ಖ್ಯಾತ ನಟ, ನಿರ್ದೇಶಕ ಮಂಗಲ್ ದಿಲ್ಲೋನ್ ವಿಧಿವಶ: ಚಿತ್ರರಂಗ ದಿಗ್ಭ್ರಮೆ
ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ರಮುಖ ಪಂಜಾಬಿ, ಹಿಂದಿ ಸಿನಿಮಾ ನಿರ್ದೇಶಕ, ನಟ, ನಿರ್ಮಾಪಕ ಮಂಗಲ್ ದಿಲ್ಲೋನ್ ಕೊನೆಯುಸಿರೆಳೆದಿದ್ದಾರೆ, ಭಾನುವಾರ ಲೂಧಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮಂಗಲ್ ದಿಲ್ಲೋನ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯಲ್ಲಿ ಒಂದು ಸಿಖ್ ಕುಟುಂಬದಲ್ಲಿ ಜನ್ಮಿಸಿದ್ದರು. ಉತ್ತರ ಪ್ರದೇಶದಲ್ಲಿರುವ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಮತ್ತೆ ಪಂಜಾಬಿಗೆ ಮರಳಿದರು. ಅಲ್ಲೇ ಮಂಗಲ್ ದಿಲ್ಲೋನ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ತದನಂತರ ದೆಹಲಿಯಲ್ಲಿ ರಂಗಭೂಮಿ ಪ್ರವೇಶಿಸಿದರು. 1980ರಲ್ಲಿ ಆ್ಯಕ್ಟಿಂಗ್‌ನಲ್ಲಿ ಅವರು ಪಿಜಿ ಡಿಪ್ಲೊಮಾ ಪಡೆದರು. 1986ರಲ್ಲಿ 'ಕಥಾ ಸಾಗರ್' ಟಿವಿ ಶೋ ಮೂಲಕ ಮನರಂಜನ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವರ್ಷ 'ಬುನಿಯಾದ್' ಎನ್ನುವ ಮತ್ತೊಂದು ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

'ಜುನೂನ್', 'ಕಿಸ್ಮತ್', 'ಗ್ರೇಟ್ ಮರಾಠ', 'ಗುಟನ್', 'ಸಾಹಿಲ್', 'ಮೌಲಾನಾ ಆಜಾದ್' ಮುಂತಾದ ಟಿವಿ ಶೋಗಳಲ್ಲಿ ತಮ್ಮ ನಟನೆಯಿಂದ ವೀಕ್ಷಕ ಮನಗೆದ್ದರು. 'ಖೂನ್ ಭಾರೀ ಮಾಂಗ್', 'ಜಕ್ಮಿ ಔರತ್', 'ದಯಾವನ್', 'ಕಹನ್ ಹೈ ಕಾನೂನ್', 'ನಾಕಾ ಬಂದೀ', 'ಅಂಬ', 'ಅಕಲ್ಯ', 'ಜನಶೀನ್', 'ಟ್ರೈನ್ ಟೂ ಪಾಕಿಸ್ತಾನ್', 'ದಲಾಲ್' ಮುಂತಾದ ಸಿನಿಮಾಗಳಲ್ಲಿ ಮಂಗಲ್ ದಿಲ್ಲೋನ್ ನಟಿಸಿದರು. 2017ರಲ್ಲಿ 'ತೂಫಾನ್ ಸಿಂಗ್' ಸಿನಿಮಾದಲ್ಲಿ ಕೊನೆಯದಾಗಿ ಅವರು ನಟಿಸಿದ್ದರು.
ಮೊದಲಿಗೆ ಪಂಜಾಬ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಮಂಗಲ್ ದಿಲ್ಲೋನ್ ನಂತರ ಬಾಲಿವುಡ್ ಪ್ರವೇಶಿಸಿದ್ದರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಮನರಂಜನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಪುರಸ್ಕರಿಸಿ ಪಂಜಾಬ್ ಸರ್ಕಾರ 'ಬಾಬಾ ಫರೀದ್ ಪ್ರಶಸ್ತಿ' ನೀಡಿ ಗೌರವಿಸಿತ್ತು. ಮಂಗಲ್ ದಿಲ್ಲೋನ್ ಅಗಲಿಕೆಗೆ ಪಂಬಾಬಿ, ಹಿಂದಿ ಚಿತ್ರರಂಗ, ಕಿರುತೆರೆ ಕಲಾವಿದರು, ತಂತ್ರಜ್ಞರು, ರಾಜಕೀಯ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ.


Click it and Unblock the Notifications











