'ಬಾಹುಬಲಿ' ಚಿತ್ರದಲ್ಲಿ ಶ್ರೀದೇವಿ ಯಾಕೆ ನಟಿಸಲಿಲ್ಲ, ಅಸಲಿ ಕಾರಣ ಬಿಚ್ಚಿಟ್ಟ ಬೋನಿ ಕಪೂರ್
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಾಹುಬಲಿ(ಪ್ರಭಾಸ್), ಬಲ್ಲಾಳ ದೇವ(ರಾಣಾ ದಗ್ಗುಬಾಟಿ), ದೇವಸೇನಾ(ಅನುಷ್ಕಾ ಶೆಟ್ಟಿ), ಕಟ್ಟಪ್ಪ(ಸತ್ಯರಾಜ್), ಶಿವಗಾಮಿ(ರಮ್ಯಾಕೃಷ್ಣ) ಹೀಗೆ ಪ್ರತಿ ಪಾತ್ರ, ನಟಿಸಿದ ಕಲಾವಿದರನ್ನು ಮರೆಯೋಕೆ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಆ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದೆ.
ದಶಕಗಳ ಬಳಿಕ ಮತ್ತೆ ದೊಡ್ಡಮಟ್ಟದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟು ಹಾಕಿದ ಸಿನಿಮಾ ಇದು. ಮುಂದೆ ಹಲವು ಸಿನಿಮಾಗಳು ಇದೇ ಹಾದಿ ಹಿಡಿದವು. ಶಿವರಾಮಿ ಪಾತ್ರದಲ್ಲಿ ರಮ್ಯಾಕೃಷ್ಣ ನಟನೆಯನ್ನು ಯಾರಾದರೂ ಮರೆಯುದುಂಟೆ. ಆಕೆಗೆ ಹೇಳಿ ಮಾಡಿಸಿದಂತಹ ಪಾತ್ರ ಅದು. ಅಂದಹಾಗೆ ಮೊದಲಿಗೆ ಈ ಪಾತ್ರದಲ್ಲಿ ಶ್ರೀದೇವಿ ನಟಿಸಬೇಕಿತ್ತು. ಆಕೆಗೆ ಕಥೆ ಹೇಳಲಾಗಿತ್ತು. ಆಕೆ ಒಪ್ಪಿದ್ದರು. ಆದರೆ ಬಳಿಕ ಆಕೆಯ ಡಿಮ್ಯಾಂಡ್ ಕೇಳಿ ಸುಮ್ಮನಾದೆವು ಎಂದು ಮೌಳಿ ಹೇಳಿದ್ದರು.

ರಾಜಮೌಳಿ ಹೇಳಿಕೆ ಬಗ್ಗೆ ಇದೀಗ ಶ್ರೀದೇವಿ ಪತಿ ನಿರ್ಮಾಪಕ ಬೋನಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಶ್ರೀದೇವಿ ಯಾವುದೇ ಡಿಮ್ಯಾಂಡ್ ಮಾಡಲಿಲ್ಲ. ನಿರ್ಮಾಪಕರು ಹಣ ಉಳಿಸಲು ಮಾಡಿದ ನಾಟಕ ಅದು. ರಾಜಮೌಳಿ ಬಳಿ ಶ್ರೀದೇವಿ ಬಗ್ಗೆ ನಿರ್ಮಾಪಕರು ಇಲ್ಲ ಸಲ್ಲದ್ದು ಹೇಳಿದ್ದಾರೆ. ಅದನ್ನು ಮೌಳಿ ನಂಬಿ ಆ ರೀತಿ ಮಾತನಾಡಿದ್ದಾರೆ ಅಷ್ಟೇ ಎಂದು ಬೋನಿ ಕಪೂರ್ ತಿಳಿಸಿದ್ದಾರೆ. ಗೇಮ್ ಚೇಂಜರ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
"ರಾಜಮೌಳಿ ಚಿತ್ರದಲ್ಲಿ ಶ್ರೀದೇವಿ ನಟಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ರಾಜಮೌಳಿ ಅಂದು ಶ್ರೀದೇವಿಗೆ ಮಾಡಿದ ಮೆಸೇಜ್ ಇನ್ನು ನನ್ನ ಬಳಿ ಇದೆ. ಆಕೆ ಜೊತೆ ಅಂದು ರಾಜಮೌಳಿ ಮಾತನಾಡಿದ ಬಳಿಕ ನಿಮ್ಮ ಮೇಲಿನ ಗೌರವ ಹೆಚ್ಚಾಯಿತು ಎಂದಿದ್ದರು. ನಿರ್ಮಾಪಕರು ಮಾಡಿದ ಎಡವಟ್ಟಿನಿಂದ ಆ ಚಿತ್ರದಲ್ಲಿ ಆಕೆ ನಟಿಸಲಿಲ್ಲ" ಎಂದು ಬೋನಿ ಕಪೂರ್ ಹೇಳಿದ್ದಾರೆ.

ಅಷ್ಟಕ್ಕೂ 'ಬಾಹುಬಲಿ' ಸಿನಿಮಾ ಮಾತುಕತೆ ವೇಳೆ ಏನಾಯ್ತು ಎಂದು ಬೋನಿ ಕಪೂರ್ ನೆನಪಿಸಿಕೊಂಡಿದ್ದಾರೆ. "ರಾಜಮೌಳಿ ನಮ್ಮ ಮನೆಗೆ ಬಂದು ಚಿತ್ರದ ಬಗ್ಗೆ ಚರ್ಚಿಸಿದ್ದರು. ಮೌಳಿ ಮಾತನಾಡಿ ಹೋದ ಬಳಿಕ ನಿರ್ಮಾಪಕರು ಬಂದು 'ಇಂಗ್ಲೀಷ್ ವಿಂಗ್ಲೀಷ್' ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಕಮ್ಮಿ ಸಂಭಾವನೆ ಕೊಡ್ತೀವಿ ಅಂದ್ರು. ಆಕೆ ನಿಮಗೆ ಸಮಸ್ಯೆ ಆಗುತ್ತಿರಲಿಲ್ಲ. ಆಕೆ ನಟಿಸಿದ್ದ ನಿಮ್ಮ ಚಿತ್ರಕ್ಕೆ ಹಿಂದಿ ಮತ್ತು ತಮಿಳು ಎರಡರಲ್ಲೂ ಮೈಲೇಜ್ ಸಿಗುತ್ತಿತ್ತು. ನಿರ್ಮಾಪಕರು ಶ್ರೀದೇವಿ ಬಳಿ ಇಟ್ಟ ಆಫರ್ ಬಗ್ಗೆ ರಾಜಮೌಳಿಗೆ ಎಂದಿಗೂ ಹೇಳಲಿಲ್ಲ ಅನಿಸುತ್ತೆ. ಹೋಟೆಲ್‌ನ ಸಂಪೂರ್ಣ ಫ್ಲೋರ್ ಬುಕ್ ಮಾಡು ಹೇಳಿದ್ದರಂತೆ. ಅದೆಲ್ಲಾ ಸುಳ್ಳು. ನಮ್ಮ ಮಕ್ಕಳಿಗೆ ರಜೆ ಇದ್ದಾಗ ಸುದೀರ್ಘ ಶೆಡ್ಯೂಲ್ ಪ್ಲ್ಯಾನ್ ಮಾಡುವಂತೆ ಕೇಳಿದ್ದೆವು ಅಷ್ಟೆ" ಎಂದಿದ್ದಾರೆ.
"ರಾಜಮೌಳಿ ಬಳಿ ನಿರ್ಮಾಪಕರು ಸುಳ್ಳು ಹೇಳಿದ್ದಾರೆ ಅನ್ನಿಸುತ್ತೆ. ರಾಜಮೌಳಿ ಸಂದರ್ಶನದಲ್ಲಿ ಶ್ರೀದೇವಿ ಬಗ್ಗೆ ಹೇಳಿದ್ದೆಲ್ಲಾ ಸುಳ್ಳು. ನಿರ್ಮಾಪಕ ಶೋಬು ಈ ರೀತಿ ಗೊಂದಲ ಸೃಷ್ಟಿಸಿತ್ತು. ಹಣ ಉಳಿಸಲು ಹೀಗೆ ಮಾಡಿರಬಹುದು. ಶ್ರೀದೇವಿಗೆ ವೃತ್ತಿಪರತೆ ಇರದೇ ಇದ್ದಿದ್ದರೆ ದೊಡ್ಡ ಸಂಸ್ಥೆಗಳಲ್ಲಿ ನಟಿಸೋಕೆ ಸಾಧ್ಯವಾಗುತ್ತಿರಲಿಲ್ಲ" ಎಂದು ಬೋನಿ ಕಪೂರ್ ವಿವರಿಸಿದ್ದಾರೆ.
'ಬಾಹುಬಲಿ' ಚಿತ್ರದಲ್ಲಿ ಮೊದಲಿಗೆ ಶಿವಗಾಮಿ ಪಾತ್ರಕ್ಕೆ ರಮ್ಯಾಕೃಷ್ಣ ಸೂಕ್ತ ಎಂದುಕೊಂಡೆವು. ಆದರೆ ಶ್ರೀದೇವಿ ನಟಿಸಿದರೆ ದೊಡ್ಡಮಟ್ಟಕ್ಕೆ ರೀಚ್ ಆಗುತ್ತದೆ ಎಂದುಕೊಂಡು ಆಕೆಯನ್ನು ಸಂಪರ್ಕಿಸಿದ್ದೆವು. ನಟಿಸೋಕೆ ಒಪ್ಪಿದರು. ಕೇಳಿದ ಸಂಭಾವನೆ ಕೊಡಲು ನಿರ್ಮಾಪಕರು ಸಿದ್ಧರಿದ್ದರು. ಆದರೆ ಆಕೆ ಇಟ್ಟ ಷರತ್ತುಗಳನ್ನು ಒಪ್ಪಲು ಸಾಧ್ಯವಾಗಲಿಲ್ಲ. ಅದಕ್ಕೆ ಆಕೆಯನ್ನು ಕೈಬಿಟ್ಟು ರಮ್ಯಾಕೃಷ್ಣ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದು ಸಂದರ್ಶನದಲ್ಲಿ ರಾಜಮೌಳಿ ಹೇಳಿದ್ದರು.


Click it and Unblock the Notifications











