ನನ್ನ ಮಾತೃಭಾಷೆ ಹಿಂದಿ, ಆದ್ರೆ ಬಾಲಿವುಡ್‌ನಲ್ಲಿ ಸೌತ್‌ನಷ್ಟು ಶಿಸ್ತಿಲ್ಲ; ಬಾಲಿವುಡ್‌ನ 3 ಕೊರತೆಗಳನ್ನು ಬಿಚ್ಚಿಟ್ಟ ಕಾಜಲ್!
ನಟಿ ಕಾಜಲ್ ಅಗರ್ವಾಲ್ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳಲ್ಲಿಯೂ ನಟಿಸಿರುವ ನಟಿ. ಆದರೆ ಹಿಂದಿ ಚಿತ್ರರಂಗಕ್ಕಿಂತ ಕಾಜಲ್ ಅಗರ್ವಾಲ್‌ಗೆ ಹೆಚ್ಚು ಹೆಸರು ಹಾಗೂ ಖ್ಯಾತಿಯನ್ನು ತಂದುಕೊಟ್ಟದ್ದು ಸೌತ್‌ನ ತೆಲುಗು ಹಾಗೂ ತಮಿಳು ಚಿತ್ರರಂಗಗಳು. ಹೌದು, 2004ರಲ್ಲಿ ಬಿಡುಗಡೆಗೊಂಡಿದ್ದ 'ಕ್ಯೂನ್ ಹೋ ಗಯಾ ನಾ' ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ ಕಾಜಲ್ ಅಗರ್ವಾಲ್ ಬಳಿಕ 2007ರಲ್ಲಿ ತೆರೆಗೆ ಬಂದ ಲಕ್ಷ್ಮಿ ಕಲ್ಯಾಣಂ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು ಹಾಗೂ ಸೌತ್ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.
ಬಳಿಕ ಬ್ಯಾಕ್ ಟು ಬ್ಯಾಕ್ ತೆಲುಗು ಚಿತ್ರಗಳಲ್ಲಿ ನಟಿಸಿದ ಕಾಜಲ್ ಅಗರ್ವಾಲ್ ಪಳನಿ ಎಂಬ ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗಕ್ಕೂ ಸಹ ಕಾಲಿಟ್ಟರು. ನಂತರ 2009ರಲ್ಲಿ ತೆರೆಗೆ ಬಂದ ಮಗಧೀರ ಚಿತ್ರದಲ್ಲಿ ನಟಿಸುವ ಮೂಲಕ ನಟಿ ಕಾಜಲ್ ಅಗರ್ವಾಲ್ ಸ್ಟಾರ್ ನಟಿಯಾದರು. ಈ ಚಿತ್ರದ ಬಳಿಕ ಕಾಜಲ್ ಅಗರ್ವಾಲ್‌ಗೆ ಸೌತ್ ಮಾತ್ರವಲ್ಲಲದೇ ಉತ್ತರ ಭಾರತದಲ್ಲಿಯೂ ಬಹು ಬೇಡಿಕೆ ಹುಟ್ಟುಕೊಂಡಿತು. ಆದರೆ ಸಾಲು ಸಾಲು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ ಕಾಜಲ್ ಅಗರ್ವಾಲ್ 2013ರಲ್ಲಿ ಸ್ಪೆಷಲ್ 26, 2016ರಲ್ಲಿ 'ದೋ ಲಫ್ಜೋನ್ ಕಿ ಕಹಾನಿ', ಫೈನಲ್ ಕಟ್ ಆಫ್ ಡೈರೆಕ್ಟರ್, 2021ರಲ್ಲಿ ಮುಂಬೈ ಸಾಗಾ ಎಂಬ ಹಿಂದಿ ಚಿತ್ರಗಳಲ್ಲಿ ನಟಿಸಿದರು.

ಸದ್ಯ ಉಮಾ ಎಂಬ ಹಿಂದಿ ಚಿತ್ರದಲ್ಲಿಯೂ ನಟಿಸುತ್ತಿರುವ ನಟಿ ಕಾಜಲ್ ಅಗರ್ವಾಲ್ ನ್ಯೂಸ್ 18 ರೈಸಿಂಗ್ ಇಂಡಿಯಾ ಸಮ್ಮಿಟ್ 2023 ಚರ್ಚೆಯಲ್ಲಿ ಭಾಗವಹಿಸಿ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. " ಹಿಂದಿ ದೇಶದ ದೊಡ್ಡ ಭಾಷೆಯಾದ ಕಾರಣ ಹಲವಾರು ಕಲಾವಿದರು ಬಾಲಿವುಡ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಬೇಕು ಎಂದು ಆಶಿಸುತ್ತಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗಗಳು ಸ್ನೇಹದಾಯಕವಾಗಿದ್ದು, ಕಲಾವಿದರನ್ನು ಅಲ್ಲಿಯ ಜನ ಒಪ್ಪಿಕೊಳ್ತಾರೆ. ದಕ್ಷಿಣದಲ್ಲಿ ಹಲವಾರು ಪ್ರತಿಭಾವಂತ ತಂತ್ರಜ್ಞರಿದ್ದು, ಅದ್ಭುತವಾದ ನಿರ್ದೇಶಕರಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಈ ನಾಲ್ಕೂ ಭಾಷೆಗಳಲ್ಲಿಯೂ ಕಂಟೆಂಟ್ ಹೆಚ್ಚಿದೆ" ಎಂದರು.
ಇನ್ನೂ ಮುಂದುವರಿದು ಮಾತನಾಡಿದ ಕಾಜಲ್ ಅಗರ್ವಾಲ್ "ಹಿಂದಿ ನನ್ನ ಮಾತೃಭಾಷೆ ಹೌದು. ನಾನು ಹಿಂದಿ ಚಿತ್ರಗಳನ್ನು ಬೆಳೆದಿದ್ದೇನೆ. ಹಿಂದಿ ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ ಸಹ. ಆದರೆ ನಾನು ಉತ್ತಮ ವಾತಾರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತಿನ ವಿಷಯಕ್ಕೆ ಬಂದರೆ ದಕ್ಷಿಣ ಚಿತ್ರರಂಗದಲ್ಲಿ ಇವು ಹೆಚ್ಚಿವೆ. ಈ ಅಂಶಗಳ ಕೊರತೆ ಬಾಲಿವುಡ್‌ನಲ್ಲಿ ಇದೆ ಎಂಬುದು ನನ್ನ ಅನಿಸಿಕೆ" ಎಂದು ಕಾಮೆಂಟ್ ಮಾಡಿದ್ದಾರೆ.

ಈ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತು ಇಲ್ಲ ಎಂದಿರುವ ಕಾಜಲ್ ಅಗರ್ವಾಲ್ ಬಾಲಿವುಡ್‌ನ ಕೊರತೆಗಳಿವು ಎಂಬುದನ್ನು ಸೌತ್ ಜತೆ ಹೋಲಿಸಿ ತಿಳಿಸಿದ್ದಾರೆ. ಸದ್ಯ ಕಾಜಲ್ ಅಗರ್ವಾಲ್ ಅವರ ಈ ಬೋಲ್ಡ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಹೌದು, ಬಾಲಿವುಡ್‌ನಲ್ಲಿ ಶಿಸ್ತಿಲ್ಲ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ವಯಸ್ಸಾಗಿದೆ, ಆಫರ್ ಸಿಗಲ್ಲ ಎಂಬುದು ಗೊತ್ತಿದೆ, ಹೀಗಾಗಿ ಈ ತರಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ, ಇದೇ ಹೇಳಿಕೆಗಳನ್ನು ಬೇಡಿಕೆ ಇದ್ದಾಗ ಹೇಳುವ ಧೈರ್ಯ ಇರಲಿಲ್ವಾ ಎಂದು ಕಾಲನ್ನು ಎಳೆದಿದ್ದಾರೆ.


Click it and Unblock the Notifications











