Box Office 2025 Half Yearly Report ; ಈ 6 ತಿಂಗಳಿನಲ್ಲಿ ಬಾಲಿವುಡ್‌ನಲ್ಲಿ ಗೆದ್ದ ಚಿತ್ರಗಳೆಷ್ಟು?
ಹಿಂದೆ ಎಲ್ಲ ಬಾಲಿವುಡ್ ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ಆ ನಂತರ ಲೆಕ್ಕ ತಪ್ಪಿತು. ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್ ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು. ಕಳೆದ ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ.
ಇಂಥಾ ಬಾಲಿವುಡ್ ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಗೆಲುವಿನ ಲಯಕ್ಕೆ ಮರಳಿತಾ ? ಈ ಆರು ತಿಂಗಳಿನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಗೆದ್ದ ಚಿತ್ರಗಳು ಯಾವುವು ? ಯಾರು ಗೆದ್ದರು? ಯಾರು ಸೋತರು ? ಎಂದು ತಿಳಿಯಲು ಮುಂದೆ ಓದಿ.

ಮೊದಲ ಮೂರು ತಿಂಗಳಲ್ಲಿ ಅಬ್ಬರಿಸಿದ್ದು ಯಾವ ಚಿತ್ರ
ಈ ಬಾರಿ ಮೊದಲೆರಡು ಓವರ್ ನಂತರ ಜವಾಬ್ದಾರಿಯನ್ನು ಕಂಗನಾ ರಣಾವತ್ ಗೆ ವಹಿಸಲಾಗಿತ್ತು. ವರ್ಷದ ಆರಂಭದಲ್ಲಿ ಕಂಗನಾ ಅಭಿನಯಿಸಿ ನಿರ್ದೇಶಿಸಿದ ಎಮರ್ಜೆನ್ಸಿ ಚಿತ್ರ ತೆರೆಗೆ ಬಂದಿತ್ತು. ಹಲವು ಅಡೆತಡೆಗಳನ್ನು ದಾಟಿಕೊಂಡು ಬಂದ ಈ ಚಿತ್ರ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಚಿತ್ರ ನೋಡಲು ಬಂದ ಪ್ರೇಕ್ಷಕರು ಎಮರ್ಜೆನ್ಸಿ ಎಕ್ಸಿಟ್ ಸಹಾಯದಿಂದ ಚಿತ್ರಮಂದಿರದಿಂದ ಹೊರ ಬಂದರು.
ಸೋನು ಸೂದ್ ನಿರ್ದೇಶನದ ಚೊಚ್ಚಲ ಚಿತ್ರ ಫತೇಹ್, ಹಿಮೇಶ್ ರೇಶ್ಮಿಯಾ ಅಭಿನಯದ ಬ್ಯಾಡ್ ಆಸ್ ರವಿಕುಮಾರ್, ಪ್ರತೀಕ್ ಗಾಂಧಿ ಅಭಿನಯದ ಧೂಮ್ ಧಾಮ್ ಹೀಗೆ ಅನೇಕ ಸಿನಿಮಾಗಳು ಬಂದವು. ಆದರೆ ಸದ್ದು ಮಾತ್ರ ಖಾಲಿ ಡಬ್ಬದಂತೆ ಇತ್ತು ಅಷ್ಟೇ.
ಅಬ್ಬರಿಸಿ ಬೊಬ್ಬಿರಿದ ಛಾವಾ
ಫೆಬ್ರವರಿ 14ರಂದು ತೆರೆಗೆ ಬಂದ ವಿಕ್ಕಿ ಕೌಶಲ್ ಅಭಿನಯದ ಛಾವಾ, ಬಾಕ್ಸಾಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. ಸ್ಯಾಕ್ನಿಲ್ ಮತ್ತು ಇನ್ನಿತರೆ ವೆಬ್ ಸೈಟ್ ಗಳ ಪ್ರಕಾರ ಈ ಚಿತ್ರದ ಗಳಿಕೆ 600 ಕೋಟಿಯ ಮೇಲಾಗಿದೆ. ಇನ್ನೂ ಛಾವಾ ಚಿತ್ರದ ಈ ಗಳಿಕೆ ಬಾಲಿವುಡ್ ಗೆ ಹೊಸ ಹುರುಪು ನೀಡಿತ್ತು.
ಆದರೆ ಪ್ರಯೋಜನವೇನು ಆಗಲಿಲ್ಲ. ಛಾವಾ ಹೊರತು ಪಡಿಸಿದೃ ಅಕ್ಷಯ್ ಕುಮಾರ್ ಅಭಿನಯದ ಸ್ಕೈಫೋರ್ಸ್ ತಕ್ಕ ಮಟ್ಟಿಗೆ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿತು. ಕ್ರೇಜಿ ಎಕ್ಸ್ ವಿಮರ್ಷಕರ ಹೃದಯ ಗೆದ್ದಿತಾದ್ರೂ ಬಾಕ್ಸಾಫೀಸ್‌ನಲ್ಲಿ ಕಾಸು ಬರಲಿಲ್ಲ.

ಏಪ್ರಿಲ್ To ಜೂನ್
ಮೂರು ತಿಂಗಳಿನಲ್ಲಿ ಕೇವಲ ಎರಡು ಚಿತ್ರಗಳಿಂದ ಹಣ ಗಳಿಸಿದ ಬಾಲಿವುಡ್ ಏಪ್ರಿಲ್ ಮೇಲೆ ನಿರೀಕ್ಷೆ ಹೊಂದಿತ್ತು. ನಿಜಾ. ಐಪಿಎಲ್ ಶುರುವಾಗಿತ್ತು. ಮತ್ತೊಂದು ಕಡೆ ಮಕ್ಕಳ ಪರೀಕ್ಷೆ ಕೂಡ ನಡೆದಿತ್ತು. ಆದರೂ ಕೂಡ ಬಾಲಿವುಡ್‌ನವರಿಗೆ ಅವರ ಚಿತ್ರಗಳ ಮೇಲೆ ನಂಬಿಕೆ ಇತ್ತು. ಹೀಗಾಗಿಯೇ ಏಪ್ರಿಲ್ ಮತ್ತು ಜೂನ್ ನಡುವೆ ನಿರೀಕ್ಷೆ ಮೂಡಿಸಿದ್ದ 13 ಚಿತ್ರಗಳು ಬಿಡುಗಡೆಯಾದವು.
ಆದರೆ ಈ 13ರಲ್ಲಿ ರೇಡ್ 2 ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಸಿಕ್ತು. ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಅಜಯ್ ದೇವಗನ್ ಅಭಿನಯದ ರೇಡ್ 2 ಚಿತ್ರ ಭಾರತದಲ್ಲಿ ₹ 172.23 ಕೋಟಿ ಹಣ ಗಳಿಸಿತು. ಈ ಚಿತ್ರ ಹೊರತು ಪಡಿಸಿದರೆ ಸನ್ನಿ ಡಿಯೋಲ್ ಅಭಿನಯದ ಜಾಟ್ 2 ಚಿತ್ರ ನಿರೀಕ್ಷೆಗೂ ಮೀರಿ ಹಣ ಕೊಳ್ಳೆ ಹೊಡೆಯಿತು. ಸನ್ನಿ ಡಿಯೋಲ್ ಅಭಿನಯದ ಜಾಟ್ ಮೇಲೆ ಯಾರೆಂದರೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಆದರೂ ಕೂಡ ಚಿತ್ರ ₹ 88.26 ಕೋಟಿ ಹಣ ಕೊಳ್ಳೆ ಹೊಡೆಯಿತು. ಸನ್ನಿ ಡಿಯೋಲ್ ಇಮೇಜ್‌ನ ಇಲ್ಲಿ ಪರಿಗಣಿಸಿದರೆ ಈ ಮೊತ್ತ ತುಂಬಾನೇ ದೊಡ್ಡದು.
ಸದ್ಯ ಬಾಲಿವುಡ್‌ನಲ್ಲಿ ಹೌಸ್‌ಫುಲ್ 2 ಯುಗ ಶುರುವಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕರೂ ಕೂಡ ಈ ಚಿತ್ರವನ್ನು ಜನ ನೋಡುತ್ತಿದ್ದಾರೆ. ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿರುವಂತೆ ಈ ಚಿತ್ರ ಈ 09 ದಿನಗಳಲ್ಲಿ ಇಲ್ಲಿಯವರೆಗೆ ₹ 139.92 ಕೋಟಿ ಹಣವನ್ನು ಗಳಿಸಿದೆ.
ನಿರಾಸೆ ಮಾಡಿದ ಚಿತ್ರಗಳು
ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2, ಸಲ್ಮಾನ್ ಖಾನ್ ಅಭಿನಯದ ಸಿಕಂದರ್, ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೋಮ್ಯಾಟ್, ಶಾಹಿದ್ ಕಪೂರ್ ಅಭಿನಯದ ದೇವಾ, ರಾಜ್‌ಕುಮಾರ್ ರಾವ್ ಅಭಿನಯದ ಭೂಲ್ ಚುಕ್ ಮಾಫ್ ಚಿತ್ರಗಳು ಈ ವರ್ಷ ಬಾಲಿವುಡ್ ಪಂಡಿತರಿಗೆ ನಿರಾಸೆಯನ್ನು ಮಾಡಿವೆ. ಈ ಎಲ್ಲ ಚಿತ್ರಗಳು ಗೆಲ್ಲುತ್ತವೆ ಎಂದು ಅನೇಕರು ಬಾಜಿ ಕಟ್ಟಿದ್ದರು. ಆದರೆ ಕೊನೆಗೆ ಸಿಕ್ಕಿದ್ದು ಮಾತ್ರ ಸೋಲು ಮಾತ್ರ.
ಹೀಗೆ ಈ ವರ್ಷ ಬಾಲಿವುಡ್‌ನಲ್ಲಿ ಬಂದ ಹಲವು ಚಿತ್ರಗಳಲ್ಲಿ ಕೇವಲ ಬೆರಳಣಿಕೆಯ ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇನ್ನು ಛಾವಾ ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಈ ಆರು ತಿಂಗಳಿನಲ್ಲಿ 500 ಕೋಟಿಯ ಗಡಿಯನ್ನು ದಾಟಿಲ್ಲ. ಈ ವರ್ಷದ ಅಂತ್ಯದೊಳಗೆ ಇನ್ನು ಹಲವು ಸ್ಟಾರ್‌ಗಳ ಸಿನಿಮಾ ತೆರೆಗೆ ಬರಬೇಕಿವೆ. ಆ ಪೈಕಿ ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಕೂಡ ಒಂದು. ವಿಕ್ಕಿ ಕೌಶಲ್ ದಾಖಲೆಯನ್ನು ಈ ವರ್ಷ ಯಾರಾದರೂ ಮುರಿಯುತ್ತಾರಾ, ಬಾಲಿವುಡ್ ಈ ವರ್ಷ ಎಷ್ಟು ಕೋಟಿ ಕೊಳ್ಳೆ ಹೊಡೆಯುತ್ತೆ ಎನ್ನುವುದಕ್ಕೆ ಉತ್ತರ ಇನ್ನು 6 ತಿಂಗಳಿನಲ್ಲಿ ಸಿಗಲಿದೆ.


Click it and Unblock the Notifications











