Swara Bhaskar: ಮೊದಲ ಮಗುವನ್ನು ಸ್ವಾಗತಿಸಿದ ಸ್ವರಾ ಭಾಸ್ಕರ್-ಫಹಾದ್ ಅಹ್ಮದ್, ಹೆಸರು ಘೋಷಣೆ
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ರಾಜಕಾರಣಿ, ಹೋರಾಟಗಾರ ಪತಿ ಫಹಾದ್ ಅಹ್ಮದ್ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಸ್ವರಾ ಭಾಸ್ಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಗಣ್ಯರು, ಅಭಿಮಾನಿಗಳು ಶುಭ ಸಂದೇಶ ಕಳುಹಿಸುತ್ತಿದ್ದಾರೆ.
ಸ್ವರಾ ಭಾಸ್ಕರ್ ಈ ವರ್ಷದ ಫೆಬ್ರವರಿಯಲ್ಲಿ ಫಹಾದ್ ಅಹ್ಮದ್ ಅವರನ್ನು ರಿಜಿಸ್ಟರ್ ಮ್ಯಾರೆಜ್ ಆಗಿದ್ದರು. ನಂತರ ಅವರ ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದರು. ಜೂನ್‌ನಲ್ಲಿ, ಅವರು ತಮ್ಮ ಗರ್ಭಧಾರಣೆಯ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಹೆಣ್ಣು ಮಗುವನ್ನು ಸ್ವಾಗತಿಸಿದ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್
ಸೆಪ್ಟೆಂಬರ್ 25 ರಂದು ನಟಿ ತನ್ನ ಪತಿ ಫಹಾದ್ ಅಹ್ಮದ್ ಅವರೊಂದಿಗೆ ಮಗಳು ಹುಟ್ಟಿರುವ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಅಧಿಕೃತ ಹೇಳಿಕೆಯಲ್ಲಿ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ಸ್ ಜೊತೆಗೆ ಸಂತೋಷದಾಯಕ ಸುದ್ದಿಯನ್ನು ಹಂಚಿಕೊಂಡ ಸ್ವರಾ ಮತ್ತು ಫಹಾದ್ ತಮ್ಮ ಮಗಳು ತಮ್ಮಗೆ ಅತ್ಯಂತ ಸಂತೋಷ ತಂದಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಹೊಸ ಪೋಸ್ಟ್‌ನಲ್ಲಿ, ಸ್ವರಾ ಭಾಸ್ಕರ್ ಆಸ್ಪತ್ರೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ ತನ್ನ ಎಳೆಯ ಕಂದಮ್ಮನ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಸ್ವರಾ, ಸೆಪ್ಟೆಂಬರ್ 23 ರಂದು ಮಗು ಜನಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

ನಟಿ ಸ್ವರಾ ಭಾಸ್ಕರ್ ಫೋಟೋಗಳಿಗೆ "ಕೇಳಿದ ಪ್ರಾರ್ಥನೆ ಫಲಿಸಿತು, ಹಾಡು ಪಿಸುಗುಟ್ಟಿತು, ಇದೇ ನಿಜ ಸತ್ಯ.. ನಮ್ಮ ಹೆಣ್ಣು ಮಗು ರಾಬಿಯಾ ಸೆಪ್ಟೆಂಬರ್ 23, 2023 ರಂದು ಸಂತೋಷ ತುಂಬುಕೊಂಡು ಜನಿಸಿದ್ದಾಳೆ. ನಿಮ್ಮ ಪ್ರೀತಿಗೆ ಧನ್ಯವಾದಗಳು! ಇದು ಸಂಪೂರ್ಣ ಹೊಸ ಜಗತ್ತು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹೊಸಪೋಷಕರು, ಸ್ವರಾಭಾಸ್ಕರ್, ಫಹಾದ್ ಅಹ್ಮದ್ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.
ಮಗಳಿಗೆ ರಾಬಿಯಾ ಎಂದು ಹೆಸರಿಟ್ಟ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್
ದಂಪತಿಯ ಅಧಿಕೃತ ಹೇಳಿಕೆಯಲ್ಲಿ, "ಸ್ವರಾ ಮತ್ತು ಫಹಾದ್ 23 ಸೆಪ್ಟೆಂಬರ್ 2023 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಹೆಣ್ಣು ಮಗು. ಅವಳು ಅತ್ಯಂತ ಮುದ್ದಾದ, ಅತ್ಯಂತ ಅಮೂಲ್ಯವಾದ ಉಡುಗೊರೆ ಮತ್ತು ಅವಳಿಂದ ನಮ್ಮ ಕಣ್ಣುಗಳನ್ನು ತೆಗೆಯಲು ಸಾಧ್ಯವಿಲ್ಲ. ಜೋಡಿ ತಮ್ಮ ಮಗಳಿಗೆ ಸೂಫಿ ಅತೀಂದ್ರಿಯ ರಾಬಿಯಾ ಬಸ್ರಿ ಅವರ ಹೆಸರಿಂದ ರಾಬಿಯಾ ಎಂದು ಹೆಸರಿಸಿದ್ದಾರೆ. ಈ ಹೆಸರಿನ ಅರ್ಥವೂ ಸಹ ವಸಂತ ಅಥವಾ ರಾಣಿ ಎಂದು ಬರುತ್ತದೆ" ಎಂದು ಹೇಳಿದೆ.
ಶೀಘ್ರದಲ್ಲೇ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ ಸ್ವರಾ ಮತ್ತು ಫಹಾದ್ ಅವರನ್ನು ಅಭಿನಂದಿಸಿದ್ದಾರೆ. ನೀನಾ ಗುಪ್ತಾ ಅಭಿನಂದನೆಗಳು ಎಂದು ಹೇಳಿದ್ದಾರೆ. "ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಗುನ್ನೆಟ್ ಮೊಂಗಾ ಕಾಮೆಂಟ್ ಮಾಡಿದ್ದಾರೆ. ಗಣ್ಯರಾದ ತಿಲೋತ್ತಮಾ ಶೋಮ್, ಟಿಸ್ಕಾ ಚೋಪ್ರಾ ಮತ್ತು ಮೊಹಮ್ಮದ್ ಜೀಶನ್ ಅಯ್ಯೂಬ್ ಕೂಡ ಜೋಡಿಗೆ ಮತ್ತು ಕಂದಮ್ಮನಿಗೆ ಆಶೀರ್ವಾದ ಮಾಡಿದ್ದಾರೆ.
2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ವಿರುದ್ಧ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಭೇಟಿಯಾಗಿದ್ದರು. ಸ್ನೇಹಿತರಾಗಿದ್ದ ಅವರು ಬಳಿಕ ಪ್ರೀತಿಯಲ್ಲಿ ಬಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.


Click it and Unblock the Notifications











