ಮೂರು ತಿಂಗಳ ಮಗುವಿಗೆ ಸರ್ಜರಿ: ನನ್ನ ಸ್ಥಿತಿ ಯಾವ ತಾಯಿಗೂ ಬರಬಾರದು ಎಂದು ಕಣ್ಣೀರಾಕಿದ ಬಿಪಾಶಾ ಬಸು
ಬಾಲಿವುಡ್‌ನ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಬಾಲಿವುಡ್‌ನ ಬೆಸ್ಟ್ ಸೆಲೆಬ್ರಿಟಿ ಕಪಲ್. ಪ್ರೀತಿಸಿ ಮದುವೆಯಾದ ಇವರು ಆರು ವರ್ಷಗಳ ಬಳಿಕ ಕಳೆದ ನವೆಂಬರ್ 12 ರಂದು ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದರು. 43 ವರ್ಷದ ನಟಿ ಬಿಪಾಶಾ ಬಸು ಮಗುವಿಗೆ ಜನ್ಮ ನೀಡಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಅದರೆ, ಎಲ್ಲವೂ ಚೆನ್ನಾಗಿದೆ ಎಂದೇ ಜನ ಅಂದುಕೊಂಡಿದ್ದರು. ಆದರೆ, ನಟಿ ಇತ್ತೀಚೆಗೆ ಒಂದು ದೊಡ್ಡ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಬಿಪಾಶಾ ಬಸು ಇತ್ತೀಚೆಗೆ ತಮ್ಮ ಮಗಳು ದೇವಿ ಬಸು ಸಿಂಗ್ ಗ್ರೋವರ್ ಅವರ ಆರೋಗ್ಯದ ಬಗ್ಗೆ ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಟಿ ನೇಹಾ ಧೂಪಿಯಾ ಅವರೊಂದಿಗಿನ ಸಂವಾದದಲ್ಲಿ ತನ್ನ ಮುದ್ದು ಮಗಳು ದೇವಿ ಜನಿಸುವಾಗಲೇ ಆಕೆಯ ಪುಟ್ಟ ಹೃದಯದಲ್ಲಿ ಎರಡು ರಂಧ್ರಗಳಿದ್ದವು ಎಂದು ಹೇಳಿದ್ದಾರೆ.

ನೇಹಾ ಧೂಪಿಯಾ ಅವರೊಂದಿಗಿನ ವಿಡಿಯೋ ಸಂವಾದಲ್ಲಿ ತಮ್ಮ ತಾಯ್ತನ, ಪೋಷಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಹುಟ್ಟುವಾಗಲೇ ಹೃದಯದಲ್ಲಿ ಎರಡು ರಂಧ್ರಗಳಿದ್ದ ಕಾರಣ ದೇವಿ ಮೂರು ತಿಂಗಳ ಮಗುವಾಗಿದ್ದಾಗಲೇ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂಬ ಆಘಾತಕಾರಿ ಅಂಶವನ್ನು ವಿವರಿಸಿದ್ದಾರೆ.
ತಾಯಿಯಾದ ಮೂರನೇ ದಿನವೇ ಆಘಾತ
ನಟಿ ಬಿಪಾಶ ಬಸು ಮಗುವಿಗೆ ಜನ್ಮ ನೀಡಿದ ಎರಡು ದಿನಗಳಲ್ಲಿಯೇ ಅವರ ಖುಷಿಗೆ ದೃಷ್ಟಿ ತಾಗಿತ್ತು. ಹೌದು....ದೇವಿ ಹುಟ್ಟಿದ ಮೂರನೇ ದಿನವೇ, ವೈದ್ಯರು ತಮ್ಮ ಮಗಳ ಹೃದಯದಲ್ಲಿ ಎರಡು ರಂಧ್ರಗಳು ಇವೆ ಎಂಬ ಕುರಿತು ತಿಳಿಸಿದ್ದರು. ಜೊತೆಗೆ ಇವು ಹಾಗೆಯೇ ಮುಚ್ಚಿಕೊಳ್ಳುತ್ತವೆಯೇ ಎಂಬುದನ್ನು ಪರೀಕ್ಷಿಸಲು ಪ್ರತಿ ತಿಂಗಳು ಸ್ಕ್ಯಾನ್‌ಗೆ ಒಳಗಾಗಬೇಕು ಎಂದು ಹೇಳಿದ್ದರು ಎಂದು ಬಿಪಾಶಾ ಬಸು ತಿಳಿಸಿದ್ದಾರೆ.

ಸತತ ಸ್ಕ್ಯಾನಿಂಗ್ ಬಳಿಕ ಕಂದಮ್ಮನ ಹೃದಯದಲ್ಲಿನ ರಂಧ್ರಗಳು ತುಂಬಾ ದೊಡ್ಡದಾಗಿರುವುದರಿಂದ ಅದು ತಾನಾಗಿಯೇ ವಾಸಿಯಾಗುವುದು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ದೇವಿ ಮೂರು ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆ ಮಾಡಲು ಉತ್ತಮ ಸಮಯ ಎಂದು ವೈದ್ಯರು ತಮಗೆ ಮಾಹಿತಿ ನೀಡಿದರು ಎಂದು ಅತೀ ಭಾವುಕರಾಗಿ ಮಾತನಾಡಿದ್ದಾರೆ.
ಆ ಚಿಕ್ಕ ಕಂದಮ್ಮನಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರೇ ನೀಮಗೆ ಹೇಗೆ ಅನ್ನಿಸುತ್ತದೆ. ದುಃಖ, ಭಾರ ಮತ್ತು ಸಂಘರ್ಷ ಎಲ್ಲವೂ ಒಮ್ಮೆಲೆ ಬರುತ್ತವೆ. ಇವೆಲ್ಲವೂ ತಾವಾಗಿಯೇ ಬಂದುಬಿಡುತ್ತವೆ ಎಂದು ವಿಡಿಯೋದಲ್ಲಿ ತಮ್ಮ ಕಣ್ಣೀರನ್ನು ನಿಯಂತ್ರಿಸುತ್ತಾ ಹೇಳಿದ್ದಾರೆ. "ನಮಗೆ ಈ ವಿಎಸ್‌ಡಿ (VSD - ventricular septal defect) ಎಂದರೇನು ಎಂದು ತಿಳಿದಿರಲಿಲ್ಲ. ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ ವೇಳೆ ಶಸ್ತ್ರಚಿಕಿತ್ಸಕರು, ವೈದ್ಯರು ಮತ್ತು ಹಲವು ಆಸ್ಪತ್ರೆಗಳಿಗೆ ಹೋಗಿದ್ದೆ" ಎಂದು ತಾವು ಎದುರಿಸಿದ ಕಷ್ಟದ ಸಮಯವನ್ನು ವಿವರಿಸಿದ್ದಾರೆ.

ಆಪರೇಷನ್‌ಗೆ ಪತಿ ಕರಣ್ ಸಿಂಗ್ ಗ್ರೋವರ್ ಸಿದ್ಧವಾಗಿಲ್ಲದಿದ್ದರೂ, ನನಗೆ ನಂಬಿಕೆಯಿತ್ತು. ಆಕೆ ಸರಿಯಾಗುತ್ತಾಳೆ ಎಂದು ನನಗೆ ತಿಳಿದಿತ್ತು. ಈಗ ಅವಳು ಎಲ್ಲವನ್ನು ದಾಟಿದ್ದಾಳೆ. ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಆಪರೇಷನ್ ಮಾಡಲಾಗಿತ್ತು. ನೀವು ನಿಮ್ಮ ಮಗುವನ್ನು ಪ್ರೀತಿಸುತ್ತಿದ್ದರೆ, ಅದರ ಭವಿಷ್ಯಕ್ಕಾಗಿ ಅದೆಷ್ಟೇ ಕಷ್ಟವಿದ್ದರೂ, ಏನೂ ಬೇಕಾದರು ಮಾಡುತ್ತಿರಿ. ಈಗ ಆಕೆ ಆರೋಗ್ಯವಾಗಿದ್ದಾಳೆ. ಅದರ ಬಗ್ಗೆ ನನಗೆ ಎಂದಿಗೂ ಅನುಮಾನವಿರಲಿಲ್ಲ. ನನ್ನ ದೇವಿ ನಮ್ಮ ಧೈರ್ಯ ಮತ್ತು ನಮ್ಮ ಶಕ್ತಿ" ಎಂದು ಹೇಳಿದ್ದಾರೆ.


Click it and Unblock the Notifications











