"ದೇಶವನ್ನು ಕೆಟ್ಟದಾಗಿ ತೋರಿಸಿ ಬಾಲಿವುಡ್ ಮಂದಿ ಅವಾರ್ಡ್ ಪಡೆಯುತ್ತಾರೆ"; ಚರ್ಚೆ ಹುಟ್ಟಾಕಿದ ರಿಷಬ್ ಹೇಳಿಕೆ
ನಟ ರಿಷಬ್ ಶೆಟ್ಟಿ ತಮ್ಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದು ಮತ್ತೆ ಸುದ್ದಿಯಲ್ಲಿದ್ದಾರೆ. 'ಕಾಂತಾರ' ಚಿತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ 'ಕಾಂತಾರ'-1 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಆ ಸಿನಿಮಾ ತೆರೆಗೆ ಬರಲಿದೆ.
ನಟನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ರಿಷಬ್ ಶೆಟ್ಟಿ ಉತ್ತಮ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಿವಮ್ಮ ಎನ್ನುವ ಸಿನಿಮಾ ನಿರ್ಮಿಸಿದ್ದರು. ಅದು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೀಗ 'ಲಾಫಿಂಗ್ ಬುದ್ಧ' ಎನ್ನುವ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಮೋದ್ ಶೆಟ್ಟಿ ಈ ಚಿತ್ರ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.

ಆಗಸ್ಟ್ 30ಕ್ಕೆ 'ಲಾಫಿಂಗ್ ಬುದ್ಧ' ಸಿನಿಮಾ ತೆರೆಗೆ ಬರಲಿದೆ. ಬೊಜ್ಜಿನ ಸಮಸ್ಯೆಯಿಂದ ಬಳಲುವ ಪೊಲೀಸ್ ಕಾನ್ಸ್‌ಸ್ಟೇಬಲ್ ಕಥೆ ಚಿತ್ರದಲ್ಲಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ ಜೊತೆ ಸೇರಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಮೆಟ್ರೊ ಸಾಗ ಯೂಟ್ಯೂಬ್ ಸಂದರ್ಶನದಲ್ಲಿ ಬಾಲಿವುಡ್ ಸಿನಿಮಾಗಳ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಸಮಸ್ಯೆಗಳ ಬಗ್ಗೆ ನೀವು ಸಿನಿಮಾಗಳನ್ನು ತೋರಿಸುತ್ತಾ ಬರುತ್ತಿದ್ದಾರೆ. ಗಂಭೀರ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತೆರೆಗೆ ತಂದು ಸಂದೇಶ ನೀಡುವ ಪ್ರಯತ್ನ ಮಾಡುತ್ತಿದ್ದೀರಾ? ಈ ಬಗ್ಗೆ ಹೇಳಿ ಅಂದಾಗ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ. "ಸಮಾಜದ ಆಗುಹೋಗುಗಳ ಬಗ್ಗೆ ಸಿನಿಮಾಗಳಲ್ಲಿ ತೋರಿಸುವುದು ಬಹಳ ಮುಖ್ಯ. ನಮ್ಮ ಮಾಧ್ಯಮ ಸಿನಿಮಾ. ಇದರ ಮೂಲಕ ಹೇಳುವ ಅವಕಾಶ ನನಗಿದೆ"
"ಬಾಲಿವುಡ್ ಸಿನಿಮಾಗಳಲ್ಲಿ ಭಾರತದ ಬಗ್ಗೆ ತುಂಬಾ ಕೆಟ್ಟದಾಗಿ ಕೇವಲವಾಗಿ ತೋರಿಸಿ ಆರ್ಟ್ ಫಿಲ್ಮ್ಸ್ ಎಂದು ಹೇಳಿ ಹೊರ ದೇಶಗಳ ಚಿತ್ರೋತ್ಸವಗಳಲ್ಲಿ ಅವಾರ್ಡ್ ಗೆದ್ದು ರೆಡ್ ಕಾರ್ಪೆಟ್‌ಗೆ ಹೋಗಿ ಬಂದಿರುವುದು ನೋಡಿದ್ದೇನೆ. ಆದರೆ ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹಾಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು. ನಮ್ಮಲ್ಲಿರುವ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ ಎಂದುಕೊಳ್ಳುತ್ತೇನೆ"
"ಯಾವುದೇ ವಿಚಾರ ಯಾರ ಮನಸ್ಸಿಗೂ ನೋವಾಗಬಾರದು. ಯಾರಿಗೂ ನೆಗೆಟಿವ್ ಇಂಪ್ಯಾಕ್ಟ್ ಆಗಬಾರದು. ಹಾಗಾಗಿ ಪ್ರತಿವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಯಾರಿಗೂ ನೋವಾಗದಂತೆ ಅದನ್ನು ತೋರಿಸಬೇಕು ಎಂದುಕೊಳ್ಳುತ್ತೇನೆ. 'ಲಾಫಿಂಗ್ ಬುದ್ಧ' ಚಿತ್ರದಲ್ಲೀ ಪೊಲೀಸ್ ಇಲಾಖೆ ಬಗ್ಗೆ ಅಲ್ಲ. ಆತನ ಬೊಜ್ಜಿನ ಸಮಸ್ಯೆ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ" ಎಂದಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ರಿಷಬ್ ಹೇಳಿದ ಬಾಲಿವುಡ್ ಸಿನಿಮಾಗಳು ಯಾವುದು? ಯಾವ ಚಿತ್ರದಲ್ಲಿ ದೇಶವನ್ನು ಕೆಟ್ಟದಾಗಿ ತೋರಿಸಿದ್ದಾರೆ ಎಂದು ಕೆಲ ಉತ್ತರ ಭಾರತದ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಆದರೆ ಸಾಕಷ್ಟು ಜನ ರಿಷಬ್ ಹೇಳಿಕೆಯನ್ನು ಸಮರ್ಥಿಸಿಕೊಂಡು ಬೆಂಬಲ ಸೂಚಿಸುತ್ತಿದ್ದಾರೆ.
ಇನ್ನು ಅಕ್ಟೋಬರ್‌ನಲ್ಲಿ ರಾಷ್ಟ್ರಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ 70ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಂದು ಎಲ್ಲಾ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಪತ್ನಿ ಸಮೇತ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ.


Click it and Unblock the Notifications











