ತಮ್ಮ ಸ್ಟಾರ್‌ಗಳಿಗೆ ಮೂಗುದಾರ ಹಾಕಲು ಮುಂದಾದ ಬಾಲಿವುಡ್ ನಿರ್ಮಾಪಕರು..!
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.

ಹಾಗಂಥ ಸಿನಿಮಾ ನಿರ್ಮಾಣ ಮಾಡದೇ ಮನೆಯಲ್ಲಿ ಕುಳಿತುಕೊಳ್ಳಲು ಕೂಡ ಆಗುವುದಿಲ್ಲ. ಯಾಕೆಂದರೆ .. ಸಿನಿಮಾ ನಿರ್ಮಾಣವೆಂದರೇನೇ ಅದೊಂದು ಉದ್ಯಮ. ಬರೀಯ ಲಾಭದ ದೃಷ್ಟಿಯಿಂದ, ಕೇವಲ ಬ್ಯುಸಿನೆಸ್‌ನ ಭಾಗವಾಗಿಯಷ್ಟೇ ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆಯೇ ಸಾಕಷ್ಟಿದೆ. ಹೀಗಾಗಿ ಕಷ್ಟಾನೋ-ಸುಖಾನೋ ಸ್ಟಾರ್‌ಗಳು ಮುಂದಿಡುವ ಬೇಡಿಕೆಯನ್ನೆಲ್ಲ ಪೂರೈಸಿ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದಾಗುತ್ತಾರೆ.
ಆದರೆ, ಇನ್ನೇನು ಸಿನಿಮಾ ಶುರು ಮಾಡಬೇಕು ಅನ್ನುವಷ್ಟರಲ್ಲಿ ಆಯಾ ಚಿತ್ರದ ನಾಯಕ-ನಾಯಕಿಯರು ಮತ್ತೊಮ್ಮೆ ಅಪಸ್ವರ ತೆಗೆಯುತ್ತಾರೆ. ತಮ್ಮ ಜೊತೆಗೆ ಒಂದು ಅರ್ಧ ಡಜನ್ ಅಸಿಸ್ಟೆಂಟುಗಳು, ಜೊತೆಗೊಬ್ಬ ಮ್ಯಾನೇಜರು.ತಮ್ಮನ್ನೂ ಸೇರಿಸಿ ತಮ್ಮ ಜೊತೆ ಬರುವವರಿಗೆಲ್ಲ ಸ್ಟಾರ್ ಹೊಟೇಲಿನಲ್ಲಿ ಸೂಟ್ ರೂಮು, ಬಂದು ಹೋಗಲು ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್, ವ್ಯವಸ್ಥೆ ಮಾಡುವಂತೆ ಫರ್ಮಾನು ಹೊರಡಿಸುತ್ತಾರೆ. ಸದ್ಯಕ್ಕೆ ಈ ವಿಚಾರಕ್ಕೆ ಬಾಲಿವುಡ್‌ನ ಅನೇಕ ನಿರ್ಮಾಪಕರು ಕೆರಳಿ ಕೆಂಡವಾಗಿದ್ದಾರೆ. ಸಭೆ ಮಾಡಿದ್ದಾರೆ

ಹೌದು, ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಕೆಲ ದಿನದ ಹಿಂದೆ, ಹಿಂದಿ ನಿರ್ಮಾಪಕರ ಗಿಲ್ಡ್, ತೆಲುಗು ಹಾಗೂ ತಮಿಳು ನಿರ್ಮಾಪಕರ ಗಿಲ್ಡ್ ಜೊತೆಗೆ ಬಾಲಿವುಡ್‌ನ ಕೆಲವು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳು ಸೇರಿ ಕೆಲವು ದಿನಗಳ ಹಿಂದಷ್ಟೆ ಸಭೆ ನಡೆಸಿವೆ. ಅನವಶ್ಯಕ ಖರ್ಚು-ವೆಚ್ಚಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯನ್ನ ಮಾಡಿವೆ.
ಸಿನಿಮಾ ನಿರ್ಮಾಣದ ವೆಚ್ಚ ಏರಿಕೆ ಆಗುತ್ತಿರುವ ಜೊತೆ ನಟ-ನಟಿಯರು ತಮ್ಮೊಟ್ಟಿಗೆ ಕರೆತರುವ ಸಿಬ್ಬಂದಿ ವರ್ಗದ ಖರ್ಚುಗಳು, ಅವರೆಲ್ಲರ ಆಹಾರ ಸೇರಿದಂತೆ ಇತರೆ ವಿಷಯಗಳಿಗೆ ಇಡುವ ಬೇಡಿಕೆಗಳಿಂದ ಆಗುತ್ತಿರುವ ಖರ್ಚು ಇದರಿಂದ ಹೆಚ್ಚಾಗುತ್ತಿರುವ ನಿರ್ಮಾಣ ವೆಚ್ಚದ ಬಗ್ಗೆ ಗಂಭೀರ ಚರ್ಚೆಯನ್ನ ಮಾಡಿರುವ ಎಲ್ಲರೂ ಕಲಾವಿದರಿಗೆ ಮೂಗುದಾರ ಹಾಕಲು ಮುಂದಾಗಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿಯೇ ಅನವಶ್ಯಕ- ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತು ಸದ್ಯಕ್ಕೆ ಮುಂಬೈನಲ್ಲಿ ಕೇಳಿ ಬರುತ್ತಿದೆ

ಸದ್ಯಕ್ಕೆ ಮೊದಲ ಹಂತದ ಸಭೆಯನ್ನ ನಡೆಸಿರುವ ಬಾಲಿವುಡ್‌ನ ಖ್ಯಾತ ನಿರ್ಮಾಪಕರು, ಮತ್ತೊಂದು ಸುತ್ತಿನ ಸಭೆಯನ್ನ ನಡೆಸಲಿದ್ದಾರೆ. ಇನ್ನೆರಡು ವಾರದಲ್ಲಿ ಈ ಸಭೆ ನಡೆಯುವ ನಿರೀಕ್ಷೆ ಇದೆ. ಸಭೆಯಲ್ಲಿ ಎಲ್ಲರೂ ಸೇರಿ ಯಾವ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಈಗ ಬಾಲಿವುಡ್ ಸಿನಿಮಾ ಪಂಡಿತರಲ್ಲಿದೆ.


Click it and Unblock the Notifications











