ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 3 ತಿಂಗಳ ಬಳಿಕ ಮೊದಲ ಬಾರಿಗೆ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಈಗ ಸಿಬಿಐ ಅಂಗಳದಲ್ಲಿದೆ. ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ.
ಸುಶಾಂತ್ ಸಿಂಗ್ ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇನ್ನೂ ಕೂಡ ಸುಶಾಂತ್ ಸಿಂಗ್ ಪ್ರಕರಣದ ತನಿಖೆ ಸಂಪೂರ್ಣಗೊಂಡಿಲ್ಲ. ಈ ಬಗ್ಗೆ ಭಾನುವಾರ ಮಾತನಾಡಿದ ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್, 'ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಮಧ್ಯಪ್ರವೇಶ ಇಲ್ಲ, ತನಿಖೆ ಪೂರ್ಣಗೊಂಡ ನಂತರ ಕಾರಣ ತಿಳಿಯಳಿದೆ' ಎಂದು ಹೇಳಿದ್ದಾರೆ.
ಬಿಹಾರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಬಳಿಕ ಪ್ರಕರಣವನ್ನು ಸಿಬಿಐ ಹಸ್ತಾಂತರ ಮಾಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ಅಂಗೀಕರಿಸಿದೆ. ಸುಶಾಂತ್ ನಿಧನಹೊಂದಿ ಎರಡು ತಿಂಗಳ ಬಳಿಕ ಸಿಬಿಐ ಕೈಸೇರಿದ ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಇದೀಗ ಸಿಬಿಐ, ಇಡಿ ಮತ್ತು ಎನ್ ಸಿ ಬಿ ಪ್ರಕರಣದ ತನಿಖೆ ನಡೆಸುತ್ತಿವೆ.

ಬಿಹಾರ ಸರ್ಕಾರ ಸುಶಾಂತ್ ಸಿಂಗ್ ತಂದೆ ಬಗ್ಗೆ ಸಹಾನುಭೂತಿ ಹೊಂದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ, ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ತಂದೆ ಆರೋಪ ಮಾಡಿದ್ದಾರೆ. ತನಿಖಾ ಸಂಸ್ಥೆ ನಿಷ್ಪಕ್ಷಪಾತ ವಿಚಾರಣೆ ನಡೆಸಿ ತನಿಖೆ ಪೂರ್ಣಗೊಳಿಸುವ ಭರವಸೆ ಇದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.


Click it and Unblock the Notifications











