ಚಿತ್ರೀಕರಣದ ವೇಳೆ ಶಾರುಖ್ ಖಾನ್‌ಗೆ ಪೆಟ್ಟು; ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣ?
ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರು ಗಾಯಗೊಳ್ಳುವುದು ಹೊಸದೇನು ಅಲ್ಲ. ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಇದೇ ರೀತಿ ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ 'ಕಿಂಗ್' ಚಿತ್ರದಲ್ಲಿ ನಟಿಸುತ್ತಿರುವ ಅವರು ಗಾಯಗೊಂಡು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಗುಲ್ಲಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ 'ಕಿಂಗ್' ಸಿನಿಮಾ ನಿರ್ಮಾಣವಾಗುತ್ತಿದೆ. ಶಾರುಖ್ ಖಾನ್ ಜೊತೆಗೆ ಮಗಳು ಸುಹಾನಾ ಖಾನ್ ಸಹ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇದೇ ವೇಳೆ ಅವರು ಗಾಯಗೊಂಡಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗಿತ್ತು.

ಶಾರುಖ್ ಖಾನ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅಮೆರಿಕಾದಲ್ಲಿ ಚಿಕಿತ್ಸೆಗೆ ತೆರಳುತ್ತಾರೆ. ತಿಂಗಳ ಕಾಲ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹಾಗಾಗಿ 'ಕಿಂಗ್' ಚಿತ್ರದ ಚಿತ್ರೀಕರಣ ಕೂಡ ಮುಂದೂಡಲಾಗುತ್ತಿದೆ ಎಂದು ಸುದ್ದಿ ಆಗಿತ್ತು. ಇದೀಗ ಆ ಸುದ್ದಿ ಸುಳ್ಳು ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲ ಸುಳ್ಳು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಬಲ್ಲ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿರುವುದಾಗಿ ಹೇಳಿದೆ.
ಶಾರುಖ್ ಖಾನ್ ಈ ಹಿಂದೆ ಕೂಡ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ವರ್ಷದ ಹಿಂದೆ ಕಿಂಗ್ ಖಾನ್ ಮೂಗಿಗೆ ಪೆಟ್ಟಾಗಿದೆ. ಸರ್ಜರಿ ಮಾಡಬೇಕು ಎಂದು ಹೇಳಲಾಗಿತ್ತು. ಬಳಿಕ ಅದು ಸಣ್ಣ ಸರ್ಜರಿ ಅಷ್ಟೇ ಎಂದು ವರದಿಯಾಗಿತ್ತು. ಸಿನಿಮಾಗಳ ವಿಚಾರಕ್ಕೆ ಬಂದರೆ ಕಿಂಗ್ ಖಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 'ಜೀರೊ' ಸಿನಿಮಾ ಸೋತಿದ್ದ ಶಾರುಖ್ 4 ವರ್ಷ ಬ್ರೇಕ್ ಪಡೆದಿದ್ದರು. ಬಳಿಕ 'ಪಠಾಣ್', 'ಜವಾನ್' ಹಾಗೂ 'ಡಂಕಿ' ಸಿನಿಮಾಗಳಲ್ಲಿ ನಟಿಸಿ ಗೆದ್ದರು.
'ಡಂಕಿ' ಬಳಿಕ ದಿಢೀರ್ ಸೈಲೆಂಟ್ ಆಗಿಬಿಟ್ಟರು. 'ಕಿಂಗ್' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ಯಾವುದೇ ಸಿನಿಮಾ ಅವರು ಒಪ್ಪಿಕೊಂಡಿಲ್ಲ. ಇನ್ನು ಮಗಳು ಸುಹಾನಾ ನಡಿಸುತ್ತಿರುವ ದೊಡ್ಡ ಸಿನಿಮಾ ಇದು. ಈ ಹಿಂದೆ 'ದಿ ಆರ್ಚೀಸ್' ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದಳು. ಆ ಟೀನೇಜ್ ಸ್ಟೋರಿ ಸಿನಿಮಾ ದೊಡ್ಡಪರದೆಗೆ ಬಂದಿರಲಿಲ್ಲ. ನೇರವಾಗಿ ಓಟಿಟಿಗೆ ಬಂದಿತ್ತು.
'ಕಿಂಗ್' ಸಿನಿಮಾ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯಿದೆ. ಒಂದ್ಕಡೆ ಶಾರುಖ್ ಹಾಗೂ ಸುಹಾನಾ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಬ್ಲಾಕ್‌ಬಸ್ಟರ್ ಚಿತ್ರಗಳ ನಿರ್ದೇಶಕ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದೀಪಿಕಾ, ಅಭಿಷೇಕ್ ರೀತಿಯ ಸ್ಟಾರ್ ನಟರು ತಂಡದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ.
ಮತ್ತಷ್ಟು ಕಥೆಗಳನ್ನು ಶಾರುಖ್ ಕೇಳುತ್ತಿದ್ದಾರೆ. ಆದರೆ ಯಾವುದು ಫೈನಲ್ ಆಗಿಲ್ಲ. 'ಜೀರೊ' ಸಿನಿಮಾ ಹೀನಾಯವಾಗಿ ಸೋತಾಗ ಕಿಂಗ್ ಖಾನ್ ಜಮಾನ ಮುಗೀತು ಎಂದೇ ಕೆಲವರು ಮಾತನಾಡಿದ್ದರು. ಆದರೆ ಭರ್ಜರಿ ಕಂಬ್ಯಾಕ್ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ್ದರು. 'ಜವಾನ್' ಚಿತ್ರವನ್ನು ಸ್ವತಃ ನಿರ್ಮಿಸಿ ಗೆದ್ದಿದ್ದರು. ತಮ್ಮದೇ ಬ್ಯಾನರ್ ಅಡಿಯಲ್ಲಿ ಮತ್ತಷ್ಟು ಸಿನಿಮಾಗಳನ್ನು ಅವರು ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











