ಸೋತು ಸುಣ್ಣವಾಗಿರುವ ಆಮೀರ್ ಖಾನ್ ಗೆಲುವಿಗಾಗಿ ದಕ್ಷಿಣದ ನಿರ್ದೇಶಕನಿಗೆ ಮಣೆ
ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಗೆಲುವು, ಸೋತು ಬಹಳ ದಿನ ಉಳಿಯುವುದಿಲ್ಲ. ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟವರು ಸೋತು ಸುಣ್ಣವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಒಮ್ಮೆ ಬಿದ್ದರೆ ಪದೇ ಪದೆ ಏಟು ಬೀಳುತ್ತಲೇ ಇರುತ್ತದೆ. ಬಾಲಿವುಡ್ ಮಿ. ಪರ್ಫೆಕ್ಷನಿಷ್ಟ್ ಆಮೀರ್ ಖಾನ್ ಪರಿಸ್ಥಿತಿ ಕೂಡ ಈಗ ಇದೇ ರೀತಿ ಇದೆ.
'ದಂಗಲ್' ರೀತಿಯ ಸೆನ್ಸೇಷನಲ್ ಸಿನಿಮಾ ಕೊಟ್ಟಿದ್ದ ಆಮೀರ್ ಖಾನ್ ಈಗ ಒಂದೇ ಒಂದು ಗೆಲುವಿಗಾಗಿ ಆಕಾಶ ನೋಡುವಂತಾಗಿದೆ. 'ದಂಗಲ್' ಬಳಿಕ ನಟಿಸಿದ್ದ 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರ ಗೆದ್ದಿತ್ತು. ಆದರೆ ಆ ಚಿತ್ರದಲ್ಲಿ ಮುಖ್ಯವಾದ ಪಾತ್ರವನ್ನಷ್ಟೇ ಆಮೀರ್ ಮಾಡಿದ್ದರು. ಬಳಿಕ ಮಾಡಿದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಭಾರೀ ಪೆಟ್ಟು ಕೊಟ್ಟುಬಿಟ್ಟಿತ್ತು. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು.

ಬಳಿಕ ಬಹಳ ಗ್ಯಾಪ್ ತೆಗೆದುಕೊಂಡು 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಆಮೀರ್ ನಟಿಸಿದ್ದರು. ಆ ಸಿನಿಮಾ ಕೂಡ ಗೆಲ್ಲಲಿಲ್ಲ. ನಿರ್ಮಾಪಕನಾಗಿ ಹಣ ಹೂಡಿ ಕೈ ಸುಟ್ಟುಕೊಂಡಿದ್ದರು. ಸದ್ಯ 'ಸಿತಾರೆ ಜಮೀನ್ ಪರ್' ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ನಟಿಸಿದ್ದಾರೆ. ಜೂನ್ 20ಕ್ಕೆ ಸಿನಿಮಾ ತೆರೆಗೆ ಬರಲಿದೆ. ಆ ಸಿನಿಮಾ ಕೂಡ ಅಷ್ಟೇನು ನಿರೀಕ್ಷೆ ಮೂಡಿಸಿಲ್ಲ. ಇನ್ನು ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಅತಿಥಿ ಪಾತ್ರದಲ್ಲಿ ಆಮೀರ್ ಮಿಂಚಿದ್ದಾರೆ.
'ಕೂಲಿ' ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ ಸಹ ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಆಮೀರ್ ಖಾನ್ ಹೀರೊ ಆಗಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ. ಆದರೆ ಕಾಂಬಿನೇಷನ್ ಪಕ್ಕಾ ಆಗಿದೆ ಎಂದು ಹೇಳಲಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ದಕ್ಷಿಣದ ನಿರ್ದೇಶಕರು ಬಾಲಿವುಡ್ ಸಿನಿಮಾಗಳನ್ನು ನಿರ್ದೇಶನದ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ತಮಿಳು, ತೆಲುಗು, ಕನ್ನಡ ಕೆಲ ನಿರ್ದೇಶಕರು ಬಾಲಿವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಇತ್ತೀಚೆಗೆ ಅಟ್ಲಿ ನಿರ್ದೇಶನದಲ್ಲಿ 'ಜವಾನ್' ಸಿನಿಮಾ ಮಾಡಿ ಶಾರುಖ್ ಖಾನ್ ಗೆದ್ದಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ ಖಾನ್ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದರು. ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರಕ್ಕೆ ಎ. ಆರ್ ಮುರುಗದಾಸ್ ಸಾರಥ್ಯ ವಹಿಸಿದ್ದರು. ಆದರೆ ಸಿನಿಮಾ ಸೋತಿತ್ತು.

ತಮಿಳಿನಲ್ಲಿ ಸೆನ್ಸೇಷನ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಲೋಕೇಶ್ ಕನಕರಾಜ್. ಸೋಲಿಲ್ಲದ ಸರದಾರ ಎಂದೇ ಗುರ್ತಿಸಿಕೊಂಡಿದ್ದಾರೆ. 'ಕೈದಿ', 'ಮಾಸ್ಟರ್' 'ವಿಕ್ರಂ', 'ಲಿಯೋ' ಹೀಗೆ ಒಂದಕ್ಕಿಂತ ಒಂದು ಹಿಟ್ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಮುಂದೆ 'ಕೈದಿ- 2', 'ರೊಲೆಕ್ಸ್' ಸಿನಿಮಾಗಳನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದರ ನಡುವೆ ಆಮೀರ್ ಖಾನ್ ಸಿನಿಮಾ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ.
ಬಹಳ ಹಿಂದೆಯೇ ಆಮೀರ್- ಲೋಕೇಶ್ ಸಿನಿಮಾ ಮಾಡುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದು ನಿಜ ಎಂದು ಈಗ ಭಾರೀ ಚರ್ಚೆ ನಡೀತಿದೆ. ಮುಂದಿನ ವರ್ಷದ ಕೊನೆಗೆ ಸಿನಿಮಾ ಶುರುವಾಗುವ ಸಾಧ್ಯತೆಯಿದೆ. ಇದೊಂದು ಸೂಪರ್ ಹೀರೊ ಆಕ್ಷನ್ ಜಾನರ್ ಸಿನಿಮಾ ಎನ್ನಲಾಗ್ತಿದೆ.
'ಪುಷ್ಪ- 2' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸಿದೆ. ಇದೇ ಖುಷಿಯಾಗಿ ಬಾಲಿವುಡ್ ಅಂಗಳದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ದಕ್ಷಿಣದ ಚಿತ್ರ ನಿರ್ಮಾಣದ ಸಂಸ್ಥೆಗಳು ಬಾಲಿವುಡ್ ಕಲಾವಿದರು ಕಾಸ್ಟ್ ಮಾಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿವೆ. ಈಗಾಗಲೇ ಹೃತಿಕ್ ರೋಷನ್ ಹೀರೊ ಆಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ಘೋಷಿಸಿರುವುದು ಗೊತ್ತೇಯಿದೆ.


Click it and Unblock the Notifications











