ವ್ಯಾಯಾಮ ಇಲ್ಲದೇ 25 ಕೆಜಿ ತೂಕ ಇಳಿಸಿದ್ದೇಗೆ ಖ್ಯಾತ ನಿರ್ಮಾಪಕ?
ಒಮ್ಮೆ ತೂಕ ಹೆಚ್ಚಿಸಿಕೊಂಡರೆ ಇಳಿಸುವುದು ಬಹಳ ಕಷ್ಟ. ಕೆಲವರು ತೂಕ ಇಳಿಸುವ ಸಾಹಸಕ್ಕೆ ಕೈ ಹಾಕಿ ಸಾಧ್ಯವಾಗದೇ ಬಿಟ್ಟುಬಿಡುತ್ತಾರೆ. ಬಾಯಿ ಕಟ್ಟುವುದು, ವ್ಯಾಯಾಮ, ಜಿಮ್ ಮಾಡುವುದು ಕೆಲವರಿಗೆ ನಿಜಕ್ಕೂ ಕಷ್ಟದ ಕೆಲಸ. ಒಂದೆರಡು ದಿನ ಕಷ್ಟಬಿದ್ದು ಬಳಿಕ ಆಗಲ್ಲ ಎಂದು ಕೈ ಎತ್ತಿಬಿಡುತ್ತಾರೆ.
ಬೊಜ್ಜಿನ ಸಮಸ್ಯೆಯಿಂದ ಕೆಲವರು ಬಳಲುತ್ತಿದ್ದರೂ ತೂಕ ಕಳೆದುಕೊಳ್ಳುವ ಮನಸ್ಸು ಮಾಡುವುದಿಲ್ಲ. ಸೆಲೆಬ್ರೆಟಿಗಳು ಇದಕ್ಕೆ ಹೊರತಲ್ಲ. ದೇಹ ತೂಕ ಹೆಚ್ಚಿಸಿಕೊಂಡ ಅಂದ ಕಳೆದುಕೊಂಡು ಚಿತ್ರರಂಗದಿಂದ ದೂರಾಗಿರುವವರು ಇದ್ದಾರೆ. ಅಂದಹಾಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ದಿಢೀರನೆ 25 ಕೆಜಿ ತೂಕ ಇಳಿಸಿ ಸಣ್ಣಗಾಗಿಬಿಟ್ಟಿದ್ದಾರೆ. ಗುರುತು ಹಿಡಿಯಲು ಸಾಧ್ಯವಾಗದಷ್ಟು ಬದಲಾಗಿದ್ದಾರೆ. ಕೆಲವರಿಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕ ಬೋನಿ ಕಪೂರ್. ಹಿಂದಿ ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಜಿಮ್‌ಗೆ ಹೋಗದೇ ಹೆಚ್ಚು ವ್ಯಾಯಾಮ ಇಲ್ಲದೇ ಬೋನಿ ಕಪೂರ್ ತೂಕ ಇಳಿಸಿಕೊಂಡಿದ್ದಾರೆ ಎನ್ನುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ತೂಕ ಇಳಿಸಬೇಕು ಅಂದ್ರೆ ಡಯೆಟ್ ಮಾತ್ರವಲ್ಲ, ವ್ಯಾಮಾಯ ಸಹ ಬಹಳ ಮುಖ್ಯ. ಈಗ ಜಿಮ್‌ನಲ್ಲಿ ಬೆವರಿಳಿಸುವವರೇ ಹೆಚ್ಚು. ಆದರೆ ಬೋನಿ ಕಪೂರ್ ಬರೀ ಡಯೆಟ್ ಮಾಡಿ ತೂಕ ಇಳಿಸಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಬೋನಿ ಕಪೂರ್ 14 ಕೆಜಿ ತೂಕ ಇಳಿಸಿಕೊಂಡಿದ್ದರು. ಆಗ ABP ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದರು. ಪತ್ನಿ ಶ್ರೀದೇವಿ ತೂಕ ಇಳಿಸುವಂತೆ ನೀಡುತ್ತಿದ್ದ ಸಲಹೆ ಬಗ್ಗೆ ಹೇಳಿದ್ದರು. "ನನ್ನ ಹೆಂಡತಿ (ಶ್ರೀದೇವಿ) ನನಗೆ ಹೇಳಿದ್ದನ್ನು ನಾನು ನೆನಪಾಗುತ್ತದೆ. ನೀವು ನಿಮ್ಮ ಬೋಳುತಲೆಗೆ ಕೂದಲು ಕಸಿ ಮಾಡಿಸಿಕೊಳ್ಳಬೇಕು ಅಂದ್ರೆ ಮೊದಲು ತೂಕ ಇಳಿಸಿಕೊಳ್ಳಿ ಎಂದು ಅವಳು ಹೇಳುತ್ತಿದ್ದಳು. ಹಾಗಾಗಿ ನಾನು ತೂಕ ಇಳಿಸಿಕೊಂಡೆ." ಎಂದು ಬೋನಿ ಕಪೂರ್ ಹೇಳಿದ್ದರು.
ಇನ್ನು ತೂಕ ಇಳಿಸಲು ಬೋನಿ ಕಪೂರ್ ಡಯೆಟ್ ಏನು? ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಬೆಳಿಗ್ಗೆ ತಿಂಡಿ ಬದಲು ಹಣ್ಣಿನ ರಸ ಸೇವಿಸುವುದು. ಮಧ್ಯಾಹ್ನ ಊಟಕ್ಕೆ ಜಾವರ್ ರೋಟಿ. ಅದೇ ರೀತಿ ರಾತ್ರಿ ಡಿನ್ನರ್ ಬದಲಿಗೆ ಲಘು ಸೂಪ್ ಹೀಗೆ ಬೋನಿ ಕಪೂರ್ ಡಯೆಟ್ ಪ್ಲ್ಯಾನ್ ಇರುತ್ತಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೋನಿ ಕಪೂರ್ ತಂದೆ ಸುರಿಂದರ್ ಕಪೂರ್ ಕೂಡ ಸಿನಿಮಾ ನಿರ್ಮಾಪಕರಾಗಿದ್ದರು. ತಂದೆ ಹಾದಿಯಲ್ಲೇ ಬೋನಿ ಕಪೂರ್ ಬಾಲಿವುಡ್ ಪ್ರವೇಶಿಸಿದ್ದರು. 'ಮಿಸ್ಟರ್ ಇಂಡಿಯಾ' ಸಿನಿಮಾ ಮೂಲಕ ಬೋನಿ ಕಪೂರ್ ಬಾಲಿವುಡ್ ಅಂಗಳದಲ್ಲಿ ದೊಡ್ಡದಾಗಿ ಗುರ್ತಿಸಿಕೊಂಡಿದ್ದರು. ಸಹೋದರ ಅನಿಲ್ ಕಪೂರ್ ಆ ಚಿತ್ರದ ಹೀರೊ. ಮುಂದೆ 'ಪ್ರೇಮ್', 'ಜುದೈ', 'ಕಂಪನಿ', 'ಶಕ್ತಿ', 'ವಾಂಟೆಡ್', 'ಮಾಮ್', 'ನೇರ್ಕೊಮಡ ಪಾರ್ವೈ', 'ತುನಿವು', 'ಮೈದಾನ್' ಹೀಗೆ ಹಲವು ಸಿನಿಮಾಗಳನ್ನು ನಿರ್ಮಿಸಿದರು.
1983ರಲ್ಲಿ ಮೋನಾ ಸುರೈ ಕಪೂರ್ ಕೈ ಹಿಡಿದಿದ್ದ ಬೋನಿ ಕಪೂರ್ 1996ರಲ್ಲಿ ಡಿವೋರ್ಸ್ ಪಡೆದಿದ್ದರು. ಅದೇ ವರ್ಷ ನಟಿ ಶ್ರೀದೇವಿ ಕೈ ಹಿಡಿದರು. ದಂಪತಿಗೆ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಇಬ್ಬರು ಮಕ್ಕಳು. ಅವರಿಬ್ಬರು ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಬೋನಿ ಕಪೂರ್ ಯಾವುದೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿಲ್ಲ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











