ಅರ್ಧ ಆಯುಷ್ಯ ಕಳೆದ ಕರಣ್ ಜೋಹರ್ ಮಾಡಿದರು ಹೊಸ ಘೋಷಣೆ
ಬಾಲಿವುಡ್‌ನ ಜನಪ್ರಿಯ ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹುಟ್ಟುಹಬ್ಬ ಇಂದು (ಮೇ 25). ಬಾಲಿವುಡ್‌ನ ಹಲವು ಸ್ಟಾರ್ ನಟ-ನಟಿಯರ ಆತ್ಮೀಯ ಗೆಳೆಯನಾಗಿರುವ ಕರಣ್ ಜೋಹರ್, 50ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಕರಣ್ ಜೋಹರ್, ತಮ್ಮ ಹುಟ್ಟುಹಬ್ಬಕ್ಕೆ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದು, ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಮಾತ್ರವೇ ಅಲ್ಲದೆ, ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ-ನಟಿಯರು ಸಹ ಭಾಗವಹಿಸಿದ್ದಾರೆ.
ಅರ್ಧ ಆಯುಷ್ಯ ಕಳೆದಿರುವ ಕರಣ್ ಜೋಹರ್ ತಮ್ಮ ಅಭಿಮಾನಿಗಳು, ಹಿತೈಷಿಗಳ ಕುರಿತು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಜೊತೆಗೆ ಹೊಸ ಸಿನಿಮಾದ ಘೋಷಣೆಯನ್ನು ಸಹ ಮಾಡಿದ್ದಾರೆ.

ಹುಟ್ಟುಹಬ್ಬದಂದು ಬಹಿರಂಗ ಪತ್ರ ಬರೆದ ಕರಣ್ ಜೋಹರ್
ಇನ್‌ಸ್ಟಾಗ್ರಾಂನಲ್ಲಿ ಬಹಿರಂಗ ಪತ್ರ ಹಂಚಿಕೊಂಡಿರುವ ಕರಣ್ ಜೋಹರ್, ''ಎಲ್ಲರಿಗೂ ನಮಸ್ಕಾರ, ಇದು (ಈ ಪತ್ರ) ನನ್ನ ಉತ್ಸಾಹದ ಪ್ರತಿಬಿಂಬವಲ್ಲ. ನಾನಿಂದು 50 ವರ್ಷಗಳನ್ನು ಪೂರೈಸಿದ್ದೇನೆ. ಈ ಸಂಖ್ಯೆಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ನನಗೆ ಗೊತ್ತಿದೆ, ನನ್ನ ಜೀವನದ ಅರ್ಧ ಆಯುಷ್ಯ ಮುಗಿದಿದೆ ಎಂದು. ಆದರೆ ಈಗಲೂ ಹೊಸ ತಲೆಮಾರಿನ ಯುವಕ ಯುವತಿಯರಂತೆ ಇರಲು ಬಯಸುವ ನನ್ನ ಮನಸ್ಸಿನ ಇಚ್ಛೆಯನ್ನು ನನಗೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ''ಈ ವಯಸ್ಸಿನಲ್ಲಿ ಉತ್ಸಾಹದಿಂದ ಬದುಕುವುದನ್ನು ಕೆಲವರು 'ಮಿಡ್‌ಲೈಫ್ ಕ್ರೈಸಿಸ್' (ನಡು ವಯಸ್ಸಿನ ಕೊರತೆಗಳು) ಎನ್ನಬಹದು ಆದರೆ ನನಗೆ ಇದು ಯಾವುದೇ ಗೊಣಗುವಿಕೆಗಳು ಇಲ್ಲದೆ ಬದುಕುವ ರೀತಿ ಎಂದೆನಿಸುತ್ತದೆ. ಹಾಗಾಗಿ ನಾನು ಹಾಗೇ ಬದುಕುತ್ತೇನೆ'' ಎಂದಿದ್ದಾರೆ ಕರಣ್.

ಕಳೆದ 27 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ: ಕರಣ್
''ನಾನು ಚಿತ್ರರಂಗದಲ್ಲಿ ಕಳೆದ 27 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇನೆ. ಈ ವೃತ್ತಿಯಲ್ಲಿ ಅದ್ಭುತ ಅನುಭವಗಳನ್ನು ನಾನು ಪಡೆದುಕೊಂಡಿದ್ದೇನೆ. ಕತೆಗಳನ್ನು ಹುಟ್ಟುಹಾಕುವುದು, ಸಿನಿಮಾಗಳನ್ನು ಮಾಡುವುದು, ಯುವ ನಟ-ನಟಿಯರನ್ನು ತಿದ್ದುವುದು, ಅದ್ಭುತವಾದ ನಟರು ನಟಿಸುವುದನ್ನು ಎದುರಿಗಿದ್ದು ನೋಡುವುದು, ಇದೆಲ್ಲವೂ ಅದ್ಭುತವಾದ ಕನಸು, ಆದರೆ ಇದು ನನ್ನನ್ನು ಎಚ್ಚರ ಇಟ್ಟಿದ್ದ ಕನಸು'' ಎಂದು ಬರೆದುಕೊಂಡಿದ್ದಾರೆ ಕರಣ್ ಜೋಹರ್.

ಟ್ರೋಲ್ ಮಾಡಿದವರಿಗೂ ಧನ್ಯವಾದ: ಕರಣ್
''ನನ್ನ ಮೇಲೆ ಇಟ್ಟಿಗೆ ಎಸೆದವರಿಗೆ, ಹೂಗುಚ್ಛ ಎಸೆದವರಿಗೆ, ನನ್ನನ್ನು ಪ್ರಶಂಸಿದವರಿಗೆ, ಬಹಿರಂಗವಾಗಿ ಟ್ರೋಲ್ ಮಾಡಿದವರಿಗೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇವೆಲ್ಲವೂ ನನ್ನ ಜೀವನದಲ್ಲಿ ಕಲಿಕೆಯ ಭಾಗವಾಗಿದ್ದವು ಮತ್ತು ವ್ಯಕ್ತಿಯಾಗಿ ನಾನು ಪ್ರಗತಿ ಸಾಧಿಸಲು ಸಹಕಾರಿಯಾದವು. ಇದೆಲ್ಲದರ ಮಧ್ಯೆ ನನಗೆ ಬಹಳ ನಂಬಿಕೆ ಇರುವುದೇಂದರೆ ನಾನೊಬ್ಬ ಒಳ್ಳೆಯ ಸಿನಿಮಾಕರ್ಮಿ ಎಂಬುದು'' ಎಂದಿದ್ದಾರೆ ಕರಣ್.

ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್
''ಈ ಹಿಂದೆ ನನ್ನ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಬಹಳ ಅಂತರ ತೆಗೆದುಕೊಳ್ಳುತ್ತಿದ್ದೆ. ಆದರೆ ಈಗ ಹಾಗೆ ಮಾಡುವುದಿಲ್ಲ. ಇಂದು ವಿಶೇಷ ದಿನವಾದ್ದರಿಂದ ನನ್ನ ಮುಂದಿನ ನಿರ್ದೇಶನದ ಸಿನಿಮಾದ ಬಗ್ಗೆ ಘೋಷಣೆ ಮಾಡುತ್ತಿದ್ದೇನೆ. ನನ್ನ ನಿರ್ದೇಶನದ 'ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ' 2023 ರ ಫೆಬ್ರವರಿ 10ಕ್ಕೆ ಬಿಡುಗಡೆ ಆಗಲಿದೆ. ಆ ಸಿನಿಮಾ ಬಿಡುಗಡೆ ಆದ ಬಳಿಕ ಏಪ್ರಿಲ್, 2023 ರಲ್ಲಿ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದೇನೆ. ಆ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ'' ಎಂದಿದ್ದಾರೆ ಕರಣ್.


Click it and Unblock the Notifications











