ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶಾ ಬಸು
ಸದ್ಯ ಬಾಲಿವುಡ್‌ನ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಬಾಲಿವುಡ್‌ನ ಲೇಟೆಸ್ಟ್ ಸೆಲೆಬ್ರಿಟಿ ಪೋಷಕರು ಎನಿಸಿಕೊಂಡಿದ್ದಾರೆ. ಇಂದು ( ನವೆಂಬರ್ 12 ) ನಟಿ ಬಿಪಾಶಾ ಬಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ 43 ವರ್ಷದ ನಟಿ ಬಿಪಾಶಾ ಬಸು ಹಾಗೂ 40 ವರ್ಷದ ಕರಣ್ ಸಿಂಗ್ ಗ್ರೋವರ್ ವಿವಾಹವಾದ ಆರು ವರ್ಷಗಳ ಬಳಿಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
ಈ ವಿಷಯ ತಿಳಿದ ಬೆನ್ನಲ್ಲೇ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಬಿಪಾಶಾ ಬಸು ಅಭಿಮಾನಿಗಳು ದಂಪತಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ. ಇನ್ನು 2016ರಲ್ಲಿ ಮದುವೆಯಾಗಿದ್ದ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಜೋಡಿ ಸುಮಾರು ಒಂದು ವರ್ಷದ ಕಾಲ ಡೇಟಿಂಗ್‌ನಲ್ಲಿದ್ದು ಸುದ್ದಿಗೊಳಗಾಗಿತ್ತು. ಬಿಪಾಶಾ ಬಸು ತನಗಿಂತ ಮೂರು ವರ್ಷ ಕಿರಿಯನನ್ನು ಮದುವೆಯಾಗಿದ್ದೂ ಸಹ ವೈರಲ್ ಸುದ್ದಿಯಾಗಿತ್ತು.

ಇನ್ನು ಬಿಪಾಶಾ ಬಸು ಪತಿ ಕರಣ್ ಸಿಂಗ್ ಗ್ರೋವರ್ ಸಹ ಮಾಡೆಲ್ ಹಾಗೂ ನಟನಾಗಿದ್ದು ಇಬ್ಬರೂ 2015ರಲ್ಲಿ ನಟಿಸಿದ್ದ 'ಅಲೋನ್' ಚಿತ್ರದ ಮೂಲಕ ಪರಸ್ಪರ ಪರಿಚಯವಾಗಿ ಇಬ್ಬರ ನಡುವೆ ಸಲುಗೆ ಬೆಳೆದು ಸಲುಗೆ ಪ್ರೀತಿಗೆ ತಿರುಗಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಯಾವುದೇ ವಿವಾದಕ್ಕೂ ಆಸ್ಪದ ಮಾಡಿಕೊಡದೇ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದ ಈ ಜೋಡಿ ಸದ್ಯ ಜೀವನದ ಮತ್ತೊಂದು ಮಹತ್ವದ ಘಟ್ಟವನ್ನು ತಲುಪಿದೆ.
2001ರಲ್ಲಿ ಅಜ್ಞಾಬಿ ಎಂಬ ಹಿಂದಿ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಬಿಪಾಶಾ ಬಸು ತನ್ನ ಎರಡನೇ ಸಿನಿಮಾದಲ್ಲಿಯೇ ಮಹೇಶ್ ಬಾಬು ತೆಲುಗು ಚಿತ್ರ ಟಕ್ಕರಿ ದೊಂಗದಲ್ಲಿ ಅಭಿನಯಿಸುವ ಅವಕಾಶ ಪಡೆದರು. ನಂತರ ತಮಿಳು ಹಾಗೂ ಬೆಂಗಾಳಿ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿದ ಬಿಪಾಶಾ ಬಸು 2015ರಲ್ಲಿ ಪತಿ ಕರಣ್ ಸಿಂಗ್ ಗ್ರೋವರ್ ಜತೆ ಅಭಿನಯಿಸಿದ್ದ ಅಲೋನ್ ಚಿತ್ರದ ನಂತರ ಯಾವುದೇ ಚಿತ್ರದಲ್ಲೂ ಅಭಿನಯಿಸದೇ ಚಿತ್ರರಂಗದಿಂದ ದೂರ ಉಳಿದಿದ್ದಾರೆ.


Click it and Unblock the Notifications











