ಮೂತ್ರ ವಿಸರ್ಜನೆ ವಿವಾದ, ಬ್ರಾಹ್ಮಣರೇ, ಪಾಪ ಮಹಿಳೆಯರನ್ನು ಬಿಟ್ಟುಬಿಡಿ ಎಂದ ಅನುರಾಗ್ ಕಶ್ಯಪ್..!
ಪಾಂಚ್, ಬ್ಲ್ಯಾಕ್ ಫ್ರೈಡೇ, ಗುಲಾಲ್, ದೇವ್ ಡಿ, ಗ್ಯಾಂಗ್ಸ್ ಆಫ್ ವಸೈಪುರ್, ರಮನ್ ರಾಘವ್, ಹೀಗೆ ಒಂದಕ್ಕಿಂತೊಂದು ಭಿನ್ನ-ವಿಭಿನ್ನ ಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಸೆಳೆದವರು ಅನುರಾಗ್ ಕಶ್ಯಪ್. ಆದರೆ ಆ ನಂತರ ಅದೇನಾಯ್ತೋ..? ಅನುರಾಗ್ ಕಶ್ಯಪ್ ತಮ್ಮ ಚಿತ್ರಗಳಿಗಿಂತ ವಿವಾದಗಳಿಂದ ಸದ್ದು ಮಾಡಲು ಶುರು ಮಾಡಿದರು. ಚಿತ್ರರಂಗಕ್ಕಿಂತ ರಾಜಕೀಯ ರಂಗದ ಕಡೆ ಹೆಚ್ಚಿನ ಆಸಕ್ತಿ ತೋರಿಸಲು ಪ್ರಾರಂಭಿಸಿದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ತೆಗಳಲು ಶುರು ಮಾಡಿದರು. ಬಲಪಂಥೀಯರ ಕೆಂಗಣ್ಣಿಗೆ ಕೂಡ ಗುರಿಯಾದರು. ಇಂಥಾ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತೆ ವ್ಯಕ್ತಿಯೊಬ್ಬರ ಮಾತುಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದರು.

'ಫುಲೆ' ಚಿತ್ರದ ಬಿಡುಗಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ತಾವು ಬರೆದುಕೊಂಡಿದ್ದ ಬರಹಕ್ಕೆ ಬಂದ ಕಮೆಂಟ್‌ಗೆ ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಎಂದು ಹೇಳಿದ್ದರು. ಈ ಮೂಲಕ ಬ್ರಾಹ್ಮಣರ ಆಕ್ರೋಶಕ್ಕೆ ಅನುರಾಗ್ ಕಶ್ಯಪ್ ಗುರಿಯಾಗಿದ್ದರು.
ಇದೀಗ ಅನುರಾಗ್ ಕಶ್ಯಪ್ ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುರಾಗ್ ಕಶ್ಯಪ್ ಇದು ನನ್ನ ಕ್ಷಮಾಪಣೆ. ನಾನು ಹೇಳಿದ ಮಾತುಗಳಿಗೆ ಅಲ್ಲ, ಬದಲಿಗೆ ನನ್ನ ಪೋಸ್ಟ್‌ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಹರಡಲು ಬಳಸಿಕೊಳ್ಳುತ್ತಿರುವುದಕ್ಕಾಗಿ. ಭಾರೀ ಸಂಸ್ಕಾರವಂತರು ಎಂದು ಕರೆಸಿಕೊಳ್ಳುವ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆಯನ್ನು ಹಾಕುತ್ತಿದ್ದಾರೆ. ಆದರೆ ಹೇಳಿಕೆಗಳು, ಮಾತುಗಳು, ಈ ರೀತಿಯ ಬೆದರಿಕೆಗೆ ಅರ್ಹವಲ್ಲ, ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ನಾನು ಅದನ್ನು ವಾಪಸ್ ಪಡೆಯುವುದೂ ಇಲ್ಲ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಮುಂದುವರೆದು ನಿಮಗೆ ಬಯ್ಯಬೇಕು ಅಂದರೆ ನನ್ನನ್ನೂ ಬೈಯಿರಿ, ಆದರೆ ನನ್ನ ಕುಟುಂಬದವರನ್ನು ಯಾಕೆ ಎಳೆದು ತರುತ್ತೀರಿ, ಅವರು ಏನು ಹೇಳಿಲ್ಲ, ಯಾವತ್ತು ಹೇಳುವುದು ಇಲ್ಲ, ಬ್ರಾಹ್ಮಣರೇ, ಪಾಪಾ ಮಹಿಳೆಯರನ್ನು ಬಿಟ್ಟು ಬಿಡಿ, ಇಷ್ಟು ಸಂಸ್ಕಾರ ಶಾಸ್ತ್ರಗಳಲ್ಲಿಯೂ ಇದೆ,ಮನುವಾದದಲ್ಲಿ ಇಲ್ಲ ಅಷ್ಟೇ. ನೀವು ಎಂತಹ ಬ್ರಾಹ್ಮಣರು ಎನ್ನುವುದನ್ನು ನೀವೇ ನಿರ್ಧರಿಸಿಕೊಳ್ಳಿ, ಉಳಿದಂತೆ ನನ್ನ ಕಡೆಯಿಂದ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ ಅನುರಾಗ್ ಕಶ್ಯಪ್.
ಹೀಗೆ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯದ ಕ್ಷಮೆಯನ್ನೇನೋ ಕೇಳಿದ್ದಾರೆ. ಆದರೆ ಈ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಬದಲಿಗೆ ಇನ್ನು ಹೆಚ್ಚಾಗುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಅಶುತೋಶ್ ದುಬೆ ಎಂಬ ವಕೀಲರು ಅನುರಾಗ್ ಕಶ್ಯಪ್ ವಿರುದ್ಧ ಮುಂಬೈನ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲ ಮಹಾರಾಷ್ಟ್ರದ ಸಿಎಂ ದೇವೆಂದ್ರ ಫಡ್ನವಿಸ್ ಅವರಿಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿರುವ ವಕಳೀರಾದ ಅಶುತೋಶ್ ದುಬೆ, ಅನುರಾಗ್ ಕಶ್ಯಪ್ ಅವರ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯದ ವ್ಯಕ್ತಿಯಾಗಿ ನಾನು ನೊಂದಿದ್ದೇನೆ, ಇಂತಹ ಹೇಳಿಕೆಯಿಂದ ದ್ವೇಷ ಹರಡುತ್ತೆ ಅಲ್ಲದೇ ಸಂವಿಧಾನದಡಿಯಲ್ಲಿ ರಕ್ಷಿಸಲಾದ ಘನತೆ ಮತ್ತು ಸಮಾನತೆಯ ತತ್ವಗಳನ್ನು ಕೂಡ ಉಲ್ಲಂಘಿಸುತ್ತೆ, ಅನುರಾಗ್ ಕಶ್ಯಪ್ ಅವರ ಈ ದ್ವೇಷ ಭರಿತ ಹೇಳಿಕೆಯನ್ನು ಗಮನದಲ್ಲಿಟ್ಕೊಂಡು ಬಿಎನ್‌ಎಸ್‌ನ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ನಾನು ಮುಂಬೈ ಪೊಲೀಸರ ಬಳಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಯಾರು ಕಾನೂನಿಗಿಂತ ಮೇಲಲ್ಲ ಇವರಿಗೆಲ್ಲ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ಮುಂಬೈ ಮಾತ್ರವಲ್ಲದೇ ಇಂದೋರ್‌ನಲ್ಲಿ ಕೂಡ ಅನುರಾಗ್ ಕಶ್ಯಪ್ ವಿರುದ್ದ ದೂರು ದಾಖಲಿಸಲಾಗಿದೆ. ನೀರಜ್ ಯಾಜ್ಞಿಕ್ ಎಂಬುವವರು ಇಂದೋರ್‌ನ ಪಲಾಸಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ವಕ್ಫ್ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ, ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ, ಇಂತಹ ಸಮಯದಲ್ಲಿ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಾಕಾರಿ ಭಾಷೆಯ ಪ್ರಯೋಗ ಮಾಡಿದ್ದಾರೆ, ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಗಳು ದೇಶದ್ರೋಹ ಮತ್ತು ಧರ್ಮ ದ್ರೋಹದ ವರ್ಗಕ್ಕೆ ಸೇರುತ್ತೆ ಎಂದು ಕಿಡಿ ಕಾರಿದ್ದಾರೆ. ನಾನು ಮೊದಲು ದೇಶಭಕ್ತ, ಆ ನಂತರ ಹಿಂದೂ ಆ ನಂತರ ಬ್ರಾಹ್ಮಣ ನನ್ನ ಭಾವನೆಗಳಿಗೆ ಅನುರಾಗ್ ಕಶ್ಯಪ್ ಅವರ ಹೇಳಿಕೆಗಳಿಂದ ಧಕ್ಕೆಯಾಗಿದೆ ಎಂದು ನೀರಜ್ ಯಾಜ್ಞಿಕ್ ಹೇಳಿದ್ದಾರೆ.
ಇನ್ನು ಅನುರಾಗ್ ಕಶ್ಯಪ್ ವಿರುದ್ದ ಇಂದೋರ್‌ನಲ್ಲಿ ಇಂದು ಪ್ರತಿಭಟನೆಯನ್ನು ಕೂಡ ಮಾಡಲಾಗಿದ್ದು, ಅನುರಾಗ್ ಕಶ್ಯಪ್ ಅವರ ಪ್ರತಿಕೃತಿಯನ್ನು ಶ್ರೀ ಪರಶುರಾಮ ಸೇನೆ ನದಿಗೆ ಎಸೆದಿದೆ. ಈ ಸಮಯದಲ್ಲಿ ಮಾತನಾಡಿರುವ ಪರಶುರಾಮ ಸೇನೆಯ ರಾಜ್ಯಾಧ್ಯಕ್ಷ ಅನೂಪ್ ಶುಕ್ಲಾ ಬ್ರಾಹ್ಮಣ ಸಮುದಾಯದ ವಿರುದ್ದ ಅನುರಾಗ್ ಕಶ್ಯಪ್ ನೀಡಿದ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಇಂತಹ ವ್ಯಕ್ತಿಯನ್ನು ಚರಂಡಿಗೆ ಎಸೆಯಬೇಕು ಎಂದು ಆಕ್ರೋಶವನ್ನು ಹೊರ ಹಾಕಿರುವ ಶುಕ್ಲಾ ಈ ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಅನುರಾಗ್ ಕಶ್ಯಪ್ ಅವರನ್ನು ಪೊಲೀಸರು ಬಂಧಿಸಬೇಕೆಂದು ಹೇಳಿದ್ದಾರೆ.
ಹೀಗೆ ದೇಶದ ನಾನಾ ಭಾಗಗಳಲ್ಲಿ ಅನುರಾಘ್ ಕಶ್ಯಪ್ ವಿರುದ್ದ ಆಕ್ರೋಶದ ಅಲೆ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅನುರಾಗ್ ಕಶ್ಯಪ್ ವಿರುದ್ಧ ಹರಿಹಾಯುತ್ತಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಿಡಿ ಕಾರುತ್ತಿದ್ದಾರೆ. ಇನ್ನೂ ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಹೀಗೆ ನಿಂದಿಸಲಾದ ಫೋಟೊವೊಂದನ್ನು ಅನುರಾಗ್ ಕಶ್ಯಪ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಕೂಡ.
ಇನ್ನುಳಿದಂತೆ 'ಫುಲೆ' ಚಿತ್ರ ನಮ್ಮ ಸಮುದಾಯಕ್ಕೆ ಅವಮಾನ ಮಾಡುತ್ತೆ ಎಂದು ಬ್ರಾಹ್ಮಣ ಸಮುದಾಯದ ಒಂದು ವರ್ಗ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಫುಲೆ ಚಿತ್ರದ ಬಿಡುಗಡೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆ ಫುಲೆ ಚಿತ್ರದ ಬಿಡುಗಡೆಗೆ ತಡೆ ನೀಡಿದ ಸೆನ್ಸಾರ್ ಮಂಡಳಿ ವಿರುದ್ಧ ಅನುರಾಗ್ ಕಶ್ಯಪ್ ಆಕ್ರೋಶ ವ್ಯಕ್ತಪಡಿಸಿದ್ದರು.
ಬ್ರಾಹ್ಮಣರಿಗೆ 'ಫುಲೆ'ಯಿಂದಾಗಿ ಈಗ ಸಮಸ್ಯೆ ಆಗುತ್ತಿದೆ, ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಎಲ್ಲಿಯ ಬ್ರಾಹ್ಮಣ್ಯ ? ನೀವು ಯಾರು? ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಚಿತ್ರದ ಬಗ್ಗೆ ಬ್ರಾಹ್ಮಣರು ಯಾಕೆ ಆಕ್ರೋಶಗೊಂಡಿದ್ದಾರೆ ಎಂದು ಅನುರಾಗ್ ಕಶ್ಯಪ್ ಪ್ರಶ್ನೆಯನ್ನು ಕೇಳಿದ್ದರು.ಜಾತಿ ವ್ಯವಸ್ಥೆ ಈಗ ಅಸ್ತಿತ್ವದಲ್ಲಿದೆಯಾ, ಇಲ್ಲವಾ? ಎಂದು ಕೂಡ ಪ್ರಶ್ನಿಸಿದ್ದರು.
ಮಿಕ್ಕಂತೆ ವಾದ ವಿವಾದಗಳ ನಂತರ, ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ ಬಳಿಕ ಅನಂತ್ ಮಹಾದೇವನ್ ನಿರ್ದೇಶನದ 'ಫುಲೆ' ಚಿತ್ರ ಈ ಏಪ್ರಿಲ್ 25ರಂದು ತೆರೆಗೆ ಬರಲು ಸಿದ್ಧವಾಗಿದೆ. ಪ್ರತೀಕ್ ಗಾಂಧಿ ಮತ್ತು ಪತ್ರಲೇಖಾ ಈ ಚಿತ್ರದಲ್ಲಿ ಜ್ಯೋತಿ ರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಸದ್ಯ ಅನುರಾಗ್ ಕಶ್ಯಪ್ ತಮ್ಮ ಮೂತ್ರ ವಿಸರ್ಜನೆ ಹೇಳಿಕೆಗೆ ಕ್ಷಮೆ ಕೇಳಿದ್ದರೂ ಕೂಡ ಅನೇಕರು ಅನುರಾಗ್ ಕಶ್ಯಪ್ ಅವರನ್ನು ಕ್ಷಮಿಸಲು ಬಿಲ್‌ಕುಲ್ ತಯಾರಿಲ್ಲ. ಮುಂಬರುವ ದಿನಗಳಲ್ಲಿ ಈ ಜನಾಕ್ರೋಶ ಯಾತ್ರೆ ಎಲ್ಲೆಲ್ಲಿ ತಲುಪುತ್ತೆ, ಅನುರಾಗ್ ಕಶ್ಯಪ್ ವಿರುದ್ದ ಎಲ್ಲೆಲ್ಲಿ ಎಫ್‌ಐಆರ್ ಗಳು ದಾಖಲಾಗುತ್ತಾವೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











