ಬಾಲಿವುಡ್ ನಟ ಶ್ರೀವಲ್ಲಭ ವ್ಯಾಸ್ (60) ನಿನ್ನೆ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೈಪುರದ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅಮೀರ್ ಖಾನ್ ನಟನೆಯ 'ಲಗಾನ್' ಸಿನಿಮಾದಲ್ಲಿ ವಿಕೇಟ್ ಕೀಪರ್ ಪಾತ್ರ ಮಾಡಿದ್ದ ಶ್ರೀವಲ್ಲಭ ವ್ಯಾಸ್ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಕಲಾವಿದ.
ಶ್ರೀವಲ್ಲಭ ವ್ಯಾಸ್ 1993ರಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದರು. 60 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ನಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡರು. ಇವರ ಅಭಿನಯದಲ್ಲಿ ಬಂದ ಸಿನಿಮಾಗಳಲ್ಲಿ 'ಶೂಲ್', 'ದಿ ಫರ್ಗಾಟನ್', 'ಸರ್ಫರೋಶ್', 'ಅಭಯ್' ಪ್ರಮುಖವಾಗಿವೆ. 2001 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ 'ಲಗಾನ್' ಹಾಗೂ 1985ರಲ್ಲಿ ಬಂದ 'ವಿರಾಸತ್' ಚಿತ್ರಗಳು ಶ್ರೀವಲ್ಲಭ ವ್ಯಾಸ್ ಕೆರಿಯರ್ ನಲ್ಲಿ ದೊಡ್ಡ ಹೆಸರು ತಂದು ಕೊಟ್ಟ ಸಿನಿಮಾಗಳಾಗಿದೆ.
ಸಿನಿಮಾ ಮಾತ್ರವಲ್ಲದೆ ನಾಟಕ ಹಾಗೂ ಕಿರುತೆರೆಯ ಕಾರ್ಯಕ್ರಮಗಳನ್ನು ಸಹ ಶ್ರೀವಲ್ಲಭ ವ್ಯಾಸ್ ಮಾಡಿದ್ದರು. ಆದರೆ 2008 ರಲ್ಲಿ ಪಾರ್ಶ್ವವಾಯು ದಾಳಿ ಆದ ನಂತರ ಅವರು ನಟನೆಯಿಂದ ದೂರವಾಗಿದ್ದರು. ಇನ್ನು ಶ್ರೀವಲ್ಲಭ ವ್ಯಾಸ್ ತಮ್ಮ ಪತ್ನಿ ಶೋಭಾ ವ್ಯಾಸ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಸಾವಿಗೆ ಹಿಂದಿ ಚಿತ್ರರಂಗ ಸಂತಾಪ ಸೂಚಿಸಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.