ದುಬಾರಿ ಧುರಂಧರ್ ; 3000 ಗಡಿ ದಾಟಿದ ಟಿಕೆಟ್ ದರ, ಆದರೂ ಮುಗಿಬಿದ್ದ ಜನ - ಹೌಸ್‌ಫುಲ್, ಹೌಸ್‌ಫುಲ್, ಹೌಸ್‌ಫುಲ್
ಸಿನಿಮಾ ಈಗ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ವ್ಯಾಪಾರ ಆಗಿದೆ. ಈ ಹಿನ್ನೆಲೆ ಒಂದು ಕಾಲದಲ್ಲಿ ಚಿತ್ರರಂಗದ ಬೆನ್ನೆಲುಬು ಆಗಿದ್ದ ಮಧ್ಯಮ ವರ್ಗ ಮತ್ತು ಬಡ ಕುಟುಂಬದ ಹಲವರು ಚಿತ್ರಮಂದಿರದಿಂದ ವಿಮುಖರಾಗುತ್ತಿದ್ದಾರೆ. ಇಂದು ಬದಲಾದ ಈ ಕಾಲದಲ್ಲಿ ಸಿನಿಮಾ ಪ್ರೀತಿ ಸೆಕೆಂಡರಿ. ಚಿತ್ರದ ಟಿಕೆಟ್ ರೇಟ್ ಎಷ್ಟು ಎನ್ನುವ ಪ್ರಶ್ನೆಯೇ ಮೊದಲು ಮನದಲ್ಲಿ ಬರುತ್ತೆ.
ಮನೆ ಮಂದಿ ಜೊತೆ ಹೋದರೆ ಎಷ್ಟು ಹಣ ಖರ್ಚಾಗಬಹುದು..? ಆ ಹಣದಲ್ಲಿ ಇಡೀ ವಾರದ ದಿನಸಿ ಖರೀದಿ ಮಾಡಬಹುದು ಅಥವಾ ಮಕ್ಕಳ ಆಟ-ಪಾಠದ ಖರ್ಚಾದರೂ ನೋಡಿಕೊಳ್ಳಬಹುದು ಎನ್ನುವ ಆಲೋಚನೆ ಹಲವರಿಗೆ ಬರುತ್ತೆ. ಈ ಆರ್ಥಿಕ ಹಿಂಜರಿಕೆಯೇ ಇಂದು ಸಾಮಾನ್ಯ ಜನರನ್ನು ಚಿತ್ರಮಂದಿರಗಳಿಂದ ದೂರ ಮಾಡಿದೆ. ಓಟಿಟಿ ಬಿಡುಗಡೆಗಾಗಿ ಕಾಯುವಂತೆ ಮಾಡುತ್ತಿದೆ.

ಹಾಗಂಥ ಚಿತ್ರಮಂದಿರದಲ್ಲಿ ಬರುವ ಎಲ್ಲ ಚಿತ್ರಗಳನ್ನು ಸ್ಕೀಪ್ ಮಾಡಲು ಸಾಧ್ಯ ಇಲ್ಲ.ಮನೆಯವರ ಒತ್ತಾಸೆಗೆ ಮಣಿದು, ಚಿತ್ರದ ಕುರಿತು ಕೇಳಿ ಬರುವ ಮೆಚ್ಚುಗೆಯ ಮಾತುಗಳನ್ನು ಕೇಳಿದ ಮೇಲೆ ಬೇಡವೆಂದರೂ ಕೆಲ ಒಮ್ಮೆ ಮನ ಚಿತ್ರಮಂದಿರದ ಅನುಭವಕ್ಕೆ ಹಾತೊರೆಯುತ್ತೆ. ಆದರೆ, ಹೀಗಾದಾಗ ಬಂಡವಾಳಶಾಹಿಗಳು ಪ್ರೇಕ್ಷಕರ ಭಾವನೆಗಳನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತವೆ. ನಿರೀಕ್ಷೆಯನ್ನೂ ಮೀರಿ ಪ್ರೇಕ್ಷಕರಿಂದ ಹಣವನ್ನು ವಸೂಲಿ ಮಾಡುತ್ತವೆ. ಉದಾಹರಣೆಗೆ ''ಧುರಂಧರ್ 2'' ಚಿತ್ರವನ್ನೇ ತೆಗೆದುಕೊಳ್ಳಿ.
ಹೌದು, ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ''ಧುರಂಧರ್ 2'' ಚಿತ್ರದ ಟಿಕೆಟ್ ದರ ಗಗನಕ್ಕೇರಿದೆ ಎಂದು ವರದಿ ಮಾಡಿತ್ತು. ಬೆಂಗಳೂರಿಗರೇ ಎಚ್ಚರ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತೆ ಎಂದು ಎಚ್ಚರಿಕೆಯನ್ನು ಕೂಡ ನಮ್ಮ ವರದಿ ಮೂಲಕ ನೀಡಲಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿ ''ಧುರಂಧರ್ 2'' ಚಿತ್ರದ ಮಾರ್ಚ್ 18ರ ಪೇಡ್ ಪ್ರಿವ್ಯೂವ್ ಟಿಕೆಟ್‌ಗಳು 2000 ದಿಂದ 2300ರವರೆಗೆ ಬಿಕರಿಯಾಗುತ್ತಿವೆ. ಕಡಿಮೆ ಅಂದರೂ ಒಂದು ಟಿಕೆಟ್‌ಗೆ 500 ರೂಪಾಯಿ ಇದೆ.
ಆದರೂ ಕೂಡ ಹಲವರು ಕ್ಯಾರೇ ಎನ್ನದೇ ಟಿಕೆಟ್ ಖರೀದಿ ಮಾಡಿದ್ದಾರೆ. ಇದರ ಪರಿಣಾಮ ಈಗಾಗಲೇ ಬೆಂಗಳೂರಿನ 40ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗಿದೆ. ಇದೀಗ ಬೆಂಗಳೂರಿನ ಈ ದಾಖಲೆಯನ್ನು ಮುಂಬೈ ಮುರಿದಿದೆ. ಮುಂಬೈನಲ್ಲಿ ಒಂದು ಟಿಕೆಟ್‌ನ ಬೆಲೆ 3000 ಗಡಿ ದಾಟಿದೆ.
ಮುಂಬೈನ ಬೊರಿವಲಿಯಲ್ಲಿರುವ ಸ್ಕೈ ಸಿಟಿ ಮಾಲ್‌ನಲ್ಲಿ ಸಂಜೆ 5-30, 6,30 ಮತ್ತು ರಾತ್ರಿ 10-15ರ ಶೋಗಳ ರಿಕ್ಲೈನರ್ ಸೀಟುಗಳಿಗೆ ₹3100 ಬೆಲೆ ಫಿಕ್ಸ್ ಮಾಡಲಾಗಿದೆ. ಅಚ್ಚರಿ ಅಂದರೆ ಈ ಮೂರು ಪ್ರದರ್ಶನದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಕೇವಲ ಮೂರು ಪ್ರದರ್ಶನ ಮಾತ್ರವಲ್ಲ ಈ ಮಾಲ್‌ನಲ್ಲಿ ಮಾರ್ಚ್ 18ರಂದು ''ಧುರಂಧರ್ 2''ಗೆ ಒಟ್ಟು 8 ಶೋಗಳನ್ನು ನೀಡಲಾಗಿದ್ದು ರಾತ್ರಿ 9-30ರ ಶೋ ಕೂಡ ಹೌಸ್ ಫುಲ್ ಆಗಿದೆ. ಉಳಿದ ಶೋಗಳು ಫಾಸ್ಟ್ ಫಿಲ್ಲಿಂಗ್ ಮೋಡ್‌ನಲ್ಲಿವೆ.

ಕೇವಲ ಮುಂಬೈ ಮಾತ್ರವಲ್ಲ ದೆಹಲಿಯಲ್ಲಿ ಕೂಡ ಕಥೆ ಭಿನ್ನವಾಗಿಲ್ಲ. ದೆಹಲಿಯಲ್ಲಿ ₹2400ಕ್ಕೆ ಟಿಕೆಟ್ ಮಾರಾಟವಾಗುತ್ತಿವೆ. ಅಚ್ಚರಿಯ ವಿಷಯವೆಂದರೆ, ಇಷ್ಟೊಂದು ದುಬಾರಿ ದರವಿದ್ದರೂ ಸಹ ಬಹುತೇಕ ಶೋಗಳು ಇಲ್ಲಿಯೂ ಕೂಡ ಈಗಾಗಲೇ ಬಿಕರಿಯಾಗಿವೆ. ಹಣದ ಬಗ್ಗೆ ಚಿಂತೆ ಮಾಡದ ಜನ ಹೇಗಾದರೂ ಮಾಡಿ ಸಿನಿಮಾ ನೋಡಲೇಬೇಕು ಎಂದು ಹಠಕ್ಕೆ ಬಿದ್ದವರಂತೆ ಟಿಕೆಟ್ ಖರೀದಿ ಮಾಡುತ್ತಿದ್ದಾರೆ.
ಒಟ್ನಲ್ಲಿ ಒಂದು ಕಡೆ ಈ ಟಿಕೆಟ್ ದರ ಏರಿಕೆಯಿಂದಾಗಿ ಒಂದು ವರ್ಗ ಹೈರಾಣಾಗಿದ್ದರೆ, ಮತ್ತೊಂದು ಕಡೆ ಹಣ ಎಷ್ಟೇ ಖರ್ಚಾದರೂ ಕೂಡ ಪರವಾಗಿಲ್ಲ, ಚಿತ್ರವನ್ನು ನೋಡಲೇಬೇಕೆಂದು ಇನ್ನೊಂದು ವರ್ಗ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ. ದುಡ್ಡಿದ್ದವರಿಗೆ ''ಧುರಂಧರ್ 2'' ನೋಡುವುದು ಪ್ರತಿಷ್ಠೆಯ ವಿಷಯವಾದರೆ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಚಿತ್ರವನ್ನು ಬೆಳ್ಳಿತೆರೆಯ ಮೇಲೆ ನೋಡುವ ಸಂಭ್ರಮ. ಬಡ ಮತ್ತು ಮಧ್ಯಮ ವರ್ಗದವರಿಗೆ..?


Click it and Unblock the Notifications











