ವಿಮಾನದಲ್ಲಿ 'ಸೈಫ್' ಪುತ್ರಿ 'ಸಾರಾ ಅಲಿ ಖಾನ್' ಮೇಲೆ 'ಜ್ಯೂಸ್' ಚೆಲ್ಲಿದ 'ಗಗನ ಸಖಿ'..!
ಅಪ್ಪ ಸ್ಟಾರ್ ಆದರೆ ಮಕ್ಕಳು ಸ್ಟಾರ್‌ಗಳಾಗುವುದು.. ಅಪ್ಪ ರಾಜಕಾರಣಿಯಾದರೆ ಮಕ್ಕಳು ರಾಜಕೀಯಕ್ಕೆ ಧುಮುಕುವುದು.. ಕಾಮನ್. ಆದರೆ ಅದರಲ್ಲಿ ಎದ್ದವರೆಷ್ಟು..? ಬಿದ್ದವರೆಷ್ಟು..? ಅನ್ನುವುದು ಬೇರೆ ವಿಚಾರವಾದರೂ ಸದ್ಯಕ್ಕೆ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ವ್ಯಾಪಕವಾಗಿ ಚರ್ಚೆಗೀಡಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸಾಮಾಜಿಕ ಜಾಲತಾಣದ ಕೇಂದ್ರ ಬಿಂದುವಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ವೈರಲ್ ಆದ ಒಂದು ವಿಡಿಯೋ
ಹೌದು, ಅಸಲಿಗೆ.. ಸಾರಾ ಅಲಿ ಖಾನ್ ಗೆ ಮೊದಲಿಂದ ಪ್ರವಾಸದ ಹುಚ್ಚು. ಸ್ವಲ್ಪ ಬಿಡುವು ಸಿಕ್ಕರೂ ಸಾಕು ವಿಮಾನ ನಿಲ್ಧಾಣದಲ್ಲಿ ಸಾರಾ ಪ್ರತ್ಯಕ್ಷವಾಗುತ್ತಾರೆ. ಬೇರೆ ಬೇರೆ ದೇಶಕ್ಕೆ ತೆರಳಿ ಸುತ್ತಾಡುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸಾರಾ ಇತ್ತೀಚೆಗೆ ವಿಮಾನವನ್ನೇರಿದ್ದಾರೆ. ಕಾಶ್ಮೀರಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಅಲ್ಲಿ ತಮ್ಮ ಸ್ನೇಹಿತರ ಜೊತೆ ಮೋಜು ಮಸ್ತಿಯನ್ನೂ ಮಾಡುತ್ತಿದ್ದಾರೆ.

ಆದರೆ..ಪ್ರಯಾಣ ಮಾಡುವ ಸಮಯದಲ್ಲಿ ಗಗನ ಸಖಿಯಿಂದ ಅಚಾತುರ್ಯ ನಡೆದಿದೆ. ಜ್ಯೂಸ್ ಕೊಡುವಾಗ ಕೈ ತಪ್ಪಿ ಸಾರಾ ಅಲಿಖಾನ್ ವರ ಬಟ್ಟೆಯ ಮೇಲೆ ಚೆಲ್ಲಿದೆ. ಆ ನಂತರ ಏನಾಯ್ತು..? ಗೊತ್ತಿಲ್ಲವಾದರೂ ಸದ್ಯಕ್ಕೆ ಸಾರಾ ಎದುರು ಆ ಫ್ಲೈಟ್‌ನ ಎಲ್ಲಾ ಗಗನಸಖಿಯರು ಅವರ ಎದುರು ನಿಂತಂತೆ.. ಆ ಗಗನ ಸಖಿಯರನ್ನು ಕೆಂಗಣ್ಣಿಂದ ಸಾರಾ ನೋಡುತ್ತಾ ಹೋದಂತೆ.. ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಅನೇಕರು ಇದು ಆಕೆಯ ಮುಂಬರುವ ಚಿತ್ರದ ದೃಶ್ಯವಾಗಿರಬಹುದು ಅನ್ನುವ ಅನುಮಾನ ವ್ಯಕ್ತಪಡಿಸಿದ್ಧಾರೆ. ಇನ್ನೂ ಕೆಲವರು..ಜ್ಯೂಸ್ ಚೆಲ್ಲಿದ್ದಕ್ಕೆ ಇಷ್ಟೊಂದು ಹೈಡ್ರಾಮಾ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನುತ್ತಿದ್ದಾರೆ. ಕೆಲವರು ಸಾರಾ ಬಳಿ ಅಷ್ಟೊಂದು ಹಣ ಇದ್ದರೂ ಸಾಮಾನ್ಯರಂತೆ ಸಾಮಾನ್ಯ ದರ್ಜೆಯ ಟಿಕೆಟ್ ಖರೀದಿಸಿ ಸಾರಾ ಪ್ರಯಾಣ ಮಾಡುತ್ತಿದ್ದಾರೆ. ಅವರ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸಾರಾ ಅಲಿ ಖಾನ್ ಅವರನ್ನು ಹಾಡಿ ಹೊಗಳುತ್ತಿದ್ಧಾರೆ.

ಅಂದ್ಹಾಗೇ ಸಾರಾ ಅಲಿ ಖಾನ್ ಅದೃಷ್ಟ ಇತ್ತೀಚೆಗೆ ಕೈ ಕೊಟ್ಟಿದೆ. 2021ರ ನಂತರ ಸಾರಾ ಅಲಿ ಖಾನ್ ಅಭಿನಯಿಸಿದ ಯಾವ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಇನ್ನೂ ಓಟಿಟಿ ವೇದಿಕೆಯಲ್ಲಿ 'ಗ್ಯಾಸ್ ಲೈಟ್', 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ಚಿತ್ರಗಳ ಮೂಲಕ ಸಾರಾ ಅಲಿ ಖಾನ್ ಕಾಣಿಸಿಕೊಂಡರು ಇಲ್ಲಿಯೂ ಕೂಡ ಪ್ರೇಕ್ಷಕರು ಇವರಿಗೆ ಜೈಕಾರ ಹಾಕಲಿಲ್ಲ. ಬದಲಿಗೆ 'ಏ ವತನ್ ಮೇರೆ ವತನ್' ಚಿತ್ರದಲ್ಲಿನ ಅಭಿನಯಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದ್ದರು ಸಾರಾ ಅಲಿ ಖಾನ್.
ಸದ್ಯಕ್ಕೆ ಸಾರಾ ಅಲಿ ಖಾನ್ ಕೈಯಲ್ಲಿ ಸ್ಕೈ ಫೋರ್ಸ್ ಎಂಬ ಸಿನಿಮಾ ಇದೆ. ಈ ಚಿತ್ರದಲ್ಲಿ ಇವರ ಮಾಜಿ ಪ್ರಿಯಕರ ವೀರ್ ಪಹಾರಿಯಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಿಬ್ಬರ ಜೊತೆ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ಕೂಡ ಚಿತ್ರದಲ್ಲಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ಸಾರಾ ಅಲಿ ಖಾನ್ ಅವರ ಈ ಫ್ಲೈಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದ ಸತ್ಯಾಸತ್ಯತೆಯನ್ನು ಖುದ್ದು ಸಾರಾ ಅವರೇ ಹೇಳಬೇಕು


Click it and Unblock the Notifications











