ಹೃದಯಾಘಾತದಿಂದ ಬಾಲಿವುಡ್ ನಟಿ ಶ್ರೀದೇವಿ ನಿಧನ
ಇಂದು ಬೆಳ್ಳಂಬೆಳಗ್ಗೆಯೇ ಶಾಕಿಂಗ್ ಸುದ್ದಿಯೊಂದು ಬರಸಿಡಿಲಿನಂತೆ ಬಡಿದಿದೆ. ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ(54) ಹೃದಯಾಘಾತದಿಂದ ದುಬೈನಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ವರದಿಗಳ ಪ್ರಕಾರ, ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿ ಜೊತೆ ದುಬೈಗೆ ಹಾರಿದ್ದರು. ದುಬೈನಲ್ಲಿ ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ಇದ್ದ ಕಾರಣ ಇಡೀ ಕಪೂರ್ ಫ್ಯಾಮಿಲಿ ಅಲ್ಲಿಗೆ ತೆರಳಿತ್ತು.

ನಿನ್ನೆ ರಾತ್ರಿ (ಫೆಬ್ರವರಿ 24) ಸುಮಾರು 11 ಗಂಟೆ ಸುಮಾರಿಗೆ ಶ್ರೀದೇವಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಶ್ರೀದೇವಿ ತೀವ್ರ ಹೃದಯಾಘಾತಕ್ಕೊಳಗಾದರು. ಈ ವಿಚಾರವನ್ನ ಶ್ರೀದೇವಿ ಸಂಬಂಧಿ ಸಂಜಯ್ ಕಪೂರ್ ಖಚಿತ ಪಡಿಸಿದ್ದಾರೆ.
1963, ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಸಿದ ಶ್ರೀದೇವಿ 4ನೇ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಕಾಲಿವುಡ್, ಮಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿದ್ದ ನಟಿ ಶ್ರೀದೇವಿ ಈಗ ನೆನಪು ಮಾತ್ರ.

300 ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರೀದೇವಿ 1996 ರಲ್ಲಿ ಬೋನಿ ಕಪೂರ್ ಅವರನ್ನ ವಿವಾಹವಾದರು. ಬೋನಿ ಕಪೂರ್ ಗೆ ಶ್ರೀದೇವಿ ಎರಡನೇ ಪತ್ನಿ. ಇವರಿಗೆ ಖುಷಿ ಮತ್ತು ಜಾನ್ಹವಿ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಕನ್ನಡದಲ್ಲಿ 'ಭಕ್ತ ಕುಂಬಾರ', 'ಬಾಲ ಭಾರತ', 'ಸಂಪೂರ್ಣ ರಾಮಾಯಣ', 'ಯಶೋಧ ಕೃಷ್ಣ', 'ಹೆಣ್ಣು ಸಂಸಾರ ಕಣ್ಣು' ಮತ್ತು 'ಪ್ರಿಯಾ' ಚಿತ್ರಗಳಲ್ಲಿ ಶ್ರೀದೇವಿ ಮಿಂಚಿದ್ದರು.
ಬಾರದ ಲೋಕಕ್ಕೆ ಪಯಣ ಬೆಳೆಸಿರುವ 'ಅತಿಲೋಕ ಸುರಸುಂದರಿ' ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಶ್ರೀದೇವಿ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.


Click it and Unblock the Notifications











