ಬಿಡುಗಡೆಗೆ ಸಿದ್ಧ ಕರ್ನಾಟಕದ ಸಾಧಕಿ ಬಗ್ಗೆ ಬಾಲಿವುಡ್ ಸಿನಿಮಾ
ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಹಲವಾರು ವಿಷಯಗಳಲ್ಲಿ ಕನ್ನಡದ ಸಿನಿಮಾ ಮಂದಿಗೆ ಅನ್ವಯವಾಗುತ್ತದೆ. ಕತೆಗಾಗಿ ಪರಭಾಷೆ ಸಿನಿಮಾಗಳೆಡೆಗೆ ನೋಡುವ ಅವರು ಸ್ಥಳೀಯ ಸಾಧಕರನ್ನು ಮರೆತುಬಿಟ್ಟಿರುತ್ತಾರೆ.
ಕನ್ನಡದ ಕೆಲವು ಸಾಧಕರ ಬಗ್ಗೆ ಪರಭಾಷೆಯವರು ಈಗಾಗಲೇ ಸಿನಿಮಾ ಮಾಡಿದ್ದಾರೆ. ಪ್ರಸ್ತುತ ಮಾಡುತ್ತಲೇ ಇದ್ದಾರೆ. ಆದರೆ ಕನ್ನಡದ ಸಿನಿಮಾ ಮಂದಿಗೆ ಕರ್ನಾಟಕದ ಸಾಧಕರ ಸಾಧನೆ ಮಹತ್ತಾಗಿ ಕಾಣುವುದಿಲ್ಲ.
ನಮ್ಮವರು ಮರೆತಿರುವ ಕರ್ನಾಟಕದ ಸಾಧಕಿ ಮಾನವ ಕಂಪ್ಯೂಟರ್ ಎಂದು ಹೆಸರು ಮಾಡಿದ್ದ ಶಕುಂತಲಾ ದೇವಿ ಬಗ್ಗೆ ಬಾಲಿವುಡ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನೇನು ಸಿನಿಮಾ ಬಿಡುಗಡೆಗೂ ತಯಾರಾಗಿದೆ.

ಮಾನವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿ
ಹೌದು, ಮಾನವ ಕಂಪ್ಯೂಟರ್ ಎಂದೇ ಹೆಸರು ಗಳಿಸಿದ್ದ, ಖ್ಯಾತ ಗಣಿತಜ್ಞೆ ಶಕುಂತಲಾ ದೇವಿ ಬಗ್ಗೆ ಬಾಲಿವುಡ್‌ನಲ್ಲಿ 'ಶಕುಂತಲಾ ದೇವಿ' ಹೆಸರಿನಲ್ಲಿಯೇ ಸಿನಿಮಾ ನಿರ್ಮಾಣವಾಗಿದೆ. ಲಾಕ್‌ಡೌನ್ ಇಲ್ಲದಿದ್ದಲ್ಲಿ ಈ ವೇಳೆಗೆ ಸಿನಿಮಾ ಬಿಡುಗಡೆ ಆಗಿರುತ್ತಿತ್ತು.

ಶಕುಂತಲಾ ದೇವಿಯಾಗಿ ವಿದ್ಯಾ ಬಾಲನ್
ಶಕುಂತಲಾ ದೇವಿ ಸಿನಿಮಾದ ಮುಖ್ಯ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿದ್ದಾರೆ. ಚಿತ್ರವನ್ನು ಅನು ಮೆನನ್ ನಿರ್ದೇಶಿಸಿದ್ದು, ವಿಕ್ರಂ ಮಲ್ಹೋತ್ರಾ ನಿರ್ಮಾಣ ಮಾಡಿದ್ದಾರೆ. ಶಕುಂತಲಾ ದೇವಿ ಪತಿ ಪಾತ್ರದಲ್ಲಿ ಜಿಶು ಸೇನ್‌ಗುಪ್ತಾ ನಟಿಸಿದ್ದಾರೆ.

ಹಲವು ದಾಖಲೆಗಳು ಶಕುಂತಲಾ ದೇವಿ ಹೆಸರಲ್ಲಿವೆ
ಶಕುಂತಲಾ ದೇವಿ 1929 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿವಿಯಲ್ಲಿ ಕಲಿತ ಅವರಿಗೆ ಗಣಿತದ ಮೇಲೆ ಅದ್ಭೂತವಾದ ಹಿಡಿತವಿತ್ತು. ಸಣ್ಣ ವಯಸ್ಸಿನಲ್ಲಿಯೇ ಅವರು ಗಣಿತದ ಕ್ಲಿಷ್ಟ ಲೆಕ್ಕಗಳನ್ನು ಲೀಲಾಜಾಲವಾಗಿ ಬಿಡಿಸುತ್ತಿದ್ದರು. ಅವರ ಹೆಸರಿನಲ್ಲಿ ವರ್ಲ್ ರೆಕಾರ್ಡ್ ಸಹ ಇದೆ. ಹಾಳೆ ಕ್ಯಾಲ್ಯುಕ್ಯುಲೇಟರ್ ಸಹಾಯವಿಲ್ಲದೆ ಮನಸ್ಸಿನಲ್ಲಿಯೇ 13-13 ಅಂಕೆಗಳ ಸಂಖ್ಯೆಯ ಗುಣಾಕಾರದ ಫಲಿತಾಂಶ ಹೇಳುತ್ತಿದ್ದರು.

ಅಮೆಜಾನ್ ಪ್ರೈಂ ನಲ್ಲಿ ಶೀಘ್ರ ಬಿಡುಗಡೆ
ಶಕುಂತಲಾ ದೇವಿ ಸಿನಿಮಾ ಈಗಾಗಲೇ ಬಿಡುಗಡೆಗೆ ತಯಾರಾಗಿದ್ದು, ಅಮೆಜಾನ್ ಪ್ರೈಂ ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕರು ಹೇಳಿದ್ದಾರೆ. ವಿದ್ಯಾ ಬಾಲನ್ ಸ್ವತಃ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಘೋಷಿಸಿದ್ದಾರೆ.


Click it and Unblock the Notifications











