ಸುಶಾಂತ್ ಸಿಂಗ್ ಕೇಸ್: 33 ಮಂದಿ ವಿರುದ್ಧ 30 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕೇಸ್‌ನಲ್ಲಿ ಬಿಟೌನ್‌ನ ಘಟಾನುಘಟಿಗಳನ್ನು ವಿಚಾರಣೆ ನಡೆಸಲಾಗಿತ್ತು. ಇದೀಗ, ನಾಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು 30 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಮಾಹಿತಿ ನೀಡಿದ್ದು, ನ್ಯಾಯಾಲಯಕ್ಕೆ ಸುಮಾರು 33 ಮಂದಿ ವಿರುದ್ಧ 30 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿದ್ದ ನಟಿ ರಿಯಾ ಚಕ್ರವರ್ತಿ ಹೆಸರು ಸಹ ಎನ್‌ಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿದೆ.

ರಿಯಾ ಸೇರಿ ಇನ್ನು 32 ಜನರು ಹೆಸರು ಚಾರ್ಜ್‌ಶೀಟ್‌ನಲ್ಲಿದೆ ಎಂದು ತಿಳಿದಿದೆ. ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ವೇಳೆ ಹಲವಾರು ಡ್ರಗ್ ಪೆಡ್ಲರ್‌ಗಳನ್ನು ಮತ್ತು ಆರೋಪಿಗಳನ್ನು ಬಂಧಿಸಿಲಾಗಿತ್ತು. ಅವರ ಹೆಸರುಗಳು ಸಹ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.
ಅಂದ್ಹಾಗೆ, ಕಳೆದ ವರ್ಷ ಜೂನ್ ತಿಂಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಆತ್ಮಹತ್ಯೆಯ ಬಗ್ಗೆ ಅನುಮಾನಗಳು ಹೆಚ್ಚಾದ ಹಿನ್ನೆಲೆ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗಿತ್ತು. ಮತ್ತೊಂದೆಡೆ ಸಾವಿನ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮುಂದುವರಿಸಿದ್ದಾರೆ.
ಸುಶಾಂತ್ ಸಾವಿನ ತನಿಖೆ ವೇಳೆ ಡ್ರಗ್ಸ್ ಆಯಾಮವೂ ಬಯಲಾದ ಹಿನ್ನೆಲೆ ಇಂಡಸ್ಟ್ರಿಯ ಖ್ಯಾತ ಸೆಲೆಬ್ರಿಟಿಗಳ ಹೆಸರು ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿತ್ತು. ಹಲವರ ತನಿಖೆ ಸಹ ಮಾಡಲಾಗಿತ್ತು.
ರಿಯಾ, ಶೋಯಿಕ್, ದೀಪೇಶ್ ಮತ್ತು ಮಿರಾಂಡಾ ವಿರುದ್ಧ ಡ್ರಗ್ಸ್ ಪೂರೈಕೆ ಮತ್ತು ಮಾದಕವಸ್ತು ಕಳ್ಳಸಾಗಾಣಿಕೆದಾರರಿಗೆ ಆಶ್ರಯ ನೀಡಲಾಗಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ನಂತರ ರಿಯಾ, ಶೋಯಿಕ್, ದೀಪೇಶ್, ಮಿರಾಂಡಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


Click it and Unblock the Notifications










