twitter
    For Quick Alerts
    ALLOW NOTIFICATIONS  
    For Daily Alerts

    ವಿಲನ್‌ನಿಂದ ರಿಯಲ್ ಹೀರೋ; ಸೋನು ಸೂದ್ ಜೀವನದ ರೋಚಕ ಪಯಣ

    |

    ಬಹುಭಾಷಾ ನಟ, ಖ್ಯಾತ ವಿಲನ್, ರಿಯಲ್ ಹೀರೋ ಸೋನು ಸೂದ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸೋನು ಸೂದ್‌ಗೆ ಅಭಿಮಾನಿಗಳಿಂದ, ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸೋನು ಸೂದ್ ಫೋಟೋ, ವಿಡಿಯೋ ಶೇರ್ ಮಾಡಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ವಿಲನ್ ಆಗಿ ಸೋನು ಸೂದ್ ಅವರನ್ನು ಆರಾಧಿಸಿದ್ದಕ್ಕಿಂತ ರಿಯಲ್ ಹೀರೋ ಸೋನು ಸೂದ್ ಅವರನ್ನು ಆರಾಧಿಸುತ್ತಿದ್ದಾರೆ, ಪೂಜಿಸುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಸಮಯದಿಂದ ಸೋನು ಸೂದ್ ಮಾಡಿರುವ ಮಾನವೀಯ ಕೆಲಸ ಅವರನ್ನು ರಿಯಲ್ ಹೀರೋ ಆಗಿ ಮಾಡಿದೆ.

    ಕಳೆದ ವರ್ಷ ದಿಢೀರ್ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ನಗರಗಳಲ್ಲಿ ದುಡಿಮೆ, ಆಹಾರವಿಲ್ಲದೆ ಅತ್ತ ಊರಿಗೂ ಹೋಗಲಾಗದೆ ಪರದಾಡುತ್ತಿದ್ದ ವಲಸಿಗರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡುವ ಮೂಲಕ ಸೋನು ತನ್ನ ಮಾನವೀಯ ಕೆಲಸ ಪ್ರಾರಂಭಿಸಿದರು. ಸೋನು ಸೂದ್ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಾವಿರಾರು ವಲಸೆ ಕಾರ್ಮಿಕರನ್ನು ಬಸ್ಸು, ರೈಲುಗಳ ಮೂಲಕ ಮರಳಿ ಗೂಡಿಗೆ ಸೇರಿಸುವ ಮಹತ್ವದ ಕೆಲಸ ಮಾಡಿದ್ದರು.

    ಲಾಕ್ ಡೌನ್ ಮುಕ್ತಾಯವಾದ ಬಳಿಕವೂ ಸೋನು ಸಮಾಜಸೇವೆ ಮುಂದುವರೆದಿತ್ತು. ದೇಶದ ಯಾವುದೋ ಮೂಲೆಯಲ್ಲಿನ ವ್ಯಕ್ತಿ ಕಷ್ಟ ಅಂತ ಸಹಾಯ ಕೇಳಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದರೆ ಸಾಕು ಮುಂಬೈನಲ್ಲಿರುವ ಸೋನು ಸೂದ್ ಅದಕ್ಕೆ ಸ್ಪಂದಿಸುತ್ತಾರೆ. ಆ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಹೀಗೆ ಕಳೆದ ವರ್ಷದಿಂದ ಸೋನು ಸೂದ್, ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್‌ನಿಂದ ಸೋನು ಖಳನಟರಾದವರು ರಾತ್ರೋರಾತ್ರಿ ರಿಯಲ್ ಹೀರೋ ಆಗಿ ಖ್ಯಾತಿಗಳಿಸಿದರು. ಮುಂದೆ ಓದಿ...

    ನಟನಾಗುವ ಬಯಕೆ

    ನಟನಾಗುವ ಬಯಕೆ

    ಸೋನು ತಂದೆ, ಜವಳಿ ಉದ್ಯಮ ನಡೆಸುತ್ತಿದ್ದರು, ತಾಯಿ ಶಿಕ್ಷಕಿಯಾಗಿದ್ದರು. ನಾಗಪುರದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಸೋನು ನಟರಾಗುವ ಬಯಕೆಯಿಂದ ಮುಂಬೈಗೆ ಬಂದರು. ಆರಂಭದ ದಿನಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದರು. ಹೆಚ್ಚಿನ ಕಲಾವಿದರಂತೆ ಫೋಟೊಗಳನ್ನು ಹಿಡಿದುಕೊಂಡು ಸಿನಿಮಾ ಸ್ಟುಡಿಯೋಗಳಿಗೆ ತೆರಳುತ್ತಿದ್ದರು. ಆಗ ಅವರನ್ನು ಗುರುತಿಸಿ ಅವಕಾಶ ನೀಡಿದ್ದು ತಮಿಳು ಚಿತ್ರರಂಗ.

    ಖಳನಟನಾಗಿ ವೃತ್ತಿ ಜೀವನ ಪ್ರಾರಂಭ

    ಖಳನಟನಾಗಿ ವೃತ್ತಿ ಜೀವನ ಪ್ರಾರಂಭ

    ಪಂಜಾಬ್‌ನ ಮೋಗಾದಲ್ಲಿ ಜನಿಸಿದ ಸೋನು ಸೂದ್, ಜುಲೈ 30ರಂದು 48ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಉತ್ತರ ಭಾರತದವರಾದರೂ ಸೋನು ಸೂದ್ ಪ್ರತಿಭೆಗೆ ಅವಕಾಶ ನೀಡಿದ್ದು ದಕ್ಷಿಣ ಭಾರತ. 1999ರಲ್ಲಿ ತಮಿಳಿನ ಕಳಾಜಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಅದರ ಜೊತೆಯಲ್ಲಿ ಅವರು ನೆಂಜಿನಿಲೆ ಎಂಬ ಚಿತ್ರದಲ್ಲಿಯೂ ನಟಿಸಿದರು.

    2002ರಲ್ಲಿ ಬಾಲಿವುಡ್‌ಗೆ ಎಂಟ್ರಿ

    2002ರಲ್ಲಿ ಬಾಲಿವುಡ್‌ಗೆ ಎಂಟ್ರಿ

    ತಮಿಳು ಸಿನಿಮಾದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಸೋನು ಸೂದ್, ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಮಾಡಿ ಬಳಿಕ ಬಾಲಿವುಡ್ ಕಡೆ ಮುಖ ಮಾಡಿದರು. ಶಾಹೀದ್ ಇ ಅಜಮ್ ಚಿತ್ರದ ಮೂಲಕ ಸೋನು ಸೂದ್ ಬಾಲಿವುಡ್‌ಗೆ ಪ್ರವೇಶ ಪಡೆದರು. ಮೊದಲ ಬಾಲಿವುಡ್ ಸಿನಿಮಾದಲ್ಲೇ ಸೋನು ದೊಡ್ಡ ಬ್ರೇಕ್ ಪಡೆದರು. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಸೋನು ಮತ್ತೆ ದಕ್ಷಿಣ ಭಾರತದ ಕಡೆ ಮುಖಮಾಡಿದರು.

    ಅರುಂಧತಿ ಬ್ರೇಕ್

    ಅರುಂಧತಿ ಬ್ರೇಕ್

    ತಮಿಳು ಮತ್ತು ತೆಲುಗಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸೋನುಗೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಟ್ಟ ಸಿನಿಮಾ ತೆಲುಗಿನ 'ಅರುಂಧತಿ'. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ, ಅವರಲ್ಲಿನ ಪ್ರತಿಭೆಯನ್ನು ಗುರುತಿಸುವಂತೆ ಮಾಡಿದ್ದು, ಕೋಡಿ ರಾಮಕೃಷ್ಣ ನಿರ್ದೇಶನದ 'ಅರುಂಧತಿ' ಚಿತ್ರ. ಈ ಚಿತ್ರದ ಬಳಿಕ ಸೋನು ಮತ್ತಷ್ಟು ಬ್ಯುಸಿಯಾದರು. ಖಳನಾಯಕನ ಪಾತ್ರಗಳು ಒಂದರ ಮೇಲೊಂದು ಬರತೊಡಗಿದವು.

    2011ರಲ್ಲಿ ಕನ್ನಡಕ್ಕೆ ಎಂಟ್ರಿ

    2011ರಲ್ಲಿ ಕನ್ನಡಕ್ಕೆ ಎಂಟ್ರಿ

    ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರಸಿದ್ಧಿಗಳಿಸಿದ್ದ ಸೋನು ಸೂದ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು, 2011ರಲ್ಲಿ ಬಂದ ವಿಷ್ಣುವರ್ಧನ ಸಿನಿಮಾ ಮೂಲಕ. ಕಿಚ್ಚ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿರುವ ವಿಷ್ಣುವರ್ಧನ ಸಿನಿಮಾದಲ್ಲಿ ಸೋನು ಖಳನಟನಾಗಿ ಮಿಂಚುವ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದರು. ವಿಷ್ಣುವರ್ಧನ ಬಳಿಕ ಸೋನು ಕನ್ನಡದಲ್ಲಿ ದರ್ಶನ್ ನಟನೆಯ ಕುರುಕ್ಷೇತ್ರ ಸಿನಿಮಾ ಮೂಲಕ ಮತ್ತೆ ಬಂದರು. ಅರ್ಜುನ ಪಾತ್ರದಲ್ಲಿ ಸೋನು ಕಾಣಿಸಿಕೊಂಡಿದ್ದರು.

    ತಂದೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ

    ತಂದೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ

    2016ರ ಜೂನ್‌ನಲ್ಲಿ ಸೋನು, ತಂದೆ ಶಕ್ತಿ ಸಾಗರ್ ಸೂದ್ ಹೆಸರಿನಲ್ಲಿ 'ಶಕ್ತಿ ಸಾಗರ್ ಪ್ರೊಡಕ್ಷನ್ಸ್' ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. ಅದೇ ವರ್ಷ ಫೆಬ್ರವರಿಯಲ್ಲಿ ಅವರ ತಂದೆ ನಿಧನರಾಗಿದ್ದರು. ಅವರ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ '2 ಇನ್ 1' ಚಿತ್ರದ ಪೋಸ್ಟರ್ ಅನ್ನು ಖ್ಯಾತ ನಟ ಜಾಕಿಚಾನ್ ಬಿಡುಗಡೆ ಮಾಡಿದ್ದರು.

    ಶಕ್ತಿ ಸಾಗರ್ ಹೋಟೆಲ್

    ಶಕ್ತಿ ಸಾಗರ್ ಹೋಟೆಲ್

    ಮುಂಬೈನ ಜುಹುದಲ್ಲಿ ಇಸ್ಕಾನ್ ಸಮೀಪ ಸೋನು ಸೂದ್ ಕುಟುಂಬದ ಮಾಲೀಕತ್ವದ ಶಕ್ತಿ ಸಾಗರ್ ಎಂಬ ಹೋಟೆಲ್ ಇದೆ. ತಂದೆಯ ಹೆಸರಿನಲ್ಲಿ ಸೋನು ಹೋಟೆಲ್ ಅನ್ನು ನಿರ್ಮಿಸಿದ್ದಾರೆ. ಈ ಹೋಟೆಲ್‌ ಅನ್ನು ಕೂಡ ಸೋನು ಸೂದ್, ಕಳೆದ ವರ್ಷ ಕೊರೊನಾ ವೈರಸ್ ವಿರುದ್ಧದ ಹೋರಾಟ ನಡೆಸುತ್ತಿರುವ ಪ್ಯಾರಾ ಮೆಡಿಕಲ್ ತಂಡಕ್ಕೆ ಬಳಸಿಕೊಳ್ಳಬಹುದು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೋನು ಹೇಳಿದ್ದರು.

    ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ

    ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ

    ಕೊರೊನಾ ಎರಡನೇ ಅಲೆ ಭೀಕರತೆ ಸಮಯದಲ್ಲಿ ಸೋನು ಸೂದ್ ಅನೇಕ ಮಂದಿಯ ಚಿಕಿತ್ಸೆಗೆ ನೆರವಾಗಿದ್ದಾರೆ. ಆಕ್ಸಿಜನ್ ಸಿಗದೆ ಪರದಾಡುತ್ತಿದ್ದ ಸಾವಿರಾರು ಸೋಂಕಿತರ ಜೀವ ಉಳಿಸಿದ್ದಾರೆ. ಎಲ್ಲೂ ಸಿಗದ ಆಕ್ಸಿಜನ್ ಸೋನು ಸೂದ್‌ಗೆ ಬೇಗ ಸಿಗುತ್ತಿತ್ತು. ಅನೇಕರು ಆಕ್ಸಿಜನ್‌ಗಾಗಿ ಸೋನು ಸೂದ್ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ತಮ್ಮ ಕೈಲಾದಷ್ಟು ಸಹಾಯವನ್ನು ಸೋನು ಮಾಡಿದ್ದಾರೆ. ದೇಶದಲ್ಲಿ ಆಕ್ಸಿಜನ್ ಕೊರತೆ ಕಂಡು ರಾಜ್ಯದ ಅನೇಕ ಕಡೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ನಿರ್ಧರಿಸಿ ಒಟ್ಟು 18 ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದ ಆಕ್ಸಿಜನ್ ಕೊರತೆಯಾಗದಂತೆ ಎಚ್ಚರ ವಹಿಸಿದ್ದಾರೆ.

    ಸಣ್ಣ ಉದ್ಯಮಕ್ಕೆ ಬೆಂಬಲ

    ಸಣ್ಣ ಉದ್ಯಮಕ್ಕೆ ಬೆಂಬಲ

    ಕೊರೊನಾ ಎರಡನೇ ಅಲೆಯ ಭೀಕರತೆ ಕಡಿಮೆಯಾಗಿದೆ. ಹಾಗಂತ ಸೋನು ಸೂದ್ ಸೈಲೆಂಟ್ ಆಗಿಲ್ಲ. ಈಗಲೂ ಸಹಾಯ ಮಾಡುತ್ತಿದ್ದಾರೆ. ಸಣ್ಣ ಉದ್ಯಮಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ್ದಂತೆ ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ವ್ಯಪಾರಿಗಳಿಗೆ, ಉದ್ಯಮಕ್ಕೆ ಬೆಂಬಲ ನೀಡಿ ಮನವಿ ಮಾಡುವ ಇಂಟ್ರಸ್ಟಿಂಗ್ ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

     ಸೋನು ಸೂದ್ ಬಳಿ ಇರುವ ಸಿನಿಮಾಗಳು

    ಸೋನು ಸೂದ್ ಬಳಿ ಇರುವ ಸಿನಿಮಾಗಳು

    ಮಾನವೀಯ ಕೆಲಸಗಳ ಜೊತೆಗೆ ಸೋನು ಸೂದ್ ಸಿನಿಮಾಗಳಲ್ಲೂ ತೊಡಗಿಕೊಂಡಿದ್ದಾರೆ. ಸದ್ಯ ಸೋನು ಸೂದ್ ತೆಲುಗಿನ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹಿಂದಿಯ ಪೃಥ್ವಿರಾಜ್ ಮತ್ತು ತಮಿಳಿನ ಒಂದು ಸಿನಿಮಾದಲ್ಲಿ ಸೋನು ಬ್ಯುಸಿಯಾಗಿದ್ದಾರೆ.

    English summary
    Birthday Special: Sonu Sood journey from reel life villain to real life hero.
    Friday, July 30, 2021, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X