ನೀಡಲಾಗಿತ್ತು ಎಂದು ಹೇಳಿರುವ ಗೋವಿಂದ ಆ ಎಚ್ಚರಿಕೆ ನಿಜವಾಗಿದೆ ಎಂದಿದ್ದಾರೆ. ನನ್ನ ಪತ್ನಿ ಬೇರೆಯವರ ಕೈಗೊಂಬೆಯಾಗಿದ್ದಾರೆ ಎಂದು ಹೇಳಿದ್ದಾರೆ. ಗೋವಿಂದ ಅವರ ಈ ಮಾತುಗಳಿಗೆ ಸುನಿತಾ ಅಹುಜಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











