ವಿದೇಶದಲ್ಲಿ ಭಾರತಕ್ಕೆ ಅಪಮಾನ ಆರೋಪ, ನಟನ ವಿರುದ್ಧ ದೂರು
ನಟ, ಸ್ಟ್ಯಾಂಡ್ ಅಪ್ ಕಮಿಡಿಯನ್ ಆಗಿರುವ ವೀರ್ ದಾಸ್ ವಿರುದ್ಧ ಬಿಜೆಪಿ ಮುಖಂಡ ಆದಿತ್ಯ ಝಾ ಸೇರಿದಂತೆ ಇನ್ನೂ ಕೆಲವರು ದೂರು ದಾಖಲಿಸಿದ್ದಾರೆ.
ಭಾರತದ ಜನಪ್ರಿಟಯ ಸ್ಟ್ಯಾಂಡಪ್ ಕಮಿಡಿಯನ್ ಆಗಿರುವ ವೀರ್ ದಾಸ್ ಹಲವು ದೇಶಗಳಲ್ಲಿ ಶೋಗಳನ್ನು ನೀಡಿದ್ದಾರೆ. ಭಾರತದ ಹೊರಗೆ ಅತ್ಯಂತ ಜನಪ್ರಿಯ ಭಾರತದ ಕಮಿಡಿಯನ್ ಆಗಿ ಗುರುತಿಸಿಕೊಂಡಿದ್ದಾರೆ ವೀರ್ ದಾಸ್.
ಕೆಲವು ದಿನಗಳ ಹಿಂದೆ ಅಮೆರಿಕದ ವಾಷಿಂಗ್ಟನ್‌ನ ಕೆನಡಿ ಸೆಂಟರ್‌ನಲ್ಲಿ ಸ್ಟ್ಯಾಂಡಪ್ ಶೋ ಒಂದನ್ನು ನೀಡಿದ್ದರು. ಐತಿಹಾಸಿಕ ಕೆನಡಿ ಸೆಂಟರ್‌ನಲ್ಲಿ ಮಾತನಾಡಿದ್ದ ವೀರ್ ದಾಸ್ ತಮ್ಮ ಶೋಗೆ 'ಟು ಇಂಡಿಯಾ' ಹೆಸರು ನೀಡಿ. ಭಾರತದ ಎರಡು ಮುಖದ ಪರಿಚಯ ಮಾಡಿಸುವ ಯತ್ನ ಮಾಡಿದ್ದರು.

''ನಮ್ಮಲ್ಲಿ ಎರಡು ಭಾರತ ಇದೆ, ಬೆಳಗಿನ ಸಮಯ ನಾವು ಮಹಿಳೆಯನ್ನು ಪೂಜಿಸುತ್ತೇವೆ, ರಾತ್ರಿ ಆದ ಕೂಡಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತೇವೆ, ಮಕ್ಕಳು ಮಾಸ್ಕ್ ಹಾಕಿಕೊಂಡು ಪರಸ್ಪರ ಕೈಹಿಡಿದುಕೊಳ್ಳುತ್ತಾರೆ, ಆದರೆ ರಾಜಕಾರಣಿಗಳು ಮಾಸ್ಕ್ ಇಲ್ಲದೆ ಪರಸ್ಪರ ಅಪ್ಪಿಕೊಳ್ಳುತ್ತಾರೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಇನ್ನೂ ಹಲವು ಧರ್ಮದ ಜನರು ಇಲ್ಲಿದ್ದಾರೆ ಆದರೆ ಎಲ್ಲರೂ ಆಕಾಶದತ್ತ ನೋಡಿದರೆ ಕಾಣುವುದು ಏರಿರುವ ಪೆಟ್ರೋಲ್ ಬೆಲೆಯಷ್ಟೆ. ನನ್ನ ಭಾರತದಲ್ಲಿ ಸಸ್ಯಹಾರಿಗಳೆಂದು ಎದೆ ತಟ್ಟಿಕೊಳ್ಳುತ್ತೇವೆ, ಆದರೆ ಅದೇ ತರಕಾರಿ ಬೆಳೆವ ರೈತರ ಮೇಲೆ ವಾಹನ ಹತ್ತಿಸುತ್ತೇವೆ'' ಎಂದು ಶೋನಲ್ಲಿ ಹೇಳಿದ್ದಾರೆ ವೀರ್ ದಾಸ್.
ವೀರ್ ದಾಸ್ ಶೋನಲ್ಲಿ ಕೇಂದ್ರವನ್ನು ಟೀಕಿಸುವ ಮಾತುಗಳು ಹೆಚ್ಚಿದ್ದವು, ಭಾರತದ ಎರಡು ಮುಖಗಳ ಬಗ್ಗೆ ವೀರ್ ದಾಸ್ ಶೋನಲ್ಲಿ ಮಾತನಾಡಿದರು. ಕೆನಡಿ ಸೆಂಟರ್‌ನಲ್ಲಿ ಭಾರಿ ಜನ ತುಂಬಿದ್ದು, ವೀರ್ ದಾಸ್ ಮಾತುಗಳಿಗೆ ಜೋರು ಕರತಾಡನದ ಮೂಲಕ ಸಮ್ಮತಿ ಸೂಚಿಸಿದರು.
ವೀರ್ ದಾಸ್ ಮಾತುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಆದಿತ್ಯ ಝಾ, ''ವಿದೇಶಿ ನೆಲದಲ್ಲಿ ಈ ರೀತಿ ಭಾರತಕ್ಕೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ. ನಾನು ಈ ಕಾನೂನು ಸಮರವನ್ನು ಅಂತ್ಯದ ವರೆಗೆ ತೆಗೆದುಕೊಂಡು ಹೋಗುತ್ತೇನೆ. ವೀರ್ ದಾಸ್ ಬಂಧನ ಆಗಲೇ ಬೇಕು'' ಎಂದಿದ್ದಾರೆ.
ಆದಿತ್ಯ ಝಾ ಮಾತ್ರವೇ ಅಲ್ಲ ನಟಿ, ಬಿಜೆಪಿ 'ಸಾಮಾಜಿಕ ಜಾಲತಾಣ ವಕ್ತಾರೆ' ಕಂಗನಾ ರನೌತ್ ಸಹ ವೀರ್ ದಾಸ್ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥಹಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು'' ಎಂದು ಒತ್ತಾಯಿಸಿದ್ದಾರೆ.
ಕೆನಡಿ ಸೆಂಟರ್‌ನಲ್ಲಿ ತಾವು ಆಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿರುವ ವೀರ್ ದಾಸ್, ''ಯಾವುದೇ ದೇಶಕ್ಕಾದರೂ ಎರಡು ಮುಖಗಳಿರುತ್ತವೆ. ಒಂದು ಒಳ್ಳೆಯದು ಮತ್ತೊಂದು ಕೆಟ್ಟದು. ಇದು ಗುಟ್ಟೇನೂ ಅಲ್ಲ.
ನಾನು ಆಡಿರುವ ಮಾತುಗಳಲ್ಲಿ ಸ್ಪಷ್ಟವಾಗಿದೆ ಭಾರತ ಮಹತ್ತರವಾದುದು ಹಾಗೂ ಭಾರತವನ್ನು ಮಹತ್ತರಾಗುವಂತೆ ಮಾಡಿದ ಅಂಶಗಳನ್ನು ನಾವು ಮರೆಯಬಾರದು ಎಂದು. ವಿಡಿಯೋದ ಕೊನೆಯಲ್ಲಿ ಶೋನಲ್ಲಿ ಸೇರಿದ್ದ ಜನ ಸಹ ದೇಶಭಕ್ತಿಯ ಭಾವದಲ್ಲಿ ದೊಡ್ಡ ಚಪ್ಪಾಳೆಯನ್ನು ತಟ್ಟಿದ್ದಾರೆ. ಆ ರೀತಿಯ ನಿಜವಾದ ದೇಶಭಕ್ತಿಯನ್ನು ಬಡಿದೆಬ್ಬಿಸುವುದೇ ನನ್ನ ಮಾತುಗಳ ಉದ್ದೇಶವಾಗಿತ್ತು ಹಾಗೂ ಅದರಲ್ಲಿ ನಾನು ಅಂದು ಸಫಲನಾದೆ'' ಎಂದ್ದಿದ್ದಾರೆ ವೀರ್ ದಾಸ್.
''ಎಡಿಟ್ ಮಾಡಿದ ವಿಡಿಯೋಗಳಿಂದ ಮೋಸ ಹೋಗಬೇಡಿ. ಜನ ಭಾರತಕ್ಕಾಗಿ ಉತ್ಸಾಹದಿಂದ ಚೀರುತ್ತಾರೆ, ದ್ವೇಷದಿಂದಲ್ಲ. ಜನ ಭಾರತಕ್ಕಾಗಿ ಚಪ್ಪಾಳೆ ತಟ್ಟುವುದು ಗೌರವದಿಂದ, ಕೀಳರಿಮೆಯಿಂದಲ್ಲ. ಯಾರೇ ಆಗಲಿ ಜನರ ಚಪ್ಪಾಳೆ, ಪ್ರೀತಿಯನ್ನು ಪಡೆದುಕೊಳ್ಳುವುದು ಪ್ರೀತಿ, ಒಳ್ಳೆಯ ಸಂದೇಶ ಹಂಚಿಯೇ ಹೊರತು ದ್ವೇಷ ಹಂಚಿ ಅಲ್ಲ'' ಎಂದಿದ್ದಾರೆ ವೀರ್ ದಾಸ್.
''ನನಗೆ ನನ್ನ ದೇಶದ ಬಗ್ಗೆ ಹೆಮ್ಮೆ ಇದೆ. ಅದೇ ಹೆಮ್ಮೆಯನ್ನು ನಾನು ಇತರೆ ದೇಶಗಳಲ್ಲೂ ವ್ಯಕ್ತಪಡಿಸುತ್ತೇನೆ. ಯಾವುದೇ ದೇಶದಲ್ಲಾಗಲಿ ಆ ರೀತಿ ಇಡೀ ಸಭಾಂಗಣದ ತುಂಬಿದ ಜನ ಎದ್ದುನಿಂತು ಚಪ್ಪಾಳೆ ತಟ್ಟಿದ್ದಾರೆಂದರೆ ಅದರ ಅರ್ಥ ನಾನು ಒಳ್ಳೆಯದು ಹೇಳಿದ್ದೇನೆ, ಅವರು ನನಗೆ ಪ್ರೀತಿ ನೀಡುತ್ತಿದ್ದಾರೆ ಎಂದೇ ಆಗಿದೆ. ನಾನು ಆ ವಿಡಿಯೋದ ಅಂತ್ಯದಲ್ಲಿ ಜನರಿಗೆ ಕೇಳಿದ್ದನ್ನೇ ನಿಮಗೆ ಕೇಳುತ್ತೇನೆ. ಬೆಳಕಿನ ಮೇಲೆ ವಿಶ್ವಾಸವಿಡಿ, ನಮ್ಮ ದೇಶದ ಮಹತ್ತರ ಇತಿಹಾಸವನ್ನು ನೆನಪು ಮಾಡಿಕೊಳ್ಳಿ ಮತ್ತು ಪ್ರೀತಿ ಹಂಚಿ'' ಎಂದಿದ್ದಾರೆ ವೀರ್ ದಾಸ್.


Click it and Unblock the Notifications











