'ಮೇರಾ ನಾಮ್ ಜೋಕರ್' ಸಿನಿಮಾ ಖ್ಯಾತಿಯ ನಟ ಜೂನಿಯರ್ ಮೆಹಮೂದ್ ನಿಧನ
ಚಿತ್ರರಂಗದಲ್ಲಿ ಸರಣಿ ಸಾವಿನ ಸರಮಾಲೆ ಮುಂದುವರೆದಿದೆ. ಬಾಲಿವುಡ್ ಪೋಷಕ ನಟ ಜೂನಿಯರ್ ಮೆಹಮೂದ್ ಮಾರಕ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಜೀತೇಂದ್ರ, ಸಚಿನ್ ಪಿಲ್ಗಾಂವ್ಕರ್, ಜಾನಿ ಲೀವರ್ ಸೇರಿದಂತೆ ಚಿತ್ರರಂಗದ ಗಣ್ಯರು ಇತ್ತೀಚೆಗೆ ಜೂನಿಯರ್ ಮೆಹಮೂದ್ ಆರೋಗ್ಯ ವಿಚಾರಿಸಿದ್ದರು.
ಹಲವು ದಿನಗಳಿಂದ 4ನೇ ಹಂತದ ಕ್ಯಾನ್ಸರ್ ವಿರುದ್ಧ ಮೆಹಮೂದ್ ಹೋರಾಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 5 ದಶಕಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಮೆಹಮೂದ್ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.

ಕಳೆದ ರಾತ್ರಿ ಮೆಹಮೂದ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಮ್ಮ ಸ್ವಗೃಹದಲ್ಲೇ ಕೊನೆಯುಸಿರೆಳೆದಿದ್ದಾರೆ. 'ಕಟಿ ಪತಂಗ್', 'ಪರ್ವರಿಶ್' ಮತ್ತು 'ದೋ ಔರ್ ದೋ ಪಾಂಚ್' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಬಾಲನಟನಾಗಿ ಬಾಲಿವುಡ್ ಪ್ರವೇಶಿಸಿದ ಮೆಹಮೂದ್ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ಮೆಹಮೂದ್ ಕಿರಿಯ ಪುತ್ರ ಹಸ್ನೈನ್ ಮಾತನಾಡಿ "ನಮ್ಮ ತಂದೆ ಹೊಟ್ಟೆಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಕಳೆದ 17 ದಿನಗಳಿಂದ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಒಂದು ತಿಂಗಳಲ್ಲಿ 35-40 ಕೆಜಿ ತೂಕ ಕಳೆದುಕೊಂಡಿದ್ದರು" ಎಂದು ಮಾಹಿತಿ ನೀಡಿದ್ದಾರೆ.
ಹೊಟ್ಟೆಯ ಕ್ಯಾನ್ಸರ್ ಕೊನೆ ಹಂತ ತಲುಪಿದ್ದರಿಂದ ವೈದ್ಯರು ಸಹ ಕೈಚೆಲ್ಲಿದ್ದರು. ಮೆಹಮೂದ್‌ಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರ ಕೆಲ ದಿನಗಳ ಹಿಂದೆಯೇ ಗೊತ್ತಾಗಿತ್ತು. ಕುಟುಂಬ ಸದಸ್ಯರು ಅವರನ್ನು ಟಾಟಾ ಮೆಮೊರಿಯಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅದಾಗಲೇ ಪರಿಸ್ಥಿತಿ ಕೈ ಮೀರಿತ್ತು. 4ನೇ ಹಂತದ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿಮೊಥೆರಪಿ ಮಾಡಲಾಗುತ್ತಿತ್ತು. ಆ ನೋವು ತಡೆದುಕೊಳ್ಳುವುದ ಕಷ್ಟ ಎಂದು ವೈದ್ಯರು ಹೇಳಿದ್ದರು. ಆಸ್ಪತ್ರೆ ಬದಲು ಮನೆಯಲ್ಲೇ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು. ತಮ್ಮದೇ ಸ್ವಗೃಹದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಪಡೆಯುತ್ತಲೇ ಮೆಹಮೂದ್ ಇಹಲೋಕ ತ್ಯಜಿಸಿದ್ದಾರೆ.
ಮುಂಬೈ ಸಾಂತಾಕ್ರೂಜ್ ವೆಸ್ಟ್‌ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಜೂನಿಯರ್ ಮೆಹಮೂದ್ ಅಂತ್ಯಕ್ರಿಯೆ ಸಿದ್ಧತೆ ನಡೀತಿದೆ. ಅಲ್ಲಿ ಅವರ ತಾಯಿಯನ್ನು ಸಹ ಸಮಾಧಿ ಮಾಡಲಾಗಿದೆ. ಖ್ಯಾತ ಹಾಸ್ಯನಟ ಮೆಹಮೂದ್ ಅವರಿಂದ ನಯೀಮ್ ಸಯೀದ್‌ಗೆ ಜೂನಿಯರ್ ಮೆಹಮೂದ್ ಎನ್ನುವ ಹೆಸರು ಬಂದಿತ್ತು.
1956, ನವೆಂಬರ್ 15ರಂದು ಮುಂಬೈನಲ್ಲಿ ಜನಿಸಿದ ನಯೀಮ್ ಸಯೀದ್ ಮೊದಲಿಗೆ 'ಮೊಹಬ್ಬತ್ ಜಿಂದಗಿ ಹೈ' ಚಿತ್ರದಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದ್ದರು. ಜೂನಿಯರ್ ಮೆಹಮೂದ್ ಹೆಸರಿನಲ್ಲಿ ಚಿತ್ರರಂಗಕ್ಕೆ ಬಂದ ಅವರು ಅದೇ ಹೆಸರಿನಲ್ಲಿ ಗುರ್ತಿಸಿಕೊಂಡರು. ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಮೆಹಮೂದ್ ಗೆದ್ದಿದ್ದರು.
ಜೂನಿಯರ್ ಮೆಹಮೂದ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ 6 ಮರಾಠಿ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು. 'ಬ್ರಹ್ಮಚಾರಿ', 'ಕಟಿ ಪತಂಗ್', 'ಹರೇ ರಾಮ ಹರೇ ಕೃಷ್ಣ', 'ಗೀತ್ ಗಾತಾ ಚಲ್', 'ಇಮಾಂದಾರ್', 'ಬಾಪ್ ನಂಬರಿ ಬೇಟಾ ದಸ್ ನಂಬರಿ', 'ಆಜ್ ಕಾ ಅರ್ಜುನ್', 'ಗುರುದೇವ್', 'ಛೋಟೆ ಸರ್ಕಾರ್' ಮತ್ತು 'ಜುದಾಯಿ' ಮೆಹಮೂದ್ ನಟಿಸಿದ ಕೆಲ ಹಿಟ್ ಸಿನಿಮಾಗಳು.


Click it and Unblock the Notifications











