ಸಲ್ಮಾನ್ ಖಾನ್‌ಗೆ ಭಾರೀ ಮುಖಭಂಗ, ಪ್ರೇಕ್ಷಕರಿಲ್ಲದೆ ಅನೇಕ ಕಡೆ ಸಿಕಂದರ್ ಚಿತ್ರದ ಪ್ರದರ್ಶನ ರದ್ದು..!

ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ 'ಕಿಕ್' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಸಲ್ಮಾನ್ ಖಾನ್.

ಹೌದು.. ಹೆಚ್ಚೇನು ಇಲ್ಲ. 07-08 ವರ್ಷದ ಹಿಂದೆ ಸಲ್ಮಾನ್ ಖಾನ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಬಾಲಿವುಡ್‌ನಲ್ಲಿ ಕಂಪನವಾಗುತ್ತಿತ್ತು. ಬೇರೆಯವರೆಲ್ಲ ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದರು. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಹದಿಹರೆಯದ ಯುವಕ ಯುವತಿಯರಿಂದ ಹಿಡಿದು ಬಡ ಮತ್ತು ಮಧ್ಯಮ ವರ್ಗದ ಜನರ ದಂಡು ಚಿತ್ರಮಂದಿರದ ಎದುರು ಕಂಡು ಬರುತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಹಣದ ಹೊಳೆ ಹರಿಯುತ್ತಿತ್ತು.

Big setback for Salman Khan as Sikandar s shows are cancelled just two days after its release

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಲ್ಮಾನ್ ಖಾನ್‌ಗೆ ಕ್ಯಾರೇ ಎನ್ನುವವರು ಯಾರು ಇಲ್ಲ. ಇದ್ದಿದ್ದರೆ ಮೊನ್ನೆ ಮೊನ್ನೆ ಬಿಡುಗಡೆಯಾದ ಸಿಕಂದರ್ ಚಿತ್ರದ ಪ್ರದರ್ಶನವನ್ನು ರದ್ದು ಮಾಡುವ ಪ್ರಮೇಯ ಬರುತ್ತಿರಲಿಲ್ಲ. ಹೌದು, ಕೇಳಲು ಅಚ್ಚರಿ ಎನಿಸಿದರೂ ಇದು ನಿಜಾ. ಯಾಕೆಂದರೆ ಸಲ್ಮಾನ್ ಖಾನ್‌ಗೆ ಹಿಂದೆ ಎಲ್ಲ ಈದ್ ಲಕ್ಕಿ ಎಂದೇ ಹೇಳಲಾಗುತ್ತಿತ್ತು. ಅದು ನಿಜವೂ ಆಗಿತ್ತು ಕೂಡ.

ಆಗೆಲ್ಲ ಸಲ್ಮಾನ್ ಖಾನ್ ಸ್ಟಾರ್ ಪವರ್‌ಗೆ ಮೊದಲ ದಿನ ಬಿಡುಗಡೆಯಾದ ಚಿತ್ರ ಕನಿಷ್ಠ ಪಕ್ಷ 35 ಕೋಟಿಯನ್ನಾದರೂ ಗಳಿಸುತ್ತಿತ್ತು. 2019ರಲ್ಲಿ ಬಿಡುಗಡೆಯಾದ ಭಾರತ್ ಫಸ್ಟ್ ಡೇ ₹ 42.30 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇನ್ನು ಇದಕ್ಕೂ ಮುನ್ನ ತೆರೆಗೆ ಬಂದ ಸಲ್ಮಾನ್ ಖಾನ್ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರ ರೇಸ್ 3 ಮೊದಲ ದಿನ ₹38.15 ಕೋಟಿಯನ್ನು ದೋಚಿತ್ತು. ಕೇವಲ ಈ ಚಿತ್ರಗಳು ಮಾತ್ರ ಅಲ್ಲ ಈದ್ ಹಬ್ಬದ ಪ್ರಯುಕ್ತ ಬಂದಿದ್ದ ಏಕ್ ಥಾ ಟೈಗರ್, ಭಜರಂಗಿ ಭಾಯಿಜಾನ್, ಸುಲ್ತಾನ್, ಎಲ್ಲವೂ ಬ್ಲಾಕ್‌ಬಸ್ಟರ್‌ಗಳಾಗಿದ್ದವು.

ಆದರೆ ಈಗ ಸಲ್ಮಾನ್ ಖಾನ್‌ಗೆ ಸಲಾಂ ಹೊಡೆಯುವರು ಯಾರು ಇಲ್ಲ. ಸಿಕಂದರ್‌ಗೆ ಯಾರು ಸೊಪ್ಪು ಹಾಕುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸಿಕಂದರ್ ಚಿತ್ರದ ಪ್ರದರ್ಶನವನ್ನು ಅನೇಕ ಕಡೆ ಪ್ರೇಕ್ಷಕರ ಕೊರತೆಯ ಕಾರಣಕ್ಕೆ ರದ್ದು ಮಾಡಲಾಗಿದೆ. ಸೂರತ್, ಅಹಮದಾಬಾದ್, ಭೋಪಾಲ್, ಇಂದೋರ್ ಸೇರಿ ಅನೇಕ ಕಡೆ ಬೆಳ್ಳಿತೆರೆಯಲ್ಲಿ ಸಲ್ಮಾನ್ ಖಾನ್ ಅವರನ್ನು ಕಣ್ತುಂಬಿಕೊಳ್ಳುವ ಧೈರ್ಯವನ್ನು ಯಾರು ಮಾಡುತ್ತಿಲ್ಲ. ಹೀಗಾಗಿಯೇ ಸಿಕಂದರ್ ಚಿತ್ರದ ಪ್ರದರ್ಶನವನ್ನು ರದ್ದು ಮಾಡುತ್ತಿರುವ ಮಲ್ಟಿಪ್ಲೆಕ್ಸ್‌ನವರು ಮೋಹನ್ ಲಾಲ್ ಅಭಿನಯದ ವಿವಾದಾತ್ಮಕ ಚಿತ್ರ ಎಲ್ 2 ಎಂಪುರಾನ್ ಚಿತ್ರಕ್ಕೆ ಮಣೆ ಹಾಕಲು ಶುರು ಮಾಡಿದ್ದಾರೆ.

ಈ ಕುರಿತು ಬಾಲಿವುಡ್‌ ಹಂಗಾಮಾಗೆ ಪ್ರತಿಕ್ರಿಯೆ ನೀಡಿರುವ ಸೂರತ್‌ನ ದಿ ಫ್ರೈಡೇ ಸಿನಿಮಾ ಮಲ್ಟಿಪ್ಲೆಕ್ಸ್‌ನ ಮಾಲೀಕ ಕೀರ್ತಿ ಭಾಯ್ ಟಿ ವಫಾಸಿಯಾ ನಿನ್ನೆ ಈದ್ ಹಬ್ಬವಾಗಿದ್ದರೂ ಕೂಡ ಬೆಳಗ್ಗೆಯ 09 ಮತ್ತು 10ರ ಪ್ರದರ್ಶನ ಒಂದೇ ಒಂದು ಟಿಕೆಟ್ ಕೂಡ ಬಿಕರಿಯಾಗಲಿಲ್ಲ ಎಂದು ಹೇಳಿದ್ದಾರೆ. ಈದ್ ಹಬ್ಬದ ಹಿನ್ನೆಲೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ನುಗ್ಗುತ್ತಾರೆ ಎಂದು ಭಾವಿಸಿದ್ದೆವು, ಆದರೆ ನಮ್ಮೆಲ್ಲ ನಿರೀಕ್ಷೆಗಳು ತಲೆಕೆಳಗಾದವು ಎಂದು ಹೇಳಿರುವ ದಿ ಫ್ರೈಡೇ ಸಿನಿಮಾ ಮಾಲೀಕರು ಭಾನುವಾರ ವ್ಯಾಪಾರ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಭಾನುವಾರ ವ್ಯಕ್ತವಾದ ಪ್ರೇಕ್ಷಕರ ಮತ್ತು ವಿಮರ್ಷಕರ ಅಭಿಪ್ರಾಯ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿರುವ ಸೂರತ್‌ನ ದಿ ಫ್ರೈಡೇ ಸಿನಿಮಾದ ಕೀತಿಭಾಯ್ ಸಿಕಂದರ್ ಬದಲು ಮಾರ್ಚ್ 14ರಂದು ಬಿಡುಗಡೆಯಾದ ಗುಜರಾತಿ ಚಿತ್ರ ಆಲ್ ದಿ ಬೆಸ್ಟ್ ಪಾಂಡ್ಯ ಮತ್ತು ಉಂಬಾರೊ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದ್ದಾರೆ. ಬಿಡುಗಡೆಯಾಗಿ ಒಂಬತ್ತು ವಾರವಾದರೂ ಉಂಬಾರೋ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದ್ದಾರೆ. ಪ್ರೇಕ್ಷಕರ ಕೊರತೆಯ ಕಾರಣಕ್ಕೆ ಸಿಕಂದರ್ ಬದಲು ತಾವು ಈ ಚಿತ್ರಗಳನ್ನು ಪ್ರದರ್ಶನ ಮಾಡಿರುವುದಾಗಿ ಕೂಡ ಕೀರ್ತಿ ಭಾಯ್ ಹೇಳಿದ್ದಾರೆ.

ಕೇವಲ ಸೂರತ್, ಅಹಮದಾಬಾದ್, ಭೋಪಾಲ್, ಇಂದೋರ್ ನಲ್ಲಿ ಮಾತ್ರವಲ್ಲ ಮುಂಬೈನ ರಘುಲೀಲಾ ಮಾಲ್‌ನಲ್ಲಿರುವ ಐನಾಕ್ಸ್‌ನಲ್ಲಿ ಕೂಡ ಸಿಕಂದರ್ ಬದಲು ರಾತ್ರಿ 09-30ರಂದು ಗುಜರಾತಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇಷ್ಟೇ ಅಲ್ಲ ಸಿನೆಪೊಲಿಸ್ ಸೀವುಡ್ಸ್ ಮತ್ತು ಪನ್ವೆಲ್‌ನಲ್ಲಿನ ಪಿವಿಆರ್‌ನಲ್ಲಿ ಕೂಡ 9-40 ಮತ್ತು 5-30ರ ಸಿಕಂದರ್ ಪ್ರದರ್ಶನವನ್ನು ರದ್ದುಗೊಳಿಸಿ ಎಲ್ 2 ಎಂಪುರಾನ್ ಚಿತ್ರವನ್ನು ಪ್ರದರ್ಶಿಸಲಾಗಿದೆ. ನಾರಿಮನ್ ಪಾಯಿಂಟ್‌ನಲ್ಲಿರುವ ಐನಾಕ್ಸ್ ಮತ್ತು ಮೆಟ್ರೋ ಐನಾಕ್ಸ್‌ನಲ್ಲಿ ಕೂಡ ಸಿಕಂದರ್ ಚಿತ್ರವನ್ನು ಎತ್ತಂಗಡಿ ಮಾಡಿ ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೊಮ್ಯಾಟ್ ಚಿತ್ರವನ್ನು ರಾತ್ರಿ 08 ಮತ್ತು 08-30ಕ್ಕೆ ಪ್ರದರ್ಶಿಸಲಾಗಿದೆ ಎಂದು ಬಾಲಿವುಡ್ ಹಂಗಾಮ ವರದಿಯನ್ನು ಮಾಡಿದೆ.

ಇಷ್ಟೆಲ್ಲ ಕಡೆ ಪ್ರದರ್ಶನ ರದ್ದಾದರು ಕೂಡ ಮುಂಬೈನ ಪ್ರಸಿದ್ಧ ಚಿತ್ರಮಂದಿರಗಳಾದ ಗ್ಯಾಲಕ್ಸಿ ಮತ್ತು ಜಿ 7 ಮಲ್ಟಿಪ್ಲೆಕ್ಸ್‌ನವರಿಗೆ ಸಲ್ಮಾನ್ ಖಾನ್ ಸ್ಟಾರ್ ಪವರ್ ಮೇಲೆ ಇನ್ನೂ ನಂಬಿಕೆ ಇದೆ. ಹೀಗಾಗಿಯೇ 991 ಆಸನಗಳನ್ನೊಂದಿರುವ ಗೈಟಿ ಮತ್ತು 818 ಆಸನಗಳನ್ನು ಹೊಂದಿರುವ ಗ್ಯಾಲಕ್ಸಿಯಲ್ಲಿ ಸಿಕಂದರ್ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. 105 ಆಸನಗಳನ್ನೊಂದಿರುವ ಮತ್ತು 255 ಆಸನಗಳನ್ನು ಹೊಂದಿರುವ ಜೆಮಿನಿಯಲ್ಲಿ ಕೂಡ ಎಲ್ 2 ಎಂಪುರಾನ್ ಚಿತ್ರವನ್ನ ಕಿತ್ತೆಸೆದು ಸಿಕಂದರ್ ಗೆ ಮಣೆ ಹಾಕಲಾಗಿದೆ, ಪ್ರದರ್ಶನಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗಿದೆ ಎಂದು ಬಾಲಿವುಡ್ ಹಂಗಾಮ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನುಳಿದಂತೆ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಸಿಕಂದರ್ ಚಿತ್ರ ಮೊದಲ ದಿನ ಕೇವಲ ₹26 ಕೋಟಿ ಹಣವನ್ನು ಗಳಿಸಿತ್ತು. ನಿನ್ನೆ ಈದ್ ಹಬ್ಬದ ಪ್ರಯುಕ್ತ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇತ್ತು. ಸಿಕಂದರ್ ಪುಟಿದೇಳುತ್ತಾನೆ ಎನ್ನುವ ವಿಶ್ವಾಸ ಇತ್ತು. ಆದರೆ ಸಿಕಂದರ್ ಎರಡನೇ ದಿನ ಹೆಚ್ಚುವರಿಯಾಗಿ ಕೇವಲ ₹3 ಕೋಟಿ ಹಣವನ್ನು ಮಾತ್ರ ಗಳಿಸಿದೆ. ಎರಡನೇ ದಿನದ ಆಟ ₹29 ಕೋಟಿಗೆ ಮುಕ್ತಾಯವಾಗಿದೆ ಎಂದು ಸ್ಯಾಕ್ನಿಲ್ ವರದಿ ಮಾಡಿದೆ. ಎರಡು ದಿನದ ಗಳಿಕೆಯನ್ನು ಸೇರಿಸಿದರೆ ಸಿಕಂದರ್ ಮೊದಲ ಎರಡು ದಿನದಲ್ಲಿ ₹55 ಕೋಟಿಯನ್ನು ಮಾತ್ರ ಗಳಿಸಿದೆ.

ಇನ್ನು ರಜೆ ಎಲ್ಲ ಈಗ ಮುಕ್ತಾಯವಾಗಿದೆ. ಹೀಗಾಗಿ ಇಂದು ಚಿತ್ರ ಹೆಚ್ಚಿನ ಗಳಿಕೆಯನ್ನು ಮಾಡುವುದು ಅಸಾಧ್ಯ. ₹15 ಕೋಟಿಯ ಗಳಿಕೆಯನ್ನು ಇಂದು ಚಿತ್ರ ಮಾಡಿದರೆ ಅದೇ ಹೆಚ್ಚು ಎನ್ನುವ ಮಾತು ಬಾಲಿವುಡ್‌ನಲ್ಲಿ ಸದ್ಯ ಕೇಳಿ ಬರುತ್ತಿದೆ. ಸದ್ಯ ಎರಡು ದಿನದಲ್ಲಿ ₹55 ಕೋಟಿಯನ್ನು ಸಿಕಂದರ್ ಚಿತ್ರ ಗಳಿಸಿದ್ದು ಇಂದು ಚಿತ್ರದ ಗಳಿಕೆ ಕುಸಿಯುವ ಸಾಧ್ಯತೆ ಇದೆ.ಚಿತ್ರದ ಬಿಡುಗಡೆಗೆ ಮುನ್ನ ₹500 ಕೋಟಿ ಚಿತ್ರ ಗಳಿಸಿಯೇ ಗಳಿಸುತ್ತೆ ಎನ್ನುತ್ತಿದ್ದ ಬಾಲಿವುಡ್‌ ಪಂಡಿತರು ಈಗ ಹಾಕಿದ ಬಂಡವಾಳ ಕೂಡ ಮರಳಿ ಬರುವುದು ಕಷ್ಟ ಎನ್ನುತ್ತಿದ್ದಾರೆ. ಸಿಕಂದರ್ ಚಿತ್ರಮಂದಿರದಿಂದ ಎತ್ತಂಗಡಿಯಾಗುವದರೊಳಗೆ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.ಅನೇಕ ಕಡೆ ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿಯಾದ ಹಿನ್ನೆಲೆ ಸಲ್ಮಾನ್‌ ಖಾನ್‌ಗೆ ತೀವೃ ಮುಖಭಂಗವಾದಂತಾಗಿದೆ.

Disclaimer ; ಬಾಕ್ಸ್ ಆಫೀಸ್ ನ ಈ ಅಂಕಿ ಅಂಶಗಳನ್ನು ಸ್ಯಾಕ್ನಿಲ್ಕ್ ವೆಬ್ ಸೈಟ್ ಮತ್ತು ಬಾಲಿವುಡ್ ಹಂಗಾಮದಲ್ಲಿ ಉಲ್ಲೇಖವಾದ ಮಾಹಿತಿಗಳಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X