ಲಾರೆನ್ಸ್ ಬಿಷ್ಣೋಯ್ & ಗ್ಯಾಂಗ್‌ನಿಂದ ನನ್ನ ಪ್ರಾಣಕ್ಕೆ ಸಂಚಕಾರ- ಸಲ್ಮಾನ್ ಖಾನ್...!
ಕೇಳೊದಕ್ಕೆ ಇದು ವಿಚಿತ್ರವಾದ ಕಥೆ. ಆದ್ರೆ ಸತ್ಯಕಥೆ. ಈ ಸತ್ಯಕಥೆಯ ನಾಯಕ ಸಲ್ಮಾನ್ ಖಾನ್ ಆದರೆ, ಖಳನಾಯಕ ಲಾರೆನ್ಸ್ ಬಿಷ್ಣೋಯ್. ಈ ಕಥೆಯಲ್ಲಿ ಯಾವತ್ತು ಏನಾಗುತ್ತೆ ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ಸದ್ಯಕ್ಕೆ ಸಲ್ಮಾನ್ ಖಾನ್ ,ತಮಗೆ ಯಾರ ಮೇಲೆ ಅನುಮಾನ ಇದೆ ಎಂಬುದನ್ನು ತಿಳಿಸಿದ್ದಾರೆ. ಘಟನೆ ನಡೆದ ದಿನ ಏನಾಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ .. ಏಪ್ರಿಲ್ 14ರಂದು ನಸುಕಿನ ವೇಳೆ ಬಂದ ಇಬ್ಬರು ಕಿಡಿಗೇಡಿಗಳು ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ್ದರು. ಸಲ್ಮಾನ್ ಖಾನ್ ಮನೆಯ ಮುಂದೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ವಿಕ್ಕಿ ಗುಪ್ತಾ (24), ಸಾಗರ್ ಪಾಲ್ (21) ಸುಭಾಷ್ ಚಂದರ್ (37)ಮತ್ತು ಅನುಜ್ ಥಾಪನ್ (32) ಅವರನ್ನ ಬಂಧಿಸಿದ್ದರು.

ಆದರೆ.. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಇಲ್ಲಿಯವರೆಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಆದರೆ ಈಗ ಜುಲೈ ಮೊದಲ ವಾರದಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಸಲ್ಲಿಸಿದ್ದ 1,735 ಪುಟಗಳ ಚಾರ್ಜ್ಶೀಟ್ ನಲ್ಲಿರುವ ಸಲ್ಮಾನ್ ಖಾನ್ ಹೇಳಿಕೆಯ ವಿವರ ಬಹಿರಂಗವಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ವಿಚಾರಣೆ ವೇಳೆ ಸಲ್ಲು ನೀಡಿರುವ ಹೇಳಿಕೆಯ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.
ಅಂದು ಮುಂಜಾನೆ ನನಗೆ ಪಟಾಕಿ ರೀತಿಯ ಸದ್ದು ಕೇಳಿಸಿತು.ಸುಮಾರು ಬೆಳಗ್ಗೆ 4.55 ಗಂಟೆ ಹೊತ್ತಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು. ಈ ಮೊದಲು ಕೂಡ ನನಗೆ ಮತ್ತು ನನ್ನ ಕುಟುಂಬದವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿತ್ತು. ಮಾಧ್ಯಮಗಳ ಮೂಲಕ ಲಾರೆನ್ಸ್ ಬಿಷ್ಣೋಯ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂಬುದು ತಿಳಿಯಿತು. ಈ ಹಿಂದೆ ಕೂಡ ಸಂದರ್ಶನವೊಂದರಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಗ್ಯಾಂಗ್ ಸದಸ್ಯರು ನನ್ನನ್ನು ಮತ್ತು ನನ್ನ ಸಂಬಂಧಿಕರನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದ. ಹಾಗಾಗಿ, ಲಾರೆನ್ಸ್ ಬಿಷ್ಣೋಯ್ ತನ್ನ ಗ್ಯಾಂಗ್ ಸದಸ್ಯರ ಸಹಾಯದಿಂದ ನನ್ನ ಕುಟುಂಬ ಸದಸ್ಯರು ಒಳಗೆ ಮಲಗಿದ್ದಾಗ ಗುಂಡಿನ ದಾಳಿ ನಡೆಸಿ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಯೋಜಿಸಿ ದಾಳಿ ನಡೆಸಿದ್ದಾನೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ ಸಲ್ಮಾನ್ ಖಾನ್.

ಈ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಒಳಗೆ ನುಸುಳುವ ಪ್ರಯತ್ನ ಕೂಡ ಈ ಹಿಂದೆ ಆಗಿತ್ತು. ನಕಲಿ ಗುರುತಿನ ಚೀಟಿ ತೋರಿಸಿ ಇಂಥ ಕೃತ್ಯ ಮಾಡಲಾಗಿತ್ತು. ಆ ಬಗ್ಗೆಯೂ ಕೂಡ ಸಲ್ಮಾನ್ ಖಾನ್ ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.


Click it and Unblock the Notifications











